ಬೆಂಗಳೂರು: ಬೆಂಗಳೂರಿನ ಕಸ್ಟಮ್ಸ್ ಅಧಿಕಾರಿಗಳು ಬುಧವಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಪ್ರಯಾಣಿಕನನ್ನು ಬಂಧಿಸಿದ್ದು, ಆತನಿಂದ 1.37 ಕೋಟಿ ರೂ. ಮೌಲ್ಯದ ಬಂಗಾರ ವಶಕ್ಕೆ ಪಡೆದಿದ್ದಾರೆ.
4 ಕ್ಯಾಪ್ಸುಲ್‌ಗಳಲ್ಲಿ ಚಿನ್ನದ ಪೇಸ್ಟ್ ಅನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ದುಬೈನಿಂದ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕನ ಬಳಿಯಿದ್ದ 1.37 ಕೋಟಿ ಮೌಲ್ಯದ 24 ಕ್ಯಾರೆಟ್ನ 899.50 ಗ್ರಾಂ ಬಂಗಾರವನ್ನು ವಶಕ್ಕೆ ಪಡೆಯಲಾಗಿದೆ. ಆ ಮೂಲಕ ಆರೋಪಿಯ ಕಳ್ಳಾಟವನ್ನು ಅಧಿಕಾರಿಗಳು ಬಯಲಿಗೆಳೆದಿದ್ದಾರೆ.
ಆರೋಪಿ, ನಾಲ್ಕು ಕ್ಯಾಪ್ಸುಲ್‌ಗಳಲ್ಲಿ ಚಿನ್ನದ ಪೇಸ್ಟ್ ಅಡಗಿಸಿ ಸಾಗಟಕ್ಕೆ ಯತ್ನಿಸಿದ್ದ. ಆದರೆ ಅನುಮಾನಾಸ್ಪದ ವರ್ತನೆ ಹಿನ್ನೆಲೆಯಲ್ಲಿ ಅಧಿಕಾರಿಗಳು ತಪಾಸಣೆ ನಡೆಸಿದಾಗ ಚಿನ್ನ ಕಳ್ಳಸಾಗಣೆ ವಿಚಾರ ಬಹಿರಂಗಗೊಂಡಿದೆ.
ಕಸ್ಟಮ್ಸ್ ಕಾಯ್ದೆಯಡಿ ಆರೋಪಿಯನ್ನು ಬಂಧಿಸಲಾಗಿದ್ದು, ವಿಚಾರಣೆ ಮುಂದುವರಿದಿದೆ.