

ಕನ್ನಡ, ಹಿಂದಿ ತೆಲುಗು ಸೇರಿದಂತೆ ಸುಮಾರು 17ಕ್ಕೂ ಹೆಚ್ಚು ಭಾಷೆಗಳಲ್ಲಿ ಸುಮಾರು 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದ ಗಾನ ಕೋಗಿಲೆ ಎಸ್ ಜಾನಕಿ ಅವರು ಇಂದು ನಿಧನರಾಗಿದ್ದಾರೆ. 88 ವರ್ಷ ವಯಸ್ಸಿನ ಜಾನಕಿ ಅವರು ವಯೋಸಹಜ ಕಾಯಿಲೆಯಿಂದಾಗಿ ನಿಧನ ಹೊಂದಿದ್ದಾರೆ.
ಎಸ್. ಜಾನಕಿ ಅವರು 1938ರ ಏಪ್ರಿಲ್ 23ರಂದು ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೇ ಎಂಬ ಗ್ರಾಮದಲ್ಲಿ ಜನಿಸಿದರು. ತಮ್ಮ ಮೂರನೆಯ ವಯಸ್ಸಿನಲ್ಲಿ, ಪೈಡಿಸ್ವಾಮಿ ಎಂಬವರಲ್ಲಿ ಸಂಗೀತಾಭ್ಯಾಸವನ್ನು ಪ್ರಾರಂಭಿಸಿದರು. 1956ರಲ್ಲಿ ಆಕಾಶವಾಣಿ ನಡೆಸಿದ ಸಂಗೀತ ಸ್ಪರ್ಧೆಯಲ್ಲಿ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಅವರಿಂದ ಬಹುಮಾನ ಸ್ವೀಕರಿಸಿದ ಜಾನಕಿ, ಮುಂದೆ ಚೆನ್ನೈಗೆ ಬಂದು ಸಂದರ್ಶನವೂಂದರಲ್ಲಿ ಲತಾ ಮಂಗೇಶ್ಕರ್ ಅವರ ‘ರಸಿಕ್ ಬಲಮಾ’ ಎಂಬ ಗೀತೆಯನ್ನು ಹಾಡಿ ಪ್ರಸಿದ್ಧ ಎವಿಎಮ್ ಸಂಸ್ಥೆಯವರ ಕಾಂಟ್ರಾಕ್ಟ್ ಪಡೆದರು. ಐವತ್ತೊಂಬತ್ತು ವರ್ಷಗಳ ಅವಧಿಯಲ್ಲಿ ಅವರು 17 ಭಾಷೆಗಳಲ್ಲಿ ಸುಮಾರು 48 ಸಾವಿರ ಗೀತೆಗಳನ್ನು ಹಾಡಿದ್ದಾರೆ. ಭಾರತದ ಪ್ರಮುಖ ಭಾಷೆಗಳು ಸೇರಿದಂತೆ ಸಿಂಹಳ, ಜಪಾನಿ, ಲ್ಯಾಟಿನ್, ಅರೇಬಿಕ್ ಒಳಗೊಂಡಂತೆ ಹದಿನೇಳು ಭಾಷೆಗಳಲ್ಲಿ ಹಾಡಿದ ಹೆಗ್ಗಳಿಕೆ ಅವರದು.
ಆರು ದಶಕಗಳ ಹಾಡುಗಾರಿಕೆಯ ಸಾಧನೆ ಜಾನಕಿ ಅವರಿಗೆ ಹಲವು ಗೌರವಗಳನ್ನು ತಂದುಕೊಟ್ಟಿದೆ. ನಾಲ್ಕು ರಾಷ್ಟ್ರ ಪ್ರಶಸ್ತಿಗಳು, ಸುಮಾರು ಮೂವತ್ತು ರಾಜ್ಯ ಪ್ರಶಸ್ತಿಗಳು ಅವರ ಗಾಯನಕ್ಕೆ ದೊರೆತಿವೆ. ಮೈಸೂರು ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು. ರಾಜ್ಯ ಸರ್ಕಾರ 2014ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಿತ್ತು.
ಭಾರತದ ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರಿಗೆ 2013ರಲ್ಲಿ ಭಾರತ ಸರ್ಕಾರವು ಪದ್ಮಭೂಷಣ ಪ್ರಶಸ್ತಿವನ್ನು ಘೋಷಿಸಿತ್ತು. ಆದರೆ, ಈ ಗೌರವ ತಮ್ಮ ಸುದೀರ್ಘ ಐದೂವರೆ ದಶಕಗಳ ವೃತ್ತಿ ಜೀವನಕ್ಕೆ ತಡವಾಗಿ ಬಂದಿದೆ. ದಕ್ಷಿಣ ಭಾರತದ ಕಲಾವಿದರಿಗೆ ಸೂಕ್ತ ಮನ್ನಣೆ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ಅವರು ಪ್ರಶಸ್ತಿಯನ್ನು ಸ್ವೀಕರಿಸಲು ತಿರಸ್ಕರಿಸಿದ್ದರು.