ಮಡಿಕೇರಿ: ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದ ಮೈಸೂರಿನ ಯುವತಿ ಹೋಂ ಸ್ಟೇನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತಳನ್ನು ಮೈಸೂರಿನ ಯರಗನಹಳ್ಳಿಯ ಪಾಪಣ್ಣ ಬಡಾವಣೆ ನಿವಾಸಿ ಜಗನ್ನಾಥ ಮತ್ತು ರೇಣುಕಾ ದಂಪತಿಯ ಪುತ್ರಿ 27 ವರ್ಷದ ವಿನುತಾ ಎಂದು ಗುರುತಿಸಲಾಗಿದೆ.
ಕೊಡಗಿನ ಸೋಮವಾರಪೇಟೆಯ ಚೌಡ್ಲು ಗ್ರಾಮದ ಹೋಂಸ್ಟೇಗೆ ವಿನುತಾ ತನ್ನ 14 ಜನರ ಸ್ನೇಹಿತರೊಂದಿಗೆ ಬಂದಿದ್ದಳು. ಬೆಳಗ್ಗೆ ಸ್ನಾನಕ್ಕೆ ತೆರಳಿದ್ದಾಗ ವಿನುತಾ ಕುಸಿದು ಬಿದ್ದು ಮೃತಪಟ್ಟಿದ್ದರು. ಗ್ಯಾಸ್ ಗೀಸರ್ ನಿಂದ ವಿಷಾನಿಲ ಸೋರಿಕೆಯಾಗಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಬಕೆಟ್ ಒಳಗೆ ತಲೆ ಮುಳುಗಿದ ಸ್ಥಿತಿಯಲ್ಲಿ ವಿನುತಾ ಶವ ಪತ್ತೆಯಾಗಿರುವ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.