ಕಲಬುರಗಿ: ಇಷ್ಟು ದಿನ ಶಾಂತವಾಗಿದ್ದ ಭೀಮಾ ತೀರದಲ್ಲಿ ಮತ್ತೆ ನೆತ್ತರು ಹರಿದಿದ್ದು, ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಪ್ರಸಿದ್ಧ ಯಾತ್ರಾಸ್ಥಳ ದೇವಲಗಾಣಗಾಪುರದಲ್ಲಿ ಶುಕ್ರವಾರ ಟಂ-ಟಂ ಚಾಲಕನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ.
ಇಂದು ಬೆಳಗಿನ ಜಾವ ಸುಮಾರು 2:17 ರ ಸುಮಾರಿಗೆ ಈ ಬರ್ಬರ ಹತ್ಯೆ ನಡೆದಿದ್ದು, ಕೊಲೆಯಾದ ಟಂ-ಟಂ ಚಾಲಕನನ್ನು 19 ವರ್ಷದ ದತ್ತು ಎಂದು ಗುರುತಿಸಲಾಗಿದೆ.
ಕೇವಲ 'ದಿಟ್ಟಿಸಿ ನೋಡಿದ' ಎಂಬ ವಿಚಾರವೇ ನೆಪವಾಗಿ, ಟಂ-ಟಂ ಚಾಲಕನಾಗಿದ್ದ ಯುವಕ ದತ್ತುನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿದ್ದಾರೆ.
ದೇವಲಗಾಣಗಾಪುರದ ಸಂಗಮ ರಸ್ತೆಯಲ್ಲಿರುವ ಅವಧೂತ ಆಶ್ರಮದ ಸಮೀಪ ಈ ಕ್ರೌರ್ಯ ನಡೆದಿದ್ದು, ದತ್ತು ಮೇಲೆ ಅದೇ ಗ್ರಾಮದ ಪ್ರಜ್ವಲ್ ಮಲ್ಕಪ್ಪ ಹೊಸಮನಿ ಹಾಗೂ ಪ್ರೀತಮ್ ಹೊಸಮನಿ ಎಂಬಿಬ್ಬರು ದಾಳಿ ನಡೆಸಿ ಮಾರಕಾಸ್ತ್ರಗಳಿಂದ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ದತ್ತು ಅವರನ್ನು ತಕ್ಷಣವೇ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. 'ಆರೋಪಿಗಳು, ನಾನು ಅವರನ್ನು ದಿಟ್ಟಿಸಿ ನೋಡಿದೆ' ಎಂಬ ಕ್ಷುಲ್ಲಕ ನೆಪವನ್ನಿಟ್ಟುಕೊಂಡು ನನ್ನ ಮೇಲೆ ಹಲ್ಲೆ ನಡೆಸಿದರು ಎಂದು ಯುವಕ ಆಸ್ಪತ್ರೆಯಲ್ಲಿದ್ದಾಗ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ದೇವಲಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳೀಯ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.