ಯಾದಗಿರಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಕರ್ನಾಟಕದ ಯಾದಗಿರಿ ಜಿಲ್ಲೆಯ ಕಳಪೆ ಸಾಮಾಜಿಕ-ಆರ್ಥಿಕ ಸೂಚ್ಯಂಕಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಮಹಿಳಾ ಸಾಕ್ಷರತಾ ಪ್ರಮಾಣ ಕಡಿಮೆಯಾಗಿರುವುದು, ಬಹು ಆಯಾಮದ ಬಡತನದ ಪ್ರಮಾಣ ಹೆಚ್ಚಿರುವುದು, ರಾಜ್ಯದ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಕೊನೆಯ ಸ್ಥಾನದಲ್ಲಿರುವುದು ಹಾಗೂ ತಲಾ ಆದಾಯ ಅತಿ ಕಡಿಮೆ ಇರುವುದು ಆತಂಕಕಾರಿ ಸಂಗತಿಗಳಾಗಿವೆ ಎಂದು ಹೇಳಿದರು.
ಕರ್ನಾಟಕದಿಂದ ರಾಜ್ಯಸಭಾ ಸದಸ್ಯೆಯಾಗಿರುವ ಸೀತಾರಾಮನ್, ಯಾದಗಿರಿಗೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಆಡಳಿತದಿಂದ ತುರ್ತು ಮತ್ತು ವಿಶೇಷ ಗಮನದ ಅಗತ್ಯವಿದೆ ಎಂದು ಒತ್ತಿ ಹೇಳಿದರು.
ಯಾದಗಿರಿಯಲ್ಲಿ ಸಂಪೂರ್ಣವಾಗಿ ಮಹಿಳೆಯರೇ ನಿರ್ವಹಿಸುತ್ತಿರುವ ನಬಾರ್ಡ್ ನೆರವಿನ ಕಡಲೆಕಾಯಿ ಮೌಲ್ಯವರ್ಧನೆ ಘಟಕವನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, 'ಯಾದಗಿರಿ ಹಾಗೂ ಪಕ್ಕದ ರಾಯಚೂರು ಜಿಲ್ಲೆಗಳನ್ನು "ಆಕಾಂಕ್ಷಿ ಜಿಲ್ಲೆಗಳು" (Aspirational Districts) ಎಂದು ಗುರುತಿಸಲಾಗಿದೆ. ಏಕೆಂದರೆ ಅಭಿವೃದ್ಧಿಯ ಫಲಗಳು ರಾಜ್ಯದ ಇತರ ಭಾಗಗಳಷ್ಟು ವೇಗವಾಗಿ ಈ ಪ್ರದೇಶಗಳಿಗೆ ತಲುಪಿಲ್ಲ. ಈ ಅಂತರವನ್ನು ನಿವಾರಿಸಲು ಎಲ್ಲ ಹಂತದ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡಬೇಕು' ಎಂದು ಹೇಳಿದರು.
"ಕರ್ನಾಟಕದ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಯಾದಗಿರಿ ಯಾವ ಸ್ಥಾನದಲ್ಲಿದೆ ಗೊತ್ತೇ? ಅದನ್ನು ನೋಡಿದರೆ ನನ್ನ ಕಣ್ಣಲ್ಲಿ ನೀರು ಬರುತ್ತದೆ. ಮೊದಲನೆಯದು, ಎರಡನೆಯದು, ಮೂರನೆಯದು ಅಥವಾ ನಾಲ್ಕನೆಯದು ಅಲ್ಲ; ಅದು ಪಟ್ಟಿಯ ಕೊನೆಯ ಸ್ಥಾನದಲ್ಲಿದೆ. ಕರ್ನಾಟಕದ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಯಾದಗಿರಿ ಕೊನೆಯ ಸ್ಥಾನದಲ್ಲಿರುವುದು ನನಗೆ ತುಂಬಾ ದುಃಖ ಉಂಟುಮಾಡುತ್ತದೆ," ಎಂದು ಅವರು ಹೇಳಿದರು.
ಯಾದಗಿರಿ ಜನರ ತಪ್ಪೇನೂ ಇಲ್ಲ. ಕಳೆದ ಹಲವು ವರ್ಷಗಳಿಂದ ಸಮರ್ಪಕ ಅಭಿವೃದ್ಧಿ ಈ ಭಾಗಕ್ಕೆ ತಲುಪದಿರುವುದೇ ಇಂದಿನ ಪರಿಸ್ಥಿತಿಗೆ ಕಾರಣ. ದೇಶದ ಇತರ ಭಾಗಗಳಲ್ಲಿ ಹೆಣ್ಣುಮಕ್ಕಳು ಎಂಜಿನಿಯರ್‌ಗಳು, ಐಎಎಸ್ ಅಧಿಕಾರಿಗಳು ಹಾಗೂ ದೊಡ್ಡ ಕಂಪನಿಗಳ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವಾಗ, ಯಾದಗಿರಿ ಬಹಳ ಹಿಂದಿದೆ. ಯಾದಗಿರಿಯಲ್ಲಿ ಪ್ರತಿ 100 ಮಹಿಳೆಯರಲ್ಲಿ ಕೇವಲ 41 ಮಂದಿ ಮಾತ್ರ ಸಾಕ್ಷರರು ಅಥವಾ ಶಾಲೆ-ಕಾಲೇಜುಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದರು.
ಅನಕ್ಷರತೆ, ಬಡತನ, ಅತಿ ಕಡಿಮೆ ತಲಾ ಆದಾಯ
ಮೂಲಸೌಕರ್ಯಗಳ ಕುರಿತು ಮಾತನಾಡಿದ ಅವರು, ಜಿಲ್ಲೆಯಲ್ಲಿ ಶಾಲೆಗಳಿದ್ದರೂ ಶಿಕ್ಷಕರಿಲ್ಲ, ಶೌಚಾಲಯಗಳ ಕೊರತೆ ಇದೆ ಮತ್ತು ಸಾಕಷ್ಟು ತರಗತಿ ಕೊಠಡಿಗಳೂ ಇಲ್ಲ. ಜಿಲ್ಲೆಯ ಬಡತನದ ಪರಿಸ್ಥಿತಿಯನ್ನೂ ಅವರು ಉಲ್ಲೇಖಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ಬಡತನವನ್ನು ಬಹುಆಯಾಮದ ಮಾನದಂಡಗಳ ಆಧಾರದ ಮೇಲೆ ಜಿಲ್ಲಾವಾರು ಅಳೆಯಲು ಆರಂಭಿಸಲಾಯಿತು. ವಿವಿಧ ಯೋಜನೆಗಳ ಮೂಲಕ ದೇಶದಾದ್ಯಂತ ಸುಮಾರು 25 ಕೋಟಿ ಜನರನ್ನು ಬಹುಆಯಾಮದ ಬಡತನದಿಂದ ಹೊರತರಲಾಗಿದೆ. ಆದರೂ ಈ ಎಲ್ಲ ಪ್ರಯತ್ನಗಳ ನಡುವೆಯೂ ಯಾದಗಿರಿ ಇನ್ನೂ ದೇಶದ ಅತ್ಯಂತ ಬಡ ಜಿಲ್ಲೆಗಳಲ್ಲಿ ಒಂದಾಗಿ ಉಳಿದಿದೆ ಎಂದರು.
ಬೆಂಗಳೂರಿನೊಂದಿಗೆ ಹೋಲಿಕೆ ಮಾಡುತ್ತಾ, ಕರ್ನಾಟಕದಲ್ಲಿ ಅತಿ ಹೆಚ್ಚು ತಲಾ ಆದಾಯ ಹೊಂದಿರುವ ನಗರ ಬೆಂಗಳೂರು ಆಗಿದ್ದರೆ, ಯಾದಗಿರಿ ಅತಿ ಕಡಿಮೆ ತಲಾ ಆದಾಯ ಹೊಂದಿರುವ ಜಿಲ್ಲೆಗಳಲ್ಲಿ ಒಂದಾಗಿದೆ. ಯಾದಗಿರಿಯ ಆರ್ಥಿಕತೆ ಬಹುತೇಕ ಕೃಷಿಯನ್ನೇ ಅವಲಂಬಿಸಿದೆ. ಜಿಲ್ಲೆಯ ಸುಮಾರು 75 ಶೇಕಡಾ ಭೂಮಿ ಕೃಷಿಗೆ ಬಳಸಲಾಗುತ್ತಿದೆ. ಗುರುಮಿಟ್ಕಲ್ ತಾಲ್ಲೂಕಿನಲ್ಲಿ ನೀರಾವರಿ ಸೌಲಭ್ಯಗಳ ಕೊರತೆ ಇರುವುದರ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದರು. ಅಲ್ಲದೆ ಶಿಕ್ಷಣ ಮತ್ತು ಆರೋಗ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಇನ್ನೂ ಸಾಕಷ್ಟು ಕೆಲಸ ಮಾಡಬೇಕಿದ್ದು, ಜಿಲ್ಲೆಯ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಬೆಂಬಲ ಮುಂದುವರಿಯಲಿದೆ ಎಂದು ಭರವಸೆ ನೀಡಿದರು.
ಶೇಂಗಾ ಸಂಸ್ಕರಣಾ ಘಟಕ ಸ್ಥಾಪನೆಯ ಉದ್ದೇಶವನ್ನು ವಿವರಿಸಿದ ಅವರು, ಯಾದಗಿರಿಯಲ್ಲಿ ವರ್ಷಕ್ಕೆ ಸುಮಾರು 22,500 ಮೆಟ್ರಿಕ್ ಟನ್ ಶೇಂಗಾ ಬೆಳೆಯಲಾಗುತ್ತಿದ್ದು, ಮೌಲ್ಯವರ್ಧನೆಗೆ ಉತ್ತಮ ಅವಕಾಶಗಳಿವೆ. ಈಗ ನಾವು ಕಡಲೆಕಾಯಿ ಹುರಿಯುವುದು, ಎಣ್ಣೆ ಉತ್ಪಾದಿಸುವುದು ಹಾಗೂ ಪೀನಟ್ ಬಟರ್ ಸೇರಿದಂತೆ ವಿವಿಧ ಉತ್ಪನ್ನಗಳನ್ನು ತಯಾರಿಸಬಲ್ಲ ಘಟಕವನ್ನು ಸ್ಥಾಪಿಸಿದ್ದೇವೆ. ಈ ಘಟಕವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವ ಪೆದ್ದಪಲ್ಲಿ ಮಹಿಳಾ ರೈತರ ಉತ್ಪಾದಕರ ಕಂಪನಿ ಲಿಮಿಟೆಡ್‌ನ್ನು ಅವರು ಶ್ಲಾಘಿಸಿದರು. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಸ್ಥಾಪಿಸಲಾದ ಏಳು ಮೌಲ್ಯವರ್ಧನೆ ಘಟಕಗಳಲ್ಲಿ, ಯಾದಗಿರಿ ಘಟಕವನ್ನು ಮಾತ್ರ ಸಂಪೂರ್ಣವಾಗಿ ಮಹಿಳೆಯರೇ ನಿರ್ವಹಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.
ಆದರೆ, ಘಟಕವನ್ನು ನಡೆಸುತ್ತಿರುವ ಮಹಿಳೆಯರು ರೈತರಿಂದ ನೇರವಾಗಿ ಶೇಂಗಾ ಖರೀದಿಸಲು ಸಮಸ್ಯೆ ಎದುರಿಸುತ್ತಿದ್ದಾರೆ ಎಂಬ ಮಾಹಿತಿ ತಮಗೆ ಲಭ್ಯವಾಗಿದೆ. ಮಾರುಕಟ್ಟೆ ಮತ್ತು ಮಂಡಿಗಳಿಂದ ಖರೀದಿಸಲು ಮಹಿಳೆಯರು ಪ್ರಯತ್ನಿಸುತ್ತಿದ್ದು, ಈ ಉದ್ದೇಶಕ್ಕಾಗಿ ನಬಾರ್ಡ್ ವಿಶೇಷ ಅಧಿಕಾರಿಯನ್ನೂ ನೇಮಿಸಿದೆ. ಆದರೂ ರೈತರಿಂದ ನೇರವಾಗಿ ಖರೀದಿಸುವಲ್ಲಿ ಮಧ್ಯವರ್ತಿಗಳ ಅಡ್ಡಿ ಎದುರಾಗುತ್ತಿದೆ. ಕಚ್ಚಾ ವಸ್ತುಗಳ ಖರೀದಿಯಲ್ಲಿ ಏಕೆ ಸಮಸ್ಯೆ ಎದುರಾಗುತ್ತಿದೆ ಎಂದು ಸ್ಥಳೀಯ ಆಡಳಿತವನ್ನು ಪ್ರಶ್ನಿಸಿದ ಅವರು, ಈ ಬಗ್ಗೆ ಹೊಣೆಗಾರಿಕೆ ನಿಭಾಯಿಸಬೇಕು ಎಂದು ಸೂಚಿಸಿದರು.
ಸರ್ಕಾರಗಳು ಮಾತ್ರ ಅಭಿವೃದ್ಧಿ ಸಾಧಿಸಲು ಸಾಧ್ಯವಿಲ್ಲ
ಅಂತೆಯೇ ಒಂದೇ ಒಂದು ಘಟಕದಿಂದ ಯಾದಗಿರಿಯ ಸಂಪೂರ್ಣ ಶೇಂಗಾ ಉತ್ಪಾದನೆಯನ್ನು ಬಳಸಿಕೊಳ್ಳಲು ಸಾಧ್ಯವಿಲ್ಲ. ಇನ್ನೂ ಅನೇಕ ಇಂತಹ ಘಟಕಗಳ ಅಗತ್ಯವಿದೆ. ಈ ಯೋಜನೆಗೆ ಸ್ಥಳೀಯ ಜನಪ್ರತಿನಿಧಿಗಳು, ಜಿಲ್ಲಾ ಅಧಿಕಾರಿಗಳು ಹಾಗೂ ಕೃಷಿ ಕಾರ್ಯದರ್ಶಿಗಳು ವಿಶೇಷ ಗಮನ ಹರಿಸಬೇಕು ಎಂದು ಅವರು ಕರೆ ನೀಡಿದರು. ಸರ್ಕಾರಗಳು ಮಾತ್ರ ಅಭಿವೃದ್ಧಿ ಸಾಧಿಸಲು ಸಾಧ್ಯವಿಲ್ಲ; ಜನರು ಹಾಗೂ ಸ್ಥಳೀಯ ಆಡಳಿತವೂ ಹೆಚ್ಚಿನ ಪ್ರಯತ್ನ ಮಾಡಬೇಕು ಎಂದರು.
ಯಾದಗಿರಿ ಅಭಿವೃದ್ಧಿ ಹೊಂದಬೇಕಾದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾತ್ರ ಕೆಲಸ ಮಾಡಿದರೆ ಸಾಲದು. ಜನರು ಹಾಗೂ ಸ್ಥಳೀಯ ಆಡಳಿತವೂ ಹೆಚ್ಚಿನ ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸಬೇಕು. ಈ ಘಟಕದಲ್ಲಿ ತಯಾರಾಗುವ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುವಂತೆ ನಬಾರ್ಡ್‌ಗೆ ಮನವಿ ಮಾಡಿದ ಅವರು, ಇ-ಕಾಮರ್ಸ್ ಮತ್ತು ಕ್ವಿಕ್-ಕಾಮರ್ಸ್ ವೇದಿಕೆಗಳ ಮೂಲಕ ಉತ್ಪಾದಕರ ಕಂಪನಿಗೆ ವಿಸ್ತರಣೆಗೆ ನೆರವು ನೀಡುವಂತೆ ಕೋರಿದರು.
ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆ ಮಾವಿನ ಹಣ್ಣಿಗೆ ಪ್ರಸಿದ್ಧವಾಗಿರುವುದನ್ನು ಉಲ್ಲೇಖಿಸಿದ ಅವರು, "ಚಿತ್ತೂರು ಮಾವಿಗೆ ಹೇಗೆ ಹೆಸರುವಾಸಿಯಾಗಿದೆಯೋ, ಹಾಗೆಯೇ ಯಾದಗಿರಿ ಕಡಲೆಕಾಯಿಗೆ ಹೆಸರುವಾಸಿಯಾಗಲಿ ಎಂದು ನಾನು ಆಶಿಸುತ್ತೇನೆ. ನಬಾರ್ಡ್ ನೆರವಿನ ಈ ಘಟಕ ಯಶಸ್ವಿಯಾಗಿ ಕಾರ್ಯನಿರ್ವಹಿಸಿದರೆ ಜಿಲ್ಲೆಯಲ್ಲಿ ಖಾಸಗಿ ಹೂಡಿಕೆಯನ್ನು ಕೂಡ ಆಕರ್ಷಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಯಾದಗಿರಿ ಜಿಲ್ಲೆಯ ಬಾಡೆಪಲ್ಲಿ ಗ್ರಾಮದಲ್ಲಿ ರೈತರ ತರಬೇತಿ ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರವನ್ನೂ ಕೇಂದ್ರ ಹಣಕಾಸು ಸಚಿವೆ ಉದ್ಘಾಟಿಸಿದರು.
ಅಂದಹಾಗೆ ಯಾದಗಿರಿ ಜಿಲ್ಲೆ ರಾಯಚೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಈ ಕ್ಷೇತ್ರವನ್ನು ಪ್ರಸ್ತುತ ಕಾಂಗ್ರೆಸ್ ಸಂಸದ ಜಿ. ಕುಮಾರ ನಾಯಕ ಪ್ರತಿನಿಧಿಸುತ್ತಿದ್ದಾರೆ. ಯಾದಗಿರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಕಾಂಗ್ರೆಸ್‌ನ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹಾಗೂ ಗುರುಮಿಟ್ಕಲ್ ಕ್ಷೇತ್ರದ ಶಾಸಕರಾಗಿ ಜೆಡಿಎಸ್‌ನ ಶರಣಗೌಡ ಕಂದಕೂರ ಕಾರ್ಯನಿರ್ವಹಿಸುತ್ತಿದ್ದಾರೆ.