ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕೃತಿ ದಹನ ಮತ್ತು ಕಾನೂನು ಉಲ್ಲಂಘಿಸಿ ಪ್ರತಿಭಟನೆ ನಡೆಸಿದ ಆರೋಪದಡಿ ಉಡುಪಿ ಬಿಜೆಪಿ ಶಾಸಕ ಯಶ್ ಪಾಲ್ ಸುವರ್ಣ ಸೇರಿದಂತೆ ಇತರರ ವಿರುದ್ಧ ದಾಖಲಾಗಿದ್ದ ಎಫ್ಐಆರ್ ಅನ್ನು ಹೈಕೋರ್ಟ್ ರದ್ದುಗೊಳಿಸಿದೆ. ಆರೋಪಿಗಳ ವಿರುದ್ಧ ಯಾವುದೇ ನೇರ ಸಾಕ್ಷ್ಯಾಧಾರಗಳಿಲ್ಲ ಎಂದು ಹೈಕೋರ್ಟ್ ಈ ತೀರ್ಪು ನೀಡಿದೆ.
2024ರ ಸೆಪ್ಟೆಂಬರ್ 6ರಂದು ಕುಂದಾಪುರ ಶಾಲೆಯೊಂದರ ಪ್ರಾಂಶುಪಾಲರಿಗೆ ರಾಜ್ಯ ಪ್ರಶಸ್ತಿ ತಡೆದಿರುವುದನ್ನು ವಿರೋಧಿಸಿ ಮಣಿಪಾಲದಲ್ಲಿ ಯಶ್ ಪಾಲ್ ಸುವರ್ಣ ಪ್ರತಿಭಟನೆ ನಡೆಸಿದ್ದರು. ಅಲ್ಲದೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಕೃತಿ ದಹಿಸಲಾಗಿತ್ತು. NSUI ಮುಖಂಡ ಸೌರಭ್ ಬಲ್ಲಾಳ್ ಈ ಬಗ್ಗೆ ಮಣಿಪಾಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಇದರ ಆಧಾರದ ಮೇಲೆ ಯಶ್ ಪಾಲ್ ಸುವರ್ಣ ಸೇರಿದಂತೆ 11 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಯಾವುದೇ ಪ್ರಾಥಮಿಕ ಸಾಕ್ಷ್ಯಾಧಾರಗಳಿಲ್ಲದೆ ತನಿಖೆಗೆ ಅನುಮತಿ ನೀಡುವುದು ಕಾನೂನು ಪ್ರಕ್ರಿಯೆ ದುರುಪಯೋಗವಾಗುತ್ತದೆ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.