ಬೆಂಗಳೂರು: ಕುಖ್ಯಾತ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಪ್ರಕರಣದ ತನಿಖೆಯಲ್ಲಿ ಮತ್ತಷ್ಟು ಸ್ಫೋಟಕ ಮಾಹಿತಿಗಳು ಬಹಿರಂಗಗೊಂಡಿದೆ.
ನಗರದ ಉದ್ಯಮಿ ಸುನೀಶ್ ಹೆಗ್ಡೆ ಅವರು ಹ್ಯಾಕ್ ಮಾಡಲಾದ ಆನ್‌ಲೈನ್ ಪೋಕರ್ ವೆಬ್‌ಸೈಟ್‌ಗಳ ಮಾಹಿತಿಯನ್ನು ಬಳಸಿಕೊಂಡು ಕೋಟ್ಯಂತರ ರೂಪಾಯಿ ವಸೂಲಿ ನಡೆಸಿದ್ದರು ಎಂದು ಜಾರಿ ನಿರ್ದೇಶನಾಲಯ (ED) ಆರೋಪಿಸಿದೆ.
2017ರಿಂದಲೇ ಸುನೀಶ್ ಹೆಗ್ಡೆ ನಗದು, ಬ್ಯಾಂಕ್ ವರ್ಗಾವಣೆ ಮತ್ತು ಕ್ಯಾಸಿನೊ ಚಿಪ್‌ಗಳ ರೂಪದಲ್ಲಿ ಅಕ್ರಮ ಹಣ (Proceeds of Crime) ಪಡೆದಿದ್ದಾರೆ.
ವಿಚಾರಣೆ ವೇಳೆ ಶ್ರೀಕಿ, ಪೋಕರ್‌ಸೇಂಟ್ ಸೇರಿದಂತೆ ಹಲವು ಆನ್‌ಲೈನ್ ಪೋಕರ್ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿದ್ದಾಗಿ ಹೇಳಿದ್ದಾನೆ. ಹ್ಯಾಕ್ ಮಾಡಿದ ಡೇಟಾಬೇಸ್‌ಗಳನ್ನು ಸುನೀಶ್ ಹೆಗ್ಡೆ ತನ್ನ ಪೋಕರ್ ವ್ಯವಹಾರಕ್ಕೆ ಬಳಸಿಕೊಂಡು ಸುಮಾರು 6 ಕೋಟಿ ರೂಪಾಯಿ ಗಳಿಕೆ ಮಾಡಿದ್ದಾನೆ ಎಂದು ನೀಡಿದ್ದಾನೆಂದು ಇಡಿ ತಿಳಿಸಿದೆ.
ಇನ್ನೊಂದು ಪ್ರಮುಖ ಆರೋಪವೆಂದರೆ, ಜನಪ್ರಿಯ ಪೋಕರ್‌ಬಾಜಿ ವೆಬ್‌ಸೈಟ್‌ನ್ನು ಕೂಡ ಸುನೀಶ್ ಹೆಗ್ಡೆಯ ಸೂಚನೆಯ ಮೇರೆಗೆ ಶ್ರೀಕಿ ಹ್ಯಾಕ್ ಮಾಡಿದ್ದಾನೆ ಎನ್ನಲಾಗಿದೆ.
ಸುನೀಶ್ ಹೆಗ್ಡೆ ವೆಬ್‌ಸೈಟ್ ಮಾಲೀಕರನ್ನು ಸಂಪರ್ಕಿಸಿ ಸಮಸ್ಯೆ ಸರಿಪಡಿಸುವುದಾಗಿ ಹೇಳಿ 2 ಕೋಟಿ ರೂಪಾಯಿ ಪಡೆದಿದ್ದಾನೆ. ಇದನ್ನು "ಸುಲಿಗೆಯ ಆಟ" ಎಂದು ಶ್ರೀಕಿ ತನಿಖಾಧಿಕಾರಿಗಳಿಗೆ ಹೇಳಿದ್ದಾನೆ ಎಂದು ವರದಿಯಾಗಿದೆ.
ಪೋಕರ್‌ಬಾಜಿ ಮಾಲೀಕರಿಂದ ನಗದು ಹಣದ ಜೊತೆಗೆ ಸುಮಾರು 20 ಲಕ್ಷ ರೂಪಾಯಿ ಮೌಲ್ಯದ ಕ್ಯಾಸಿನೊ ಚಿಪ್‌ಗಳನ್ನು ಹೆಗ್ಡೆ ಪಡೆದಿದ್ದಾನೆ ಎನ್ನಲಾಗಿದೆ. ಈ ಚಿಪ್‌ಗಳನ್ನು ಶ್ರೀಕಿ ಮತ್ತು ಆತನ ಸಹಚರರು ವಿದೇಶಿ ಕ್ಯಾಸಿನೊಗಳಲ್ಲಿ ಬಳಸಿದ್ದರು ಎಂದು ಇಡಿ ಹೇಳಿದೆ.
ಅಶೋಕ್‌ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಮತ್ತೊಂದು ಪ್ರಕರಣದಲ್ಲಿ 28 ಲಕ್ಷ ರೂಪಾಯಿ ಹಣವನ್ನು ಹೆಗ್ಡೆ ಖಾತೆಗೆ ವರ್ಗಾಯಿಸಿರುವ ಮಾಹಿತಿ ಪತ್ತೆಯಾಗಿದೆ.
ಸಿಐಡಿ ನಡೆಸಿದ ವಿಧಿವಿಜ್ಞಾನ ಲೆಕ್ಕಪರಿಶೋಧನೆಯಲ್ಲಿ, ರಾಬಿನ್ ಖಂಡೇಲ್ವಾಲ್ ಮೂಲಕ 20 ಲಕ್ಷ ರೂಪಾಯಿ ಗೋವಾದ ಕ್ಯಾಸಿನೊ ನಡೆಸುವ Delta Corp Ltd ಖಾತೆಗೆ ವರ್ಗಾವಣೆಗೊಂಡಿದ್ದು, ನಂತರ ಅದು ಹೆಗ್ಡೆ ಖಾತೆಗೆ ಜಮೆಯಾಗಿರುವುದು ಪತ್ತೆಯಾಗಿದೆ. ಈ ಹಣವನ್ನು ಜೂಜಾಟಕ್ಕಾಗಿ ಬಳಸಲಾಗಿದೆ ಎಂದು ಆರೋಪಿಸಲಾಗಿದೆ.
2026ರ ಏಪ್ರಿಲ್‌ನಲ್ಲಿ ಸುನೀಶ್ ಹೆಗ್ಡೆ ನಿವಾಸದ ಮೇಲೆ ನಡೆಸಿದ ಶೋಧದ ವೇಳೆ 9.25 ಲಕ್ಷ ರೂಪಾಯಿ ನಗದು ಮತ್ತು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿತ್ತು. ತನಿಖೆಯಲ್ಲಿ ಅವರು Binance ಕ್ರಿಪ್ಟೋ ವಾಲೆಟ್ ಬಳಸಿದ್ದು, 1 ಲಕ್ಷಕ್ಕೂ ಹೆಚ್ಚು USDT (ಸ್ಟೇಬಲ್‌ಕಾಯಿನ್) ವಹಿವಾಟು ನಡೆಸಿರುವುದು ಬೆಳಕಿಗೆ ಬಂದಿದೆ.
ಈ ನಡುವೆ ತಾನು ಯಾವುದೇ ಕ್ರಿಪ್ಟೋಕರೆನ್ಸಿ ಖಾತೆ ಹೊಂದಿಲ್ಲ ಮತ್ತು ಕ್ರಿಪ್ಟೋ ಆಸ್ತಿಗಳೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಸುನೀಶ್ ಹೆಗ್ಡೆ ಹೇಳಿದ್ದಾನೆ. ಆದರೆ, ವಶಪಡಿಸಿಕೊಂಡ ಸಾಕ್ಷ್ಯಗಳು ಮತ್ತು ಬ್ಯಾಂಕ್ ದಾಖಲೆಗಳು ಈತನ ಹೇಳಿಕೆಗೆ ವಿರುದ್ಧವಾಗಿವೆ ಎಂದು ಇಡಿ ತಿಳಿಸಿದೆ.
ಏತನ್ಮಧ್ಯೆ ವಿದೇಶಗಳಿಂದ ಡಾರ್ಕ್ ವೆಬ್ ಮೂಲಕ ನಿಷೇಧಿತ ಮಾದಕ ವಸ್ತುಗಳನ್ನು ಖರೀದಿಸಿದ ಆರೋಪಕ್ಕೂ ಸುನೀಶ್ ಹೆಗ್ಡೆ ಗುರಿಯಾಗಿದ್ದಾನೆ. ಅಪರಾಧದ ಆದಾಯ ಹಾಗೂ ವರ್ಚುವಲ್ ಡಿಜಿಟಲ್ ಆಸ್ತಿಗಳನ್ನು ಬಳಸಿಕೊಂಡು ಅಮೆರಿಕದಿಂದ ಮಾದಕ ವಸ್ತುಗಳನ್ನು ತರಿಸಿಕೊಂಡಿರುವ ಶಂಕೆಯ ಮೇರೆಗೆ ಇಡಿ ತನಿಖೆ ನಡೆಸುತ್ತಿದೆ.
ತನಿಖೆಯ ಪ್ರಕಾರ, ಹೆಗ್ಡೆ ಮತ್ತು ಅವರ ಮೂವರು ಸಹಚರರು ಬೆಂಗಳೂರಿನ ಕಾಟನ್‌ಪೇಟೆಯ ವಿದೇಶಿ ಅಂಚೆ ಕಚೇರಿಗೆ ತೆರಳಿ ಅಮೆರಿಕದಿಂದ ಬಂದಿದ್ದ ಪಾರ್ಸೆಲ್‌ನ್ನು ಪಡೆಯಲು ಯತ್ನಿಸಿದ್ದರು.
ನಕಲಿ ಹೆಸರು ಮತ್ತು ನಕಲಿ ವಿಳಾಸ ಬಳಸಿ ಕಳುಹಿಸಲಾಗಿದ್ದ ಪಾರ್ಸೆಲ್‌ನಲ್ಲಿ ಮಾದಕ ವಸ್ತುಗಳಿದ್ದವು ಎಂದು ತನಿಖೆಯಿಂದ ತಿಳಿದುಬಂದಿದೆ.
ಪಾರ್ಸೆಲ್ ಪಡೆಯಲು ಅಂಚೆ ಕಚೇರಿ ಸಿಬ್ಬಂದಿಗೆ ಯುಪಿಐ ಮೂಲಕ 1,000 ರೂಪಾಯಿ ಮತ್ತು ನಗದು ರೂಪದಲ್ಲಿ 10,000 ರೂಪಾಯಿ ಲಂಚ ನೀಡಲಾಗಿತ್ತು ಎಂಬ ಆರೋಪವೂ ಕೇಳಿಬಂದಿದೆ.
ಶ್ರೀಕಿ ಹ್ಯಾಕಿಂಗ್ ಪ್ರಕರಣದಲ್ಲಿ ಈಗಾಗಲೇ ಹಲವು ಎಫ್‌ಐಆರ್‌ಗಳು ದಾಖಲಾಗಿದ್ದು, ಸುನೀಶ್ ಹೆಗ್ಡೆ ವಿರುದ್ಧವೂ ಹಲವು ಆರೋಪಪಟ್ಟಿಗಳು ಬಾಕಿ ಇವೆ. ಈ ಪ್ರಕರಣದಲ್ಲಿ ಹಣ ಅಕ್ರಮ ವರ್ಗಾವಣೆ, ಸೈಬರ್ ಅಪರಾಧ, ಕ್ರಿಪ್ಟೋ ವಹಿವಾಟು ಹಾಗೂ ಮಾದಕ ವಸ್ತು ಜಾಲದ ಸಂಪರ್ಕಗಳ ಕುರಿತು ಇಡಿ ತನ್ನ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.