ಸಾರ್ವಜನಿಕರ ಅಹವಾಲುಗಳ ಪರಿಹಾರಕ್ಕೆ ಪ್ರತ್ಯೇಕ ಸಚಿವಾಲಯ ರಚನೆ ಮಾಡಲಾಗುತ್ತಿದ್ದು, ಅದಕ್ಕೆ ಸಚಿವರನ್ನು ಕೂಡ ನೇಮಕ ಮಾಡಲಾಗುವುದು ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿಎಂ ಡಿ.ಕೆ. ಶಿವಕುಮಾರ್, ‘ಇದು ಕೇವಲ ಅರ್ಜಿಗಳನ್ನು ಸಾಗಿಸುವ ಪೋಸ್ಟ್ ಮ್ಯಾನ್ ಕೆಲಸವಲ್ಲ. ಜನರಿಗೆ ನ್ಯಾಯ ದೊರಕಿಸುವ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸಲಿದೆ’ ಎಂದು ಹೇಳಿದರು.
ಈ ಪ್ರಸ್ತಾವಿತ ಸಚಿವಾಲಯವು ಅಹವಾಲು ಪರಿಹಾರ ಕಾರ್ಯಗಳನ್ನು ಸಂಯೋಜಿಸಿ, ನಾಗರಿಕರು ಹಾಗೂ ಆಡಳಿತದ ನಡುವೆ ಉತ್ತಮ ಸಂವಹನವನ್ನು ಖಚಿತಪಡಿಸಲಿದೆ.
224 ಕ್ಷೇತ್ರಗಳಲ್ಲಿ ಜನಸ್ಪಂದನಾ ಸಭೆ ಕಡ್ಡಾಯ
ವಿಧಾನಸಭೆ ಕ್ಷೇತ್ರಗಳಲ್ಲಿ ಸಚಿವರು ಮತ್ತು ಶಾಸಕರ ಸಮ್ಮುಖದಲ್ಲಿ ಜನಸ್ಪಂದನಾ ಸಭೆಗಳನ್ನು ನಡೆಸಲಾಗುತ್ತದೆ. ಕ್ಷೇತ್ರಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿ, ನಂತರ ಸರ್ಕಾರದ ಮಟ್ಟದಲ್ಲಿ ಪರಿಶೀಲಿಸಿ ಪರಿಹಾರ ಒದಗಿಸುವ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸಲಿದೆ.
ಸರಳೀಕರಣ
ಕಟ್ಟಡ ಮಾಲೀಕರಿಗೆ ಮತ್ತೊಂದು ಅವಕಾಶ ದೊರೆತಂತಾಗಿದೆ. ಆಕ್ಯುಪೆನ್ಸಿ ಸರ್ಟಿಫಿಕೇಟ್ (OC) ಮತ್ತು ಕಂಪ್ಲೀಷನ್ ಸರ್ಟಿಫಿಕೇಟ್ (CC) ಸಂಬಂಧ ಸರ್ಕಾರ ಮಹತ್ವದ ಸಡಿಲಿಕೆ ನೀಡಿದೆ. 2026ರ ಮೇ 31ರೊಳಗೆ ಕಟ್ಟಡ ನಿರ್ಮಾಣಕ್ಕಾಗಿ ಅರ್ಜಿ ಸಲ್ಲಿಸಿದವರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಆದರೆ ಗುತ್ತಿಗೆದಾರರ ಮನವಿಯ ಮೇರೆಗೆ, ಕಟ್ಟಡ ಪೂರ್ಣಗೊಂಡು ತಾತ್ಕಾಲಿಕ ವಿದ್ಯುತ್ ಸಂಪರ್ಕ ಹೊಂದಿರುವವರಿಗೆ ಇನ್ನೂ 15 ದಿನಗಳ ಕಾಲ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. GPS ಆಧಾರಿತ ಫೋಟೋ ಸಲ್ಲಿಕೆಯೂ ಕಡ್ಡಾಯವಾಗಿರಲಿದೆ.
ಕರ್ನಾಟಕ ಭವನ-4 ನಿರ್ಮಾಣಕ್ಕಾಗಿ 80 ಕೋಟಿ ರೂಪಾಯಿ ವೆಚ್ಚ
ಯುಪಿಎಸ್ ಸಿ ಸೇರಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ನಡೆಸಲು ಅನುಕೂಲವಾಗುವಂತೆ ದೆಹಲಿಯಲ್ಲಿ ಕರ್ನಾಟಕ ಭವನ-4 ನಿರ್ಮಿಸಲು 80 ಕೋಟಿ ರೂಪಾಯಿ ವಿನಿಯೋಗಿಸಲಾಗುತ್ತದೆ. ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ. ಪ್ರವೇಶಾತಿಯಲ್ಲಿ ಶೇ. 50ರಷ್ಟು ಸ್ಥಾನಗಳನ್ನು ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ, ಉಳಿದ ಅವಕಾಶಗಳನ್ನು ಇತರ ವರ್ಗಗಳಿಗೆ ನೀಡಲಾಗುತ್ತದೆ ಎಂದರು.
ದೇವನಹಳ್ಳಿಯ ಚನ್ನರಾಯಪಟ್ಟಣದಲ್ಲಿ ಕೆಐಎಡಿಬಿಗೆ ಸ್ವಯಂ ಪ್ರೇರಿತವಾಗಿ ಜಮೀನು ನೀಡಲು ಇದ್ದ ಕಾಲಾವಕಾಶವನ್ನು ವಿಸ್ತರಣೆ ಮಾಡುವ ತೀರ್ಮಾನವನ್ನು ಸಂಪುಟ ಕೈಗೊಂಡಿದೆ ಎಂದು ಅವರು ತಿಳಿಸಿದರು.
ಬಸ್ ದರ ಏರಿಕೆ ಶೀಘ್ರ ತೀರ್ಮಾನ
ಡೀಸೆಲ್ ದರ ಏರಿಕೆ ಹಿನ್ನೆಲೆಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ದರ ಹೆಚ್ಚಳದ ಬಗ್ಗೆ ಪ್ರಸ್ತಾವನೆ ಬಂದಿದೆ. ಜನರಿಗೂ ಒಳ್ಳೆಯದಾಗಬೇಕು, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೂಡ ಉಳಿಯಬೇಕು. ಆದಷ್ಟು ಬೇಗ ಈ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಸಿಎಂ ತಿಳಿಸಿದರು.
ಯಾದಗಿರಿಯಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸಂಪುಟ ಅನುಮೋದನೆ ನೀಡಿದೆ. ಹಾಗೆಯೇ ಸಂಡೂರಿನಲ್ಲಿ ೩೦ ಕೋಟಿ ವೆಚ್ಚದಲ್ಲಿ ಬಸ್ ನಿಲ್ದಾಣಕ್ಕೂ ಒಪ್ಪಿಗೆ ನೀಡಲಾಗಿದೆ ಎಂದು ಹೇಳಿದರು.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಹೊಸದಾಗಿ 400 ಬಸ್ ಖರೀದಿಸಲು ಒಪ್ಪಿಗೆ ನೀಡಿದ್ದೇವೆ. ಹಾಗೆಯೇ ವಾಯುವ್ಯ ಸಾರಿಗೆ ಸಂಸ್ಥೆಗೂ 220 ಹೊಸ ಬಸ್‌ಗಳ ಖರೀದಿಗೂ ಸಂಪುಟ ಒಪ್ಪಿಗೆ ನೀಡಿದೆ ಎಂದು ಅವರು ಹೇಳಿದರು.
ಬಿಡದಿ ಟೌನ್ ಶಿಪ್‌ಗೆ ಜೆಡಿಎಸ್ ವಿರೋಧದ ಬಗ್ಗೆ ಪ್ರತಿಕ್ರಿಯಿಸಿದ ಡಿ ಕೆ ಶಿವಕುಮಾರ್, ನಾನು ಈ ಬಗ್ಗೆ ಮಾತನಾಡಲ್ಲ. ಹಿಂದೆ ಕುಮಾರಸ್ವಾಮಿ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಏನು ಮಾಡಿದ್ದರೋ ಅದನ್ನು ನಾನು ಮುಂದುವರೆಸುತ್ತಿದ್ದೇನೆ ಅಷ್ಟೇ. ರಾಜಕಾರಣಕ್ಕಾಗಿ ಅವರು ಇದೆಲ್ಲಾ ಮಾಡುತ್ತಿದ್ದಾರೆ. ಅವರೇಗೆ ರೆಡ್ ಜೋನ್ ಮಾಡಿದರು. ಯಾರಿಗೂ ನಾನು ಜಮೀನು ಕೊಡಿ ಎಂದು ಬಲವಂತ ಮಾಡುತ್ತಿಲ್ಲ. ಭೂಮಿ ಡಿನೋಟಿಫೈ ಮಾಡಿ ನಾನು ಜೈಲಿಗೆ ಹೋಗಲು ತಯಾರಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.