ಮಾಜಿ ಪ್ರಧಾನಿ ದೇವೇಗೌಡ ಮತ್ತು ಅವರ ಪತ್ನಿ ಚೆನ್ನಮ್ಮ 
ರಾಜ್ಯ

ಸಂಕಷ್ಟದಲ್ಲೂ ಕೈಬಿಡದ ಸಂಗಾತಿ: ಧೈರ್ಯ, ತಾಳ್ಮೆ, ತ್ಯಾಗದ ಪ್ರತೀಕ; ದೇವೇಗೌಡರ 7 ದಶಕಗಳ ಪಯಣಕ್ಕೆ ನೆರಳಾಗಿದ್ದ ಚೆನ್ನಮ್ಮ!

ತುರ್ತು ಪರಿಸ್ಥಿತಿಯ ಸಮಯದಲ್ಲಿ ದೇವೇಗೌಡರು ಜೈಲು ಸೇರಿದ್ದಾಗ, ಇಡೀ ಕುಟುಂಬ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಂಕಷ್ಟಕ್ಕೆ ಸಿಲುಕಿತ್ತು. ಅಂತಹ ಕಠಿಣ ಸಂದರ್ಭದಲ್ಲೂ ಧೃತಿಗೆಡದ ಚೆನ್ನಮ್ಮ ಅವರು, ಒಂಟಿಯಾಗಿ ನಿಂತು ಕೃಷಿ ಭೂಮಿಯನ್ನು ನೋಡಿಕೊಳ್ಳುತ್ತಾ, ಆರು ಜನ ಮಕ್ಕಳನ್ನು ಶಿಸ್ತಿನಿಂದ ಬೆಳೆಸಿದರು.

ಹಾಸನ: ರಾಜಕೀಯದ ಮಹಾ ಚದುರಂಗದಾಟದಲ್ಲಿ ಗೆದ್ದು ಬೀಗುವ ನಾಯಕರ ಯಶಸ್ಸಿನ ಹಿಂದೆ, ಪ್ರಚಾರದ ಬೆಳಕಿನಿಂದ ದೂರ ಸರಿದು ನಿಲ್ಲುವ ಕೆಲವು ಮಹಾನ್ ಚೇತನಗಳಿರುತ್ತವೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ 72 ವರ್ಷಗಳ ಸುದೀರ್ಘ ರಾಜಕೀಯ ಮತ್ತು ವೈಯಕ್ತಿಕ ಪಯಣದಲ್ಲಿ ಅಂತಹ ಮೌನ ಶಕ್ತಿಯಾಗಿ ನಿಂತವರು ಅವರ ಧರ್ಮಪತ್ನಿ ಚೆನ್ನಮ್ಮ.

ರಾಜಕೀಯ ವೇದಿಕೆಯಲ್ಲಿ ಎಂದಿಗೂ ಕಾಣಿಸಿಕೊಳ್ಳದ ಅವರು, ಕುಟುಂಬದ ಜವಾಬ್ದಾರಿ ಹೊತ್ತು, ಕಷ್ಟ-ಸುಖಗಳಲ್ಲಿ ದೇವೇಗೌಡರಿಗೆ ಅಚಲ ಬೆಂಬಲವಾಗಿ ನಿಂತಿದ್ದರು. ಚೆನ್ನಮ್ಮ ಅವರು 89ನೇ ವಯಸ್ಸಿನಲ್ಲಿ ಅವರು ನಿಧನರಾಗಿದ್ದು, 72 ವರ್ಷಗಳ ಸುಧೀರ್ಘ ದಾಂಪತ್ಯ ಜೀವನಕ್ಕೆ ತೆರೆ ಬಿದ್ದಿದೆ.ಈ ನಿಟ್ಟಿನಲ್ಲಿ ಅವರ ಬದುಕಿನ ಕೆಲವು ಅಪರಿಚಿತ ಹಾಗೂ ಸ್ಫೂರ್ತಿದಾಯಕ ಪುಟಗಳ ವಿಶೇಷ ನೋಟ ಇಲ್ಲಿದೆ...

1937ರಲ್ಲಿ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಮುತ್ತಿಗೆಹಿರೇಹಳ್ಳಿ ಗ್ರಾಮದಲ್ಲಿ ಜನಿಸಿದ ಚೆನ್ನಮ್ಮ, ಆ ಕಾಲದ ಶ್ರೀಮಂತ ಹಾಗೂ ದಾನಶೀಲ ಕುಟುಂಬದ ಪುತ್ರಿಯಾಗಿದ್ದರು. ಅವರ ತಂದೆ ಪಟೇಲ್ ದೇವೇಗೌಡ, ತಾಯಿ ಕಾಲಮ್ಮ. ತಾತ ಪಟೇಲ್ ಸುಬ್ಬೇಗೌಡ ಹರದನಹಳ್ಳಿಯ ಹೆಸರಾಂತ ಭೂಮಾಲೀಕರಾಗಿದ್ದು, ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು ನೀಡುತ್ತಿದ್ದ ಸಮಾಜಸೇವಕರಾಗಿದ್ದರು.

ಕುಟುಂಬದವರ ಪ್ರಕಾರ, ಪಟೇಲ್ ಸುಬ್ಬೇಗೌಡ ಅವರು ಅನೇಕ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಿದ್ದಷ್ಟೇ ಅಲ್ಲದೆ, ಮುಂದಿನ ದಿನಗಳಲ್ಲಿ ಭಾರತದ ಪ್ರಧಾನಿಯಾಗಲಿದ್ದ ದೇವೇಗೌಡ ಅವರ ಶಿಕ್ಷಣಕ್ಕೂ ನೆರವಾಗಿದ್ದರು. ಇದೇ ಕುಟುಂಬ ಸಂಬಂಧ ಮುಂದೆ ದಾಂಪತ್ಯ ಸಂಬಂಧವಾಗಿ ಮಾರ್ಪಟ್ಟಿತು.

ಚೆನ್ನಮ್ಮ ಮುತ್ತಿಗೆಹಿರೇಹಳ್ಳಿಯಲ್ಲಿ ನಾಲ್ಕನೇ ತರಗತಿವರೆಗೆ ಹಾಗೂ ಹೊಳೆನರಸೀಪುರದ ಹಳೆಕೋಟೆಯಲ್ಲಿ ಏಳನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದರು. ಬಳಿಕ ಶಿಕ್ಷಣವನ್ನು ಮುಂದುವರಿಸಲಿಲ್ಲ. ಶಾಲಾ ರಜೆಯಲ್ಲಿ ಆಗಾಗ ಹರದನಹಳ್ಳಿಯ ತಾತನ ಮನೆಗೆ ಹೋಗುತ್ತಿದ್ದ ಚೆನ್ನಮ್ಮ, ಅವರ ಸರಳ ಸ್ವಭಾವ, ಹಿರಿಯರ ಮೇಲಿದ್ದ ಗೌರವ ಮತ್ತು ವಿನಯ ದೇವೇಗೌಡ ಅವರ ತಾಯಿ ಲಕ್ಷ್ಮಮ್ಮ ಅವರ ಗಮನ ಸೆಳೆದಿತ್ತು.

ಆಗಲೇ ಚೆನ್ನಮ್ಮ ಅವರನ್ನು ಸೊಸೆಯನ್ನಾಗಿ ಮಾಡಬೇಕೆಂದು ಲಕ್ಷ್ಮಮ್ಮ ಮನಸ್ಸು ಮಾಡಿದ್ದರು. ಅದರಂತೆ 1954ರ ಮೇ 25ರಂದು ಚೆನ್ನಮ್ಮ ಮತ್ತು ದೇವೇಗೌಡ ಅವರ ವಿವಾಹ ನಡೆಯಿತು. ಆಗ ದೇವೇಗೌಡ ಅವರಿಗೆ ಕೇವಲ 21 ವರ್ಷ, ಚೆನ್ನಮ್ಮ ಅವರಿಗೆ 17 ವರ್ಷ ವಯಸ್ಸಾಗಿತ್ತು. ಆ ಮದುವೆ 72 ವರ್ಷಗಳ ದೀರ್ಘ ದಾಂಪತ್ಯ ಬದುಕಿಗೆ ನಾಂದಿ ಹಾಡಿತು.

ಚೆನ್ನಮ್ಮ ಅವರು ವಿವಾಹವಾದಾಗ ಎಚ್.ಡಿ. ದೇವೇಗೌಡರು ಕೇವಲ ಒಬ್ಬ ಸಾಮಾನ್ಯ ರೈತ ಹಾಗೂ ಸಣ್ಣ ಗುತ್ತಿಗೆದಾರರಾಗಿದ್ದರು. ಅಲ್ಲಿಂದ ಶುರುವಾದ ಅವರ ಪಯಣ ದೇಶದ ಅತ್ಯುನ್ನತ ಪ್ರಧಾನಿ ಹುದ್ದೆಯವರೆಗೂ ತಲುಪಿತು.

ರಾಜಕೀಯಕ್ಕೆ ಕಾಲಿಟ್ಟ ದೇವೇಗೌಡ ಅವರು ಗ್ರಾಮ ಪಂಚಾಯಿತಿ ಸದಸ್ಯರಿಂದ ಆರಂಭಿಸಿ, ಶಾಸಕರಾಗಿ, ಸಚಿವರಾಗಿ, ಮುಖ್ಯಮಂತ್ರಿ ಹಾಗೂ ಅಂತಿಮವಾಗಿ ದೇಶದ ಪ್ರಧಾನಿಯಾಗುವವರೆಗಿನ ಪ್ರತಿಯೊಂದು ಹಂತದಲ್ಲೂ ಚೆನ್ನಮ್ಮ ಅವರ ಬೆಂಬಲ ನೆರಳಿನಂತಿತ್ತು.

ಪತಿಯ ಅಧಿಕಾರ ಹೆಚ್ಚಿದಂತೆ ಚೆನ್ನಮ್ಮ ಅವರ ಸರಳತೆ ಎಂದಿಗೂ ಬದಲಾಗಲಿಲ್ಲ. ದೆಹಲಿಯ ಪ್ರಧಾನಿ ನಿವಾಸದಲ್ಲೂ ಅವರು ತಮ್ಮ ಹಳ್ಳಿಯ ಸೊಗಡನ್ನು, ಮಣ್ಣಿನ ಮಗಳ ಗುಣವನ್ನು ಹಾಗೇ ಉಳಿಸಿಕೊಂಡಿದ್ದರು.

ತುರ್ತು ಪರಿಸ್ಥಿತಿಯ (Emergency) ಸಮಯದಲ್ಲಿ ದೇವೇಗೌಡರು ಜೈಲು ಸೇರಿದ್ದಾಗ, ಇಡೀ ಕುಟುಂಬ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಂಕಷ್ಟಕ್ಕೆ ಸಿಲುಕಿತ್ತು. ಅಂತಹ ಕಠಿಣ ಸಂದರ್ಭದಲ್ಲೂ ಧೃತಿಗೆಡದ ಚೆನ್ನಮ್ಮ ಅವರು, ಒಂಟಿಯಾಗಿ ನಿಂತು ಕೃಷಿ ಭೂಮಿಯನ್ನು ನೋಡಿಕೊಳ್ಳುತ್ತಾ, ಆರು ಜನ ಮಕ್ಕಳನ್ನು ಶಿಸ್ತಿನಿಂದ ಬೆಳೆಸಿದರು. ಪತಿ ಜೈಲಿನಲ್ಲಿದ್ದರೂ ಧೈರ್ಯ ಕಳೆದುಕೊಳ್ಳದೆ ಇಡೀ ಸಂಸಾರವನ್ನು ಮುನ್ನಡೆಸಿದ ಅವರ ಸಾಹಸ ನಿಜಕ್ಕೂ ಅನನ್ಯ.

ರಾಜಕೀಯದ ಏಳುಬೀಳುಗಳು, ಟೀಕೆಗಳು ಮತ್ತು ಸೋಲುಗಳ ಮಧ್ಯೆ ಅವರು ಸದಾ ಗೌಡರ ಪಾಲಿನ ಶಾಂತಿ ಮತ್ತು ಧೈರ್ಯದ ಮೂಲವಾಗಿದ್ದರು. 72 ವರ್ಷಗಳ ದಾಂಪತ್ಯದಲ್ಲಿ ಆಕೆ ಎಂದಿಗೂ ರಾಜಕೀಯ ನಿರ್ಧಾರಗಳಲ್ಲಿ ಹಸ್ತಕ್ಷೇಪ ಮಾಡಲಿಲ್ಲ, ಆದರೆ ಗೌಡರ ಪ್ರತಿ ಹೆಜ್ಜೆಯ ಬೆನ್ನೆಲುಬಾಗಿದ್ದರು.

ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅವರು ವಿರಳವಾಗಿ ಕಾಣಿಸಿಕೊಂಡರೂ, ಮನೆಯ ಜವಾಬ್ದಾರಿಯನ್ನು ಸಂಪೂರ್ಣವಾಗಿ ನಿರ್ವಹಿಸಿ ದೇವೇಗೌಡರು ರಾಜಕೀಯದತ್ತ ಸಂಪೂರ್ಣ ಗಮನ ಹರಿಸಲು ಅವಕಾಶ ಮಾಡಿಕೊಟ್ಟರು.

ಕುಟುಂಬದ ಸದಸ್ಯರ ಪ್ರಕಾರ, ಚೆನ್ನಮ್ಮ ಅವರು ಅತ್ಯಂತ ಧಾರ್ಮಿಕ ಸ್ವಭಾವದವರಾಗಿದ್ದರು. ಪೂಜೆ, ವ್ರತ, ದೇವರ ಆರಾಧನೆ ಅವರ ದಿನಚರಿಯ ಭಾಗವಾಗಿತ್ತು. ಮನೆಗೆ ಬರುವ ಬಂಧು-ಬಳಗ, ಗ್ರಾಮಸ್ಥರು ಹಾಗೂ ನೆರವು ಕೇಳಿ ಬರುವ ಬಡವರಿಗೆ ಸಾಧ್ಯವಾದಷ್ಟು ಸಹಾಯ ಮಾಡುವುದು ಅವರ ಜೀವನಶೈಲಿಯಾಗಿತ್ತು. ರಾಜಕೀಯದಿಂದ ದೂರವೇ ಇದ್ದರೂ, ಜನರೊಂದಿಗೆ ಬೆರೆತು ಬದುಕುವ ಗುಣ ಅವರಲ್ಲಿತ್ತು.

ಆದರೆ ಅವರ ಬದುಕಿನಲ್ಲಿ ಒಂದು ಕರಾಳ ಘಟನೆಯೂ ನಡೆದಿದೆ. 2001ರ ಫೆಬ್ರವರಿ 21ರಂದು ಶಿವರಾತ್ರಿಯ ದಿನ ಕುಟುಂಬದ ದೇವಾಲಯಕ್ಕೆ ಪೂಜೆ ಸಲ್ಲಿಸಲು ತೆರಳಿದ್ದ ವೇಳೆ ಕುಟುಂಬದ ಆಸ್ತಿ ವಿವಾದದ ಹಿನ್ನೆಲೆ ದೇವೇಗೌಡ ಅವರ ಸಹೋದರ ಎಚ್‌.ಡಿ. ಬಸವೇಗೌಡ ಹಾಗೂ ಅವರ ಪುತ್ರರು ಲೋಕೇಶ್ ಮತ್ತು ಜ್ಞಾನೇಶ್ ನಡೆಸಿದ ಆ್ಯಸಿಡ್ ದಾಳಿಯಲ್ಲಿ ಚೆನ್ನಮ್ಮ ಗಂಭೀರವಾಗಿ ಗಾಯಗೊಂಡಿದ್ದರು. ಆ ದಾಳಿಯಲ್ಲಿ ಸೊಸೆ ಭವಾನಿ ರೇವಣ್ಣ ಕೂಡ ಗಾಯಗೊಂಡಿದ್ದರು. ಈ ಘಟನೆ ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಂಗಾರು ಅಧಿವೇಶನ ಹಿನ್ನಲೆ ದೆಹಲಿಯಲ್ಲಿ ನಿಷೇಧಾಜ್ಞೆ; CJP 'ಚಲೋ ಸಂಸತ್' ಮೆರವಣಿಗೆಗೆ ದೆಹಲಿ ಪೊಲೀಸರ ನಿರ್ಬಂಧ!

178 ತಾಲೂಕುಗಳಲ್ಲಿ ಮಳೆ ಕೊರತೆ: ಸಿಎಂ ಡಿ.ಕೆ ಶಿವಕುಮಾರ್

'ವಂದೇ ಮಾತರಂ'ಗೆ ಅವಮಾನಿಸಿದರೆ 3 ವರ್ಷ ಜೈಲು ಶಿಕ್ಷೆ: ನಾಳೆ ಸಂಸತ್ತಿನಲ್ಲಿ ಮಸೂದೆ ಮಂಡಿಸಲಿರುವ ಅಮಿತ್ ಶಾ

ಚಿಕಿತ್ಸೆ ವೇಳೆ ಫ್ಯಾನ್ ಬಿದ್ದು ರೋಗಿ ಸಾವು: ಸರ್ಕಾರಿ ಆಸ್ಪತ್ರೆಯಲ್ಲಿ ದುರಂತ; ವ್ಯಾಪಕ ಆಕ್ರೋಶ, Video Viral

ಸಿಜೆಪಿ ಪ್ರತಿಭಟನೆಯಲ್ಲಿ ಭಾಗಿಯಾದ Bollywood Hot ನಟಿ ಪೂನಂ ಪಾಂಡೆ; ಪ್ರತಿಭಟನಾಕಾರರಲ್ಲಿ ಹೆಚ್ಚಿದ ಹುಮ್ಮಸ್ಸು, Video!