ಈಶ್ವರ್ ಖಂಡ್ರೆ, ಎಚ್ ಡಿ ಕುಮಾರಸ್ವಾಮಿ 
ರಾಜ್ಯ

HMT ಆದಾಗ ನಾನು ಹುಟ್ಟಿರ್ಲಿಲ್ಲ, ನೀವೇನು? ಅರಣ್ಯ ಭೂಮಿ ಅಂತ ದಾಖಲೆ ತೋರಿಸಿ: ಕುಮಾರಸ್ವಾಮಿಗೆ ಈಶ್ವರ್ ಖಂಡ್ರೆ ಟಾಂಗ್

ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮತ್ತು ಸಚಿವ ಈಶ್ವರ ಖಂಡ್ರೆ ನಡುವಿನ ಮಾತಿನ ಸಮರ ಮುಂದುವರೆದಿದೆ. HMT ಭೂಮಿ ಅರಣ್ಯಕ್ಕೆ ಸೇರಿದ್ದು ಅರಣ್ಯವಾಗೇ ಉಳಿಯುತ್ತದೆ. ಇದರ ಮೇಲೆ ರಾಜ್ಯ ಸರ್ಕಾರಕ್ಕೆ ಹಕ್ಕಿದೆಯೇ ಹೊರತು ಎಚ್ಎಂಟಿಗಲ್ಲ...

ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮತ್ತು ಸಚಿವ ಈಶ್ವರ ಖಂಡ್ರೆ ನಡುವಿನ ಮಾತಿನ ಸಮರ ಮುಂದುವರೆದಿದೆ. HMT ಭೂಮಿ ಅರಣ್ಯಕ್ಕೆ ಸೇರಿದ್ದು ಅರಣ್ಯವಾಗೇ ಉಳಿಯುತ್ತದೆ. ಇದರ ಮೇಲೆ ರಾಜ್ಯ ಸರ್ಕಾರಕ್ಕೆ ಹಕ್ಕಿದೆಯೇ ಹೊರತು ಎಚ್ಎಂಟಿಗಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.

ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಖಂಡ್ರೆ, ಕುಮಾರಸ್ವಾಮಿ ಮಾಡಿರುವ ಆರೋಪಗಳಿಗೆ ದಾಖಲೆಗಳು, ಕಾನೂನು ಹಾಗೂ ನ್ಯಾಯಾಲಯದ ತೀರ್ಪುಗಳ ಆಧಾರದ ಮೇಲೆ ಇಂದು ಉತ್ತರ ನೀಡಿದ್ದೇನೆ ಎಂದರು. ನಾನು ಅಭಿವೃದ್ಧಿಯಲ್ಲಿ ರಾಜಕೀಯ ಮಾಡುವವನೂ ಅಲ್ಲ, ಕುಮಾರಸ್ವಾಮಿ ಅವರ ಮೇಲೆ ನನಗೆ ಯಾವುದೇ ವೈಯಕ್ತಿಕ ದ್ವೇಷವೂ ಇಲ್ಲ. ಆದರೆ HMT ಅರಣ್ಯ ಭೂಮಿಯನ್ನು ರಾಜ್ಯ ಸರ್ಕಾರಕ್ಕೆ ಮರಳಿ ಪಡೆದು ಅಲ್ಲಿ ಲಾಲ್‌ಬಾಗ್, ಕಬ್ಬನ್ ಪಾರ್ಕ್‌ಗಿಂತ ದೊಡ್ಡ ಉದ್ಯಾನ ನಿರ್ಮಿಸಿ ಉತ್ತರ ಬೆಂಗಳೂರಿನ ಜನರಿಗೆ ಅತ್ಯಗತ್ಯವಾದ ಶ್ವಾಸತಾಣ ಉಳಿಸಲು ನಿರ್ಧರಿಸಿರುವ ಪರಿಸರ ಆಸಕ್ತನಾಗಿ ಅವರ ಆರೋಪಗಳಿಗೆ ಉತ್ತರ ನೀಡುತ್ತಿದ್ದೇನೆ ಎಂದರು.

ಈ ಹಿಂದೆ ಕುಮಾರಸ್ವಾಮಿ ಅವರು ಸುದ್ದಿಗೋಷ್ಠಿಯಲ್ಲಿ, ಯಾವ ಖಂಡ್ರೆ, ಎಚ್.ಎಂ.ಟಿ. ಆದಾಗ ನಾನು ಹುಟ್ಟೇ ಇರಲಿಲ್ಲ ಎಂದು ಹೇಳಿದ್ದಾರೆ. ನಾನೂ ಕೂಡ ಯಾವ ಸ್ವಾಮಿ... ಕುಮಾರಸ್ವಾಮಿ ಎನ್ನಬಹುದು. ಅವರೂ ಎಚ್.ಎಂ.ಟಿ. ಹುಟ್ಟಿದಾಗ ಹಸುಗೂಸೇ ಎಂದು ಹೇಳಬಹುದು. ಆದರೆ ನಾನು ಆ ಮಟ್ಟಕ್ಕೆ ಇಳಿಯುವುದಿಲ್ಲ. ಕುಮಾರಸ್ವಾಮಿ ಅವರೇ ಎಚ್.ಎಂ.ಟಿ. ಜಮೀನಿನ ಪ್ರಕರಣ ನ್ಯಾಯಾಲಯದಲ್ಲಿದೆ ಎಂದು ಹೇಳಿದ್ದಾರೆ. ಆದರೆ ಅದೇ ವೇಳೆ ಸರ್ಕಾರಕ್ಕೆ ಈ ಭೂಮಿಯ ಮೇಲೆ ಹಕ್ಕಿಲ್ಲ ಎಂದೂ ಘೋಷಿಸಿದ್ದಾರೆ. ಈ ತೀರ್ಪು ನೀಡಬೇಕಾದವರು ನ್ಯಾಯಾಧೀಶರೇ ಹೊರತು ಕುಮಾರಸ್ವಾಮಿ ಅಲ್ಲ ಎಂದರು.

ಸುಪ್ರೀಂ ಕೋರ್ಟ್ ಹಲವು ತೀರ್ಪುಗಳಲ್ಲಿ ಒಮ್ಮೆ ಅರಣ್ಯ ಎಂದು ಘೋಷಿತವಾದ ಭೂಮಿ ಕಾನೂನುಬದ್ಧವಾಗಿ ಅರಣ್ಯೇತರ ಉದ್ದೇಶಕ್ಕೆ ಪರಿವರ್ತನೆ ಆಗದಿದ್ದರೆ ಅದು ಅರಣ್ಯವಾಗಿಯೇ ಉಳಿಯುತ್ತದೆ ಎಂದು ಸ್ಪಷ್ಟಪಡಿಸಿದೆ. ಪರಿಸರದ ಹಕ್ಕುಗಳು ಭೂ ಒಡೆತನದ ಹಕ್ಕಿಗಿಂತ ಮಿಗಿಲು ಎಂಬುದನ್ನೂ ಹೇಳಿದೆ. ಆದ್ದರಿಂದ ಎಚ್.ಎಂ.ಟಿ. ಭೂಮಿ ಅರಣ್ಯವಾಗಿದ್ದು, ಅರಣ್ಯವಾಗಿಯೇ ಉಳಿಯುತ್ತದೆ. ಅದು ರಾಜ್ಯ ಸರ್ಕಾರದ ಆಸ್ತಿಯಾಗಿಯೇ ಇರುತ್ತದೆ ಎಂದರು. ಈ ಮಧ್ಯೆ ಬೆಂಗಳೂರು ನಗರ ಡಿಸಿಎಫ್ ನೋಟಿಸ್ ನೀಡಿದ್ದಾರೆ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ. ಆದರೆ ಅದು ನೋಟಿಸ್ ಅಲ್ಲ. ಅದು ಕರ್ನಾಟಕ ಅರಣ್ಯ ಕಾಯಿದೆ, 1963ರ ಸೆಕ್ಷನ್ 64(ಎ) ಅಡಿಯಲ್ಲಿ ನೀಡಿರುವ ಅರೆ ನ್ಯಾಯಿಕ ಪ್ರಾಧಿಕಾರದ ಆದೇಶ. ಸಂಬಂಧಪಟ್ಟವರಿಗೆ ದಾಖಲೆ ಸಲ್ಲಿಸಲು ಅವಕಾಶ ನೀಡಿದ ನಂತರ, ಸೂಕ್ತ ದಾಖಲೆ ಸಲ್ಲಿಸದ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ. ಈ ಆದೇಶದ ಬಗ್ಗೆ ಅಸಮ್ಮತಿ ಇದ್ದರೆ ಕಾನೂನು ಪ್ರಕಾರ ಸಿಎಫ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಬಹುದು, ನಂತರ ಹೈಕೋರ್ಟ್‌ಗೂ ಹೋಗಬಹುದು. ಆದರೆ ಕಾನೂನು ಪ್ರಕ್ರಿಯೆಯನ್ನು ಬಿಟ್ಟು ಜನರ ಮುಂದೆ ತಪ್ಪು ಮಾಹಿತಿ ನೀಡುವುದು ಸರಿಯಲ್ಲ.

1901ರಿಂದ 1969ರವರೆಗೆ ಯಾವುದೇ ಮೀಸಲು ಅರಣ್ಯವನ್ನು ಡಿ-ಫಾರೆಸ್ಟ್ ಮಾಡಲು ಅಧಿಸೂಚನೆ ಕಡ್ಡಾಯವಾಗಿತ್ತು. ಅಂತಹ ಅಧಿಸೂಚನೆ ಇದ್ದರೆ ದಾಖಲೆ ತೋರಿಸಲಿ. ದಾಖಲೆ ಇಲ್ಲದೆ ಆರೋಪ ಮಾಡುವುದರಿಂದ ಸತ್ಯ ಬದಲಾಗುವುದಿಲ್ಲ. ಎಚ್.ಎಂ.ಟಿ.ಗೆ ಜಮೀನು ನೀಡಿದ ಸಂದರ್ಭದಲ್ಲೇ ಬೆಂಗಳೂರು ವಿಶ್ವವಿದ್ಯಾಲಯಕ್ಕೂ ಅರಣ್ಯ ಭೂಮಿ ನೀಡಲಾಗಿತ್ತು. 1969ರ ಫೆಬ್ರವರಿ 24ರಂದು ಅದಕ್ಕೆ ಸಂಬಂಧಿಸಿದ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ ಎಂಬ ದಾಖಲೆಗಳನ್ನು ಇಂದು ಸಾರ್ವಜನಿಕವಾಗಿ ಪ್ರದರ್ಶಿಸಿದ್ದೇನೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಎಸ್ ಜಾನಕಿ ಇನ್ನಿಲ್ಲ: ದಕ್ಷಿಣ ಭಾರತದ ಗಾನ ಕೋಗಿಲೆ ಮೈಸೂರಿನಲ್ಲಿ ನಿಧನ!

17 ಭಾಷೆಗಳಲ್ಲಿ 48 ಸಾವಿರ ಹಾಡುಗಳಿಗೆ ಧ್ವನಿ: 2013ರಲ್ಲಿ ಪದ್ಮಭೂಷಣ ತಿರಸ್ಕರಿಸಿದ್ದ ದಿಟ್ಟ ಗಾಯಕಿ ಎಸ್ ಜಾನಕಿ!

ಜುಲೈ ಕಂಟಕ: ಕಳೆದ ವರ್ಷ ಹಠಾತ್ ಬಿರುಗಾಳಿಯಿಂದ ದೋಣಿ ಮಗುಚಿ 39 ಮಂದಿ ಸಾವು, ಈ ವರ್ಷದ 15 ಮಂದಿ ದುರ್ಮರಣ!

ಮಸ್ಸೂರಿ ಹೋಂಸ್ಟೇಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಸಾವಿಗೆ ಬಿಗ್ ಟ್ವಿಸ್ಟ್: ದೆಹಲಿಯಲ್ಲಿ ಪತಿಯ ಬಂಧನ

ಬಾಗಲಕೋಟೆ: ಕಬ್ಬಿನ ಗದ್ದೆಯಲ್ಲಿ ಮಹಿಳೆ ಶವವಾಗಿ ಪತ್ತೆ! ಅಕ್ರಮ ಸಂಬಂಧಕ್ಕೆ ಬಲಿಯಾದ್ಲಾ ವಿವಾಹಿತೆ?