ಬೆಂಗಳೂರು: ರೈಲ್ವೆ ಸಂಪರ್ಕವನ್ನು ಸುಧಾರಿಸಲು ಮತ್ತು ಪ್ರಯಾಣಿಕರಿಗೆ ಉತ್ತಮ ಪ್ರಯಾಣದ ಸೌಲಭ್ಯಗಳನ್ನು ಒದಗಿಸಲು ರೈಲ್ವೆ ಮಂಡಳಿಯು ಯಲಹಂಕ–ಅರಸೀಕೆರೆ ನಡುವೆ ಮೆಮು ಸೇವೆಗಳ ಪ್ರಾರಂಭಕ್ಕೆ ಅನುಮೋದನೆ ನೀಡಿದೆ. ಈ ರೈಲುಗಳ ಸಂಚಾರ 14 ಜುಲೈ 2026 ರಿಂದ ಆರಂಭವಾಗಲಿದೆ.
ಇದಕ್ಕೂ ಮುನ್ನ ಜುಲೈ 13 ರಂದು ತಿಪಟೂರು–ಯಲಹಂಕ ಮೆಮು ರೈಲು ವಿಶೇಷ ಕಾರ್ಯಾಚರಣೆ ನಡೆಸಲಿದೆ. ಈ ರೈಲು 08 ಬೋಗಿಗಳನ್ನು ಹೊಂದಿರಲಿದ್ದು, ತಿಪಟೂರಿನಿಂದ ಸಂಜೆ 4-30 ಗಂಟೆಗೆ ಹೊರತು. ರಾತ್ರಿ 8 ಗಂಟೆಗೆ ಯಲಹಂಕವನ್ನು ತಲುಪಲಿದೆ.
ಪ್ರಯಾಣದ ಮಧ್ಯೆ ಈ ರೈಲು ಬನಶಂಕರಿ ಹಾಲ್ಟ್, ಕರಡಿ, ಅರಳಗುಪ್ಪೆ, ಬಾಣಸಂದ್ರ, ಅಮ್ಮಸಂದ್ರ, ಸಂಪಿಗೆ ರೋಡ್, ನಿಟ್ಟೂರು, ಗುಬ್ಬಿ, ಮಲ್ಲಸಂದ್ರ, ಹೆಗ್ಗರೆ ಹಾಲ್ಟ್, ತುಮಕೂರು, ಕ್ಯಾತಸಂದ್ರ, ಹಿರೇಹಳ್ಳಿ, ಡಾಬಸಪೇಟೆ, ನಿಡವಂದ, ಮುದ್ದಲಿಂಗನಹಳ್ಳಿ, ದೊಡ್ಡಬೆಲೆ, ಭೈರನಾಯಕನಹಳ್ಳಿ, ಗೊಲ್ಲಹಳ್ಳಿ, ಚಿಕ್ಕಬಾಣಾವರ, ಯಶವಂತಪುರ ಮತ್ತು ಕೊಡಿಗೇಹಳ್ಳಿ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿವೆ.
66505 ಸಂಖ್ಯೆಯ ರೈಲು ಯಲಹಂಕ–ಅರಸೀಕೆರೆ ಮೆಮು ಜುಲೈ 14 ರಿಂದ ಜಾರಿಗೆ ಬರುವಂತೆ ವಾರದಲ್ಲಿ ಆರು ದಿನಗಳು (ಭಾನುವಾರ ಹೊರತುಪಡಿಸಿ) ಕಾರ್ಯನಿರ್ವಹಿಸಲಿದೆ. ಈ ರೈಲು ಯಲಹಂಕದಿಂದ ಬೆಳಗ್ಗೆ 06:45 ಗಂಟೆಗೆ ಹೊರಟು ಅದೇ ದಿನ 11:00 ಗಂಟೆಗೆ ಅರಸೀಕೆರೆ ಜಂಕ್ಷನ್ ತಲುಪಲಿದೆ.
ಮಾರ್ಗಮಧ್ಯೆ ಇದು ಕೊಡಿಗೇಹಳ್ಳಿ, ಯಶವಂತಪುರ, ಚಿಕ್ಕಬಾಣಾವರ, ಗೊಲ್ಲಹಳ್ಳಿ, ಭೈರನಾಯಕನಹಳ್ಳಿ, ದೊಡ್ಡಬೆಲೆ, ಮುದ್ದಲಿಂಗನಹಳ್ಳಿ, ನಿಡವಂದ, ಡಾಬಸಪೇಟೆ, ಹಿರೇಹಳ್ಳಿ, ಕ್ಯಾತಸಂದ್ರ, ತುಮಕೂರು, ಹೆಗ್ಗರೆ ಹಾಲ್ಟ್ , ಮಲ್ಲಸಂದ್ರ, ಗುಬ್ಬಿ, ನಿಟ್ಟೂರು, ಸಂಪಿಗೆ ರೋಡ್ , ಅಮ್ಮಸಂದ್ರ, ಬಾಣಸಂದ್ರ, ಅರಳಗುಪ್ಪೆ ಮತ್ತಿತರ ಕಡೆಗಳಲ್ಲಿ ನಿಲುಗಡೆಯಾಗಲಿದೆ.
ಮೆಮು ರೈಲುಗಳ ಸಹ 08 ಬೋಗಿಗಳನ್ನು ಹೊಂದಿರಲಿವೆ. ಹೊಸದಾಗಿ ಪರಿಚಯಿಸಲಾದ ಈ ಮೆಮು ಸೇವೆಯು ಯಲಹಂಕ, ಯಶವಂತಪುರ, ತುಮಕೂರು, ತಿಪಟೂರು ಮತ್ತು ಅರಸೀಕೆರೆ ನಡುವೆ ಪ್ರಯಾಣಿಸುವ ಪ್ರಯಾಣಿಕರಿಗೆ ಕೈಗೆಟುಕುವ ಬೆಲೆಯ, ಆರಾಮದಾಯಕ ಮತ್ತು ವಿಶ್ವಾಸಾರ್ಹ ಸಾರಿಗೆ ವಿಧಾನವನ್ನು ಒದಗಿಸಲಿದೆ.
ಅಷ್ಟೇ ಅಲ್ಲದೆ, ಮಾರ್ಗದುದ್ದಕ್ಕೂ ಇರುವ ಹಲವಾರು ಮಧ್ಯಂತರ ನಿಲ್ದಾಣಗಳಿಗೆ ಸಂಪರ್ಕವನ್ನು ಸುಧಾರಿಸಲಿದೆ. ಈ ಸೇವೆಯು ದೈನಂದಿನ ಪ್ರಯಾಣಿಕರಿಗೆ ಹೆಚ್ಚಿನ ಪ್ರಯೋಜನವನ್ನು ನೀಡಲಿದ್ದು, ಕರ್ನಾಟಕದಲ್ಲಿ ಪ್ರಾದೇಶಿಕ ರೈಲು ಸಂಪರ್ಕವನ್ನು ಹೆಚ್ಚಿಸುವ ನಿರೀಕ್ಷೆಯಿದೆ.