ಸಂಗ್ರಹ ಚಿತ್ರ 
ರಾಜ್ಯ

Mangaluru-Maravanthe ಫೆರ್ರಿ ಯೋಜನೆಗೆ ಅನುದಾನ ನಿರಾಕರಿಸಿದ ಕೇಂದ್ರ ಸರ್ಕಾರ: ಕರಾವಳಿ ಪ್ರವಾಸೋದ್ಯಮಕ್ಕೆ ಹಿನ್ನಡೆ..!

ಈ ಯೋಜನೆಗಳು ಜಾರಿಯಾದರೆ ಸಮುದ್ರ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗುವುದರ ಜೊತೆಗೆ ಕರಾವಳಿ ಸಂಪರ್ಕ ವ್ಯವಸ್ಥೆ ಸುಧಾರಿಸಿ, ರಾಷ್ಟ್ರೀಯ ಹೆದ್ದಾರಿ-66ಕ್ಕೆ ಪರ್ಯಾಯ ಸಾರಿಗೆ ವ್ಯವಸ್ಥೆ ನಿರ್ಮಾಣವಾಗಲಿದೆ ಎಂಬ ನಿರೀಕ್ಷೆ ಇತ್ತು.

ಮಂಗಳೂರು: ಕರಾವಳಿ ಪ್ರವಾಸೋದ್ಯಮಕ್ಕೆ ದೊಡ್ಡ ಉತ್ತೇಜನ ನೀಡಬಲ್ಲ ಮಂಗಳೂರು ಮತ್ತು ಉಡುಪಿ ಜಿಲ್ಲೆಯ ಮರವಂತೆ ನಡುವಿನ ‘ಕರಾವಳಿ ಪ್ರಯಾಣಿಕರ ಫೆರ್ರಿ ಯೋಜನೆ’ಗೆ ಕೇಂದ್ರ ಸರ್ಕಾರವು ಸಾಗರಮಾಲಾ ಯೋಜನೆಯಡಿ ಆರ್ಥಿಕ ನೆರವು ನೀಡಲು ನಿರಾಕರಿಸಿದೆ.

ಪ್ರಸ್ತುತ ಈ ಯೋಜನೆಯಡಿ ಹಣಕಾಸಿನ ಲಭ್ಯತೆ ಇಲ್ಲದಿರುವುದೇ ಇದಕ್ಕೆ ಪ್ರಮುಖ ಕಾರಣ ಎಂದು ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ್ ಸೋನೋವಾಲ್ ಲೋಕಸಭೆಯಲ್ಲಿ ತಿಳಿಸಿದ್ದಾರೆ.

ಈ ಯೋಜನೆಗಳು ಜಾರಿಯಾದರೆ ಸಮುದ್ರ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗುವುದರ ಜೊತೆಗೆ ಕರಾವಳಿ ಸಂಪರ್ಕ ವ್ಯವಸ್ಥೆ ಸುಧಾರಿಸಿ, ರಾಷ್ಟ್ರೀಯ ಹೆದ್ದಾರಿ-66ಕ್ಕೆ ಪರ್ಯಾಯ ಸಾರಿಗೆ ವ್ಯವಸ್ಥೆ ನಿರ್ಮಾಣವಾಗಲಿದೆ ಎಂಬ ನಿರೀಕ್ಷೆ ಇತ್ತು. ಆದರೆ, ಕೇಂದ್ರದ ನಿರ್ಧಾರದಿಂದ ಯೋಜನೆಯ ಭವಿಷ್ಯದ ಬಗ್ಗೆ ಅನಿಶ್ಚಿತತೆ ಮೂಡಿದೆ.

ಲೋಕಸಭೆಯಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೇಳಿದ ಲಿಖಿತ ಪ್ರಶ್ನೆಗೆ ಉತ್ತರಿಸಿದ ಸಚಿವ ಸರ್ಬಾನಂದ್ ಸೋನೋವಾಲ್ ಅವರು, ಕರ್ನಾಟಕ ಸರ್ಕಾರ ಸಾಗರಮಾಲಾ ಯೋಜನೆಯಡಿ ಮಂಗಳೂರು–ಮರವಂತೆ ಪ್ರಯಾಣಿಕರ ಫೆರ್ರಿ ಸೇವೆಗೆ ಸಂಬಂಧಿಸಿದ ಕಾರ್ಯಸಾಧ್ಯತಾ ವರದಿ (Feasibility Report) ಹಾಗೂ ಕೋಟ ಪಡುಕೆರೆಯಲ್ಲಿ ಸಹಾಯಕ ಮೂಲಸೌಕರ್ಯಗಳೊಂದಿಗೆ ಸಮಗ್ರ ಕರಾವಳಿ ಪ್ರವಾಸೋದ್ಯಮ ಮತ್ತು ಮರೀನಾ ಅಭಿವೃದ್ಧಿಗೆ ಪೂರ್ವ ಕಾರ್ಯಸಾಧ್ಯತಾ ವರದಿಯನ್ನು ಸಲ್ಲಿಸಿತ್ತು.

ಈ ವರದಿಗಳಲ್ಲಿ ಕರ್ನಾಟಕದ 320 ಕಿಲೋಮೀಟರ್ ಉದ್ದದ ಕರಾವಳಿಯಲ್ಲಿ ಸಮುದ್ರ ಪ್ರವಾಸೋದ್ಯಮ, ಜಲಕ್ರೀಡೆ ಹಾಗೂ ಫೆರ್ರಿ ಸೇವೆ ಅಭಿವೃದ್ಧಿಪಡಿಸಲು ಉತ್ತಮ ಅವಕಾಶಗಳಿವೆ ಎಂದು ಉಲ್ಲೇಖಿಸಲಾಗಿತ್ತು. ಆದರೆ, ಪ್ರಸ್ತುತ ಸಾಗರಮಾಲಾ ಯೋಜನೆಯಡಿ ಅನುದಾನ ನೀಡಲು ಅಗತ್ಯ ಹಣಕಾಸಿನ ಅವಕಾಶ ಇಲ್ಲದ ಕಾರಣ ಈ ಪ್ರಸ್ತಾವನೆಗಳನ್ನು ಪರಿಗಣಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ.

ಈ ವರ್ಷದ ಆರಂಭದಲ್ಲಿ ಕರ್ನಾಟಕ ಮೆರಿಟೈಮ್ ಬೋರ್ಡ್ ಸುಮಾರು 37.8 ಕೋಟಿ ರೂ. ವೆಚ್ಚದಲ್ಲಿ 110 ಕಿಲೋಮೀಟರ್ ಉದ್ದದ ಮಂಗಳೂರು–ಮರವಂತೆ ಕರಾವಳಿ ಫೆರ್ರಿ ಕಾರಿಡಾರ್ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಿತ್ತು.

ಯೋಜನೆಯ ಪ್ರಕಾರ, ಹಳೆಯ ಮಂಗಳೂರು ಬಂದರು, ಹೆಜಮಾಡಿ, ಮಲ್ಪೆ, ಕೋಟ ಮತ್ತು ಮರವಂತೆ ಸೇರಿದಂತೆ ಐದು ಕಡೆಗಳಲ್ಲಿ ಫೆರ್ರಿ ನಿಲ್ದಾಣಗಳನ್ನು ನಿರ್ಮಿಸಲು ಉದ್ದೇಶಿಸಲಾಗಿತ್ತು. ಯೋಜನೆಯನ್ನು 20 ವರ್ಷಗಳ ರಿಯಾಯಿತಿ (Concession) ಅವಧಿಯಲ್ಲಿ ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ಜಾರಿಗೊಳಿಸುವ ಉದ್ದೇಶವೂ ಇತ್ತು.

ಇದೇ ವೇಳೆ, ಕೆನರಾ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ವಿಮಾನಯಾನ, ವಿಮಾನ ನಿಲ್ದಾಣ ಮತ್ತು ಪ್ರವಾಸೋದ್ಯಮ ಉಪಸಮಿತಿಯ ಅಧ್ಯಕ್ಷ ಯತೀಶ್ ಬೈಕಮಪಾಡಿ, ಈ ಯೋಜನೆಯ ಯಶಸ್ಸಿನ ಬಗ್ಗೆ ಆರಂಭದಿಂದಲೇ ಅನುಮಾನ ವ್ಯಕ್ತಪಡಿಸಿದ್ದಾರೆ.

"ಫೆರ್ರಿ ಸೇವೆಗಳು ರಸ್ತೆ ಸಾರಿಗೆಯ ವೇಗವನ್ನು ಎಂದಿಗೂ ಸರಿಗಟ್ಟಲು ಸಾಧ್ಯವಿಲ್ಲ. ಇಂತಹ ಯೋಜನೆಗಳಲ್ಲಿ ಹೂಡಿಕೆ ಮಾಡಲು ಯಾರು ಮುಂದೆ ಬರುತ್ತಾರೆ?" ಎಂದು ಪ್ರಶ್ನಿಸಿದ್ದಾರೆ.

ಆದರೆ, ಯೋಜನೆಯ ಪರವಾಗಿದ್ದವರು, ಈ ಕರಾವಳಿ ಫೆರ್ರಿ ಸೇವೆ ಜಾರಿಯಾದರೆ ಪ್ರವಾಸೋದ್ಯಮ ಮಾತ್ರವಲ್ಲದೆ ವ್ಯಾಪಾರ ಚಟುವಟಿಕೆಗಳಿಗೂ ಉತ್ತೇಜನ ಸಿಗಲಿದೆ ಎಂದು ವಾದಿಸಿದ್ದರು.

ಜೊತೆಗೆ, ರಾಷ್ಟ್ರೀಯ ಹೆದ್ದಾರಿ-66ರ ವಾಹನ ದಟ್ಟಣೆಗೆ ಪರ್ಯಾಯವಾಗಿ ಸುಂದರ ಕರಾವಳಿ ಜಲಮಾರ್ಗದ ಮೂಲಕ ಪ್ರಯಾಣಿಸುವ ಅವಕಾಶ ದೊರೆಯಲಿದ್ದು, ಪರಿಸರ ಸ್ನೇಹಿ ಹಾಗೂ ಸುಸ್ಥಿರ ಸಾರಿಗೆ ವ್ಯವಸ್ಥೆ ಅಭಿವೃದ್ಧಿಯಾಗಲಿದೆ ಎಂಬ ನಿರೀಕ್ಷೆಯೂ ಇತ್ತು.

ಇದೀಗ ಕೇಂದ್ರ ಸರ್ಕಾರ ಅನುದಾನ ನಿರಾಕರಿಸಿರುವ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ಯೋಜನೆಯನ್ನು ತನ್ನ ಸ್ವಂತ ಸಂಪನ್ಮೂಲಗಳಿಂದ ಅಥವಾ ಪರ್ಯಾಯ ಹಣಕಾಸು ವ್ಯವಸ್ಥೆಗಳ ಮೂಲಕ ಮುಂದುವರಿಸುತ್ತದೆಯೇ ಎಂಬುದರ ಬಗ್ಗೆ ಇದೀಗ ಕುತೂಹಲ ಮೂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್: ದೆಹಲಿ ಪೊಲೀಸರಿಂದ FIR ದಾಖಲು, ಸಾಮಾಜಿಕ ಜಾಲತಾಣ Xಗೆ ನೋಟಿಸ್ ಜಾರಿ..!

Video: 'POK ಪ್ರತಿಭಟನಾಕಾರರೂ ಭಾರತದಷ್ಟೇ ಶತ್ರುಗಳು'; 32 ಮಂದಿ ಹತ್ಯೆ ಸಮರ್ಥಿಸಿಕೊಂಡ ಪಾಕ್ ರಕ್ಷಣಾ ಸಚಿವ Khawaja Asif

ಐಫೋನ್‌ಗಳ ಅಬ್ಬರ: ಭಾರತದ ಸ್ಮಾರ್ಟ್‌ಫೋನ್ ರಫ್ತು 10 ಬಿಲಿಯನ್ ಗೇರಿಕೆ, 'ಮೇಕ್ ಇನ್ ಇಂಡಿಯಾ'ಗೆ ಜಾಗತಿಕ ಮನ್ನಣೆ

ಇರಾಕ್‌ನಲ್ಲಿ ಅಮೆರಿಕ-ಸೌದಿ ಜಂಟಿ ವಾಯುದಾಳಿ: ಇರಾನ್ ಬೆಂಬಲಿತ ಉಗ್ರ ನೆಲೆಗಳು ಧ್ವಂಸ, ಮಧ್ಯಪ್ರಾಚ್ಯ ಮತ್ತೆ ಉದ್ವಿಗ್ನ..!

ರಾಜ್ಯ ಸಚಿವ ಸಂಪುಟ ವಿಸ್ತರಣೆ: ಇಂದೇ ರಾಹುಲ್ ಗಾಂಧಿ ಒಪ್ಪಿಗೆ ಸಾಧ್ಯತೆ, ನಾಳೆ ಸಂಜೆ ನೂತನ ಸಚಿವರ ಪಟ್ಟಾಭಿಷೇಕ..?