ಬೆಂಗಳೂರು: 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸ್ಥಾನಗಳು 50-60ಕ್ಕೆ ಇಳಿಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಭವಿಷ್ಯ ನುಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯುವುದಾಗಿ ಸಿದ್ದರಾಮಯ್ಯನವರು ತಿಳಿಸಿದ್ದಾರೆ. ಸಿದ್ದರಾಮಯ್ಯನವರ ಈ ನಿರ್ಧಾರದಿಂದ 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸ್ಥಾನಗಳು 50-60ಕ್ಕೆ ಇಳಿಯಲಿದೆ ಎಂದಿದ್ದಾರೆ.
ಸಿದ್ದರಾಮಯ್ಯ ಅವರ ಈ ನಿರ್ಧಾರದಿಂದ ಕಾಂಗ್ರೆಸ್ ಪಕ್ಷದ ಅಡಿಪಾಯವೇ ಅಲ್ಲಾಡಲಿದೆ ಎಂದು ಭವಿಷ್ಯ ನುಡಿದರು. ತಮ್ಮ ಹಾಗೂ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಜಂಟಿ ನೇತೃತ್ವದಲ್ಲಿ ಈ ಹೋರಾಟ ನಡೆಯಲಿದೆ. ಕಾವೇರಿ ಕೊಳ್ಳದ ರೈತರ ಸಂಕಷ್ಟಕ್ಕೆ ಧ್ವನಿಯಾಗಲು ಜೆಡಿಎಸ್ ಸೇರಿದಂತೆ ರಾಜ್ಯದ ಎಲ್ಲಾ ರೈತ ಸಂಘಟನೆಗಳು ಮತ್ತು ಸಂಘ-ಸಂಸ್ಥೆಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಲಿವೆ ಎಂದು ಹೇಳಿದರು.
ಕಾವೇರಿ ಕೊಳ್ಳ ಸೇರಿದಂತೆ ಸದ್ಯ ರಾಜ್ಯದಲ್ಲಿ ಭೀಕರ ಬರ ಆವರಿಸಿದೆ. ಈ ಹೊತ್ತಿನಲ್ಲಿ ಕಾವೇರಿ ನೀರಿನ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಜವಾಬ್ದಾರಿಯಿಂದ ವರ್ತಿಸಬೇಕಿತ್ತು. ಆದರೆ ಹೊಣೆಗೇಡಿತನದಿಂದ ವರ್ತಿಸಲಾಗಿದೆ ಎಂದು ಆರೋಪಿಸಿದರು.
ಕಾವೇರಿ ನೀರು ನಿರ್ವಹಣಾ ಸಮಿತಿ ಮುಂಭಾಗ ವಾದ ಮಂಡಿಸುವ ನಮ್ಮ ವಕೀಲರ ತಂಡಕ್ಕೆ ರಾಜ್ಯದಲ್ಲಿನ ನೀರಿನ ಲಭ್ಯತೆ ಮತ್ತು ಮಳೆ ಕೊರತೆಯ ವಾಸ್ತವಾಂಶದ ಕುರಿತು ಸರಿಯಾದ ಮಾಹಿತಿ ನೀಡುವಲ್ಲಿ ಸರ್ಕಾರ ಎಡವಿದೆ. ಪರಿಣಾಮವಾಗಿ, CWRC ಆದೇಶ ನೀಡುವುದಕ್ಕೂ ಮುನ್ನವೇ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂದು ಕಾವೇರಿ ಜಲಾನಯನ ಪ್ರದೇಶದ ರೈತರು ಬೆಳೆ ಬೆಳೆಯಲು ನೀರಿಲ್ಲದೆ, ಕುಡಿಯುವ ನೀರಿಗೂ ತತ್ವಾರ ಎದುರಿಸುವಂತಾಗಿದೆ. ವಾಸ್ತವ ಸ್ಥಿತಿಯನ್ನು ಪ್ರಾಧಿಕಾರಕ್ಕೆ ಮನವರಿಕೆ ಮಾಡಿಕೊಡುವ ಬದಲು, ಮುಖ್ಯಮಂತ್ರಿಗಳು ರೈತರಿಗೆ ಬಿತ್ತನೆ ಮಾಡಬೇಡಿ ಎಂದು ಉಚಿತ ಸಲಹೆ ನೀಡುತ್ತಿದ್ದಾರೆ.
ಇಂಡಿಯಾ' ಒಕ್ಕೂಟದ ಪಾಲುದಾರ ಪಕ್ಷವಾದ ತಮಿಳುನಾಡು ಸರ್ಕಾರವನ್ನು ಓಲೈಸಲು ಕಾಂಗ್ರೆಸ್ ಸರ್ಕಾರ ಕರ್ನಾಟಕದ ರೈತರ ಹಿತಬಲಿಕೊಟ್ಟಿದೆ. ಮೊದಲು ನಮ್ಮ ರಾಜ್ಯದ ಅಗತ್ಯಕ್ಕೆ ನೀರು ಕಾಯ್ದಿರಿಸಿ, ಬಳಿಕ ಹೆಚ್ಚುವರಿ ನೀರಿದ್ದರೆ ಮಾತ್ರ ತಮಿಳುನಾಡಿಗೆ ಹರಿಸಬೇಕಿತ್ತು’ ಎಂದು ಹೇಳಿದರು.