ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾವೇರಿ–ಕೃಷ್ಣಾ–ಗೋದಾವರಿ ನದಿ ಜೋಡಣೆ ಯೋಜನೆಗೆ ರಾಜ್ಯದ ಒಪ್ಪಿಗೆ ನೀಡಿರುವುದಾಗಿ ಹೇಳಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ನದಿ ಜೋಡಣೆ ಯೋಜನೆಗೆ ಒಪ್ಪಿಗೆ ನೀಡಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಆದರೆ, ವಾಸ್ತವಾಂಶ ತಿಳಿಯದೆ ಇಂತಹ ಹೇಳಿಕೆಗಳನ್ನು ನೀಡುವುದು ರಾಜ್ಯದ ಹಿತಾಸಕ್ತಿಗೆ ಧಕ್ಕೆ ತರುತ್ತದೆ. ಈ ಯೋಜನೆಯಲ್ಲಿ ಕರ್ನಾಟಕಕ್ಕೆ ಹೆಚ್ಚಿನ ನೀರಿನ ಪಾಲು ಸಿಗಬೇಕು ಎಂಬುದು ನಮ್ಮ ಬೇಡಿಕೆ. ಅದಕ್ಕಾಗಿ ಅಗತ್ಯವಿದ್ದರೆ ಕಾನೂನು ಹೋರಾಟವನ್ನೂ ನಡೆಸಬೇಕು ಎಂದು ಹೇಳಿದರು.
ಬರಗಾಲ ಪರಿಶೀಲನಾ ಸಭೆಗಳ ಹೆಸರಿನಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿರುವ ಮುಖ್ಯಮಂತ್ರಿ, ನೀರಿನ ವಿಷಯದಲ್ಲಿ ಮಾತ್ರ ಬೇಜವಾಬ್ದಾರಿಯಾಗಿ ವರ್ತಿಸುತ್ತಿದ್ದಾರೆ. ಕೃಷ್ಣಾ–ಕಾವೇರಿ–ಗೋದಾವರಿ ನದಿ ಜೋಡಣೆ ಕುರಿತು ಅವರು ನೀಡಿರುವ ಹೇಳಿಕೆ ನೋಡಿದರೆ, ರಾಜ್ಯ ಎದುರಿಸುತ್ತಿರುವ ಜಲ ವಿವಾದಗಳ ಬಗ್ಗೆ ಅವರಿಗೆ ಕನಿಷ್ಠ ಅರಿವೂ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ಕುಮಾರಸ್ವಾಮಿ ಟೀಕಿಸಿದರು.
ನನಗೆ ನದಿ ಜೋಡಣೆ ಯೋಜನೆಗೆ ಯಾವುದೇ ವಿರೋಧವಿಲ್ಲ. ಯೋಜನೆ ಜಾರಿಯಾಗಬೇಕು. ಆದರೆ, ಕಾವೇರಿ ಮತ್ತು ಗೋದಾವರಿ ನದಿಗಳನ್ನು ಜೋಡಿಸಿದರೆ ಕರ್ನಾಟಕಕ್ಕೆ ಎಷ್ಟು ನೀರು ಸಿಗಲಿದೆ ಎಂಬುದನ್ನು ಮೊದಲು ಮುಖ್ಯಮಂತ್ರಿ ತಿಳಿದುಕೊಳ್ಳಬೇಕು. ಈ ಕುರಿತು ಸಂಬಂಧಪಟ್ಟ ಎಂಜಿನಿಯರ್‌ಗಳು ಮತ್ತು ರಾಜ್ಯದ ಪರವಾಗಿ ವಕಾಲತ್ತು ನಡೆಸುತ್ತಿರುವ ವಕೀಲರಿಂದ ಮಾಹಿತಿ ಪಡೆದು ಮಾತನಾಡಬೇಕು ಎಂದು ಸಲಹೆ ನೀಡಿದರು.
ಯೋಜನೆಯಿಂದ ಕರ್ನಾಟಕಕ್ಕೆ ಎಷ್ಟು ನೀರು ದೊರೆಯುತ್ತದೆ ಎಂಬುದು ಸ್ಪಷ್ಟವಾಗದೆ ಇರುವಾಗಲೇ ಒಪ್ಪಿಗೆ ನೀಡಿರುವುದು ಕನ್ನಡಿಗರಿಗೆ ಆಗಿರುವ ದೊಡ್ಡ ಅನ್ಯಾಯ ಎಂದು ಅವರು ಆರೋಪಿಸಿದರು.
ಇಂತಹ ವಿಷಯಗಳ ಬಗ್ಗೆ ಮಾತನಾಡುವ ಮುನ್ನ ನಿಮ್ಮ ಪಕ್ಷದ ಹಿರಿಯ ನಾಯಕರಾದ ಹೆಚ್.ಕೆ. ಪಾಟೀಲ್ ಅವರಿಂದಾದರೂ ಸಲಹೆ ಪಡೆಯಿರಿ ಎಂದು ಮುಖ್ಯಮಂತ್ರಿ ಅವರಿಗೆ ಕುಮಾರಸ್ವಾಮಿ ತಿರುಗೇಟು ನೀಡಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೆಳಗಾವಿಯಲ್ಲಿ, ಗೋದಾವರಿ–ಕೃಷ್ಣಾ–ಕಾವೇರಿ ನದಿ ಜೋಡಣೆ ಯೋಜನೆಗೆ ಕರ್ನಾಟಕ ಒಪ್ಪಿಗೆ ನೀಡಿದ್ದು, ಕೇಂದ್ರ ಸರ್ಕಾರ ಇದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಲಿದೆ. 1 ಲಕ್ಷ ಕೋಟಿ ರೂಪಾಯಿ ವೆಚ್ಚದ ಯೋಜನೆಯಲ್ಲಿ ಶೇ.10ರಷ್ಟು ಹಣವನ್ನು ರಾಜ್ಯಗಳು ಹಾಗೂ ಉಳಿದ ಹಣವನ್ನು ಕೇಂದ್ರ ಸರ್ಕಾರ ಭರಿಸಲಿದೆ ಎಂದು ಹೇಳಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, 2018–19ರಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಕರ್ನಾಟಕದ ಹಿತಾಸಕ್ತಿಯನ್ನು ಕಾಪಾಡುವುದಾಗಿ ಭರವಸೆ ನೀಡಿದ್ದರು. ಆದರೆ, ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ (NWDA) 2022ರಲ್ಲಿ ಸಲ್ಲಿಸಿದ ವರದಿಯಲ್ಲಿ ಒಟ್ಟು 247 ಟಿಎಂಸಿ ಅಡಿ ನೀರು ಲಭ್ಯವಿದೆ ಎಂದು ಅಂದಾಜಿಸಿದ್ದರೂ, ಕರ್ನಾಟಕಕ್ಕೆ ಒಂದು ಹನಿ ನೀರನ್ನೂ ಹಂಚಿಕೆ ಮಾಡಿರಲಿಲ್ಲ ಎಂದು ಹೇಳಿದರು.
ಆ ವರದಿಯಲ್ಲಿ ಆಂಧ್ರಪ್ರದೇಶಕ್ಕೆ 90 ಟಿಎಂಸಿ, ತೆಲಂಗಾಣಕ್ಕೆ 60 ಟಿಎಂಸಿ ಮತ್ತು ತಮಿಳುನಾಡಿಗೆ 60 ಟಿಎಂಸಿ ನೀರನ್ನು ಹಂಚಿಕೆ ಮಾಡಲಾಗಿತ್ತು ಎಂದು ಅವರು ವಿವರಿಸಿದರು.
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದ ಬಳಿಕ, 2023–24ರ ಎನ್‌ಡಬ್ಲ್ಯೂಡಿಎ ವರದಿಯಲ್ಲಿ ಕರ್ನಾಟಕಕ್ಕೆ 15 ಟಿಎಂಸಿ ನೀರನ್ನು ಹಂಚಿಕೆ ಮಾಡಲಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.
ಆದರೆ, ಇತ್ತೀಚಿನ ವರದಿಯಲ್ಲಿ ಒಟ್ಟು ಲಭ್ಯವಿರುವ ನೀರಿನ ಪ್ರಮಾಣವನ್ನು 247 ಟಿಎಂಸಿಯಿಂದ 147 ಟಿಎಂಸಿಗೆ ಇಳಿಸಲಾಗಿದೆ. ಈ ಪೈಕಿ ತೆಲಂಗಾಣಕ್ಕೆ 45 ಟಿಎಂಸಿ, ಆಂಧ್ರಪ್ರದೇಶಕ್ಕೆ 44 ಟಿಎಂಸಿ ಹಾಗೂ ತಮಿಳುನಾಡಿಗೆ 40 ಟಿಎಂಸಿ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.
ಕರ್ನಾಟಕಕ್ಕೆ ಹಂಚಿಕೆಯಾಗಿರುವ 15 ಟಿಎಂಸಿ ನೀರನ್ನು ಮಲಪ್ರಭಾ ಕಮಾಂಡ್ ಪ್ರದೇಶದಲ್ಲಿ ಮಾತ್ರ ಬಳಸಲು ಅನುಮತಿ ನೀಡಲಾಗಿದೆ. ಅಲ್ಲದೆ, ಈ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಮಾತ್ರ ಬಳಸಬೇಕು, ನೀರಾವರಿಗೆ ಬಳಸುವಂತಿಲ್ಲ ಎಂಬ ಷರತ್ತು ವಿಧಿಸಲಾಗಿದೆ. ಕೈಗಾರಿಕಾ ಬಳಕೆಗೆ ಮಾತ್ರ ಸ್ವಲ್ಪ ಪ್ರಮಾಣದಲ್ಲಿ ಅವಕಾಶವಿದ್ದು, ಅಂತಿಮವಾಗಿ ರಾಜ್ಯಕ್ಕೆ ಕೇವಲ 2 ಟಿಎಂಸಿ ನೀರಿನಷ್ಟೇ ಉಪಯೋಗವಾಗಲಿದೆ ಎಂದು ಕುಮಾರಸ್ವಾಮಿ ಹೇಳಿದರು.
ಈ ವಿಷಯದ ಕುರಿತು ಕೇಂದ್ರ ಜಲ ಆಯೋಗ ಅಥವಾ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಯಲ್ಲಿ ಯಾವುದೇ ಚರ್ಚೆ ನಡೆದಿದೆಯೇ" ಎಂದು ಅವರು ಪ್ರಶ್ನಿಸಿದರು.
"ನೀರಿನ ಹಂಚಿಕೆ ಎಂಬುದು ರಿಯಲ್ ಎಸ್ಟೇಟ್ ವ್ಯವಹಾರದಂತಲ್ಲ. ಕರ್ನಾಟಕಕ್ಕೆ ನ್ಯಾಯಯುತ ಪಾಲು ದೊರಕಿಸಿಕೊಳ್ಳಲು ಅಗತ್ಯವಿದ್ದರೆ ಕಾನೂನು ಹೋರಾಟ ಸೇರಿದಂತೆ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಬೇಕು. ನಾವು ಯೋಜನೆಗೆ ವಿರೋಧಿಗಳಲ್ಲ. ಆದರೆ ರಾಜ್ಯಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದರು.
ಇದೇ ವೇಳೆ, ತುಂಗಭದ್ರಾ ಜಲಾಶಯದ ನೂತನ ಕ್ರೆಸ್ಟ್ ಗೇಟ್ ಉದ್ಘಾಟನೆ ಸಂದರ್ಭದಲ್ಲಿ ತೆಲಂಗಾಣ ಮತ್ತು ಆಂಧ್ರಪ್ರದೇಶ ಮುಖ್ಯಮಂತ್ರಿಗಳೊಂದಿಗೆ ಡಿ ಕೆ ಶಿವಕುಮಾರ್ ನಡೆಸಿದ ಸಭೆಯ ಫಲಿತಾಂಶವನ್ನು ಬಹಿರಂಗಪಡಿಸಿಲ್ಲ ಎಂದು ಆರೋಪಿಸಿದರು.
ತುಂಗಭದ್ರಾ ಜಲಾಶಯದ ಕೆಳಭಾಗದ ನವಿಲೆಯಲ್ಲಿ ಹೊಸ ಜಲಾಶಯ ನಿರ್ಮಾಣಕ್ಕೆ ಆಂಧ್ರಪ್ರದೇಶ ಮತ್ತು ತೆಲಂಗಾಣ ಒಪ್ಪಿಗೆ ನೀಡಿವೆಯೇ? ಯೋಜನೆಗೆ ಹಣವನ್ನು ಯಾರು ನೀಡಲಿದ್ದಾರೆ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.