ಫೋನ್ ಪೇ ಮೂಲಕ ಲಂಚ, ಸಿಕ್ಕಿಬಿದ್ದ ಇಪಿಎಫ್ ಅಧಿಕಾರಿ (AI ರಚಿತ ಚಿತ್ರ) TNIE
ರಾಜ್ಯ

ಹೈಟೆಕ್ ಭ್ರಷ್ಟಾಚಾರ; PhonePe ಮೂಲಕ ಲಂಚ ಪಡೆದ EPFO ಸಿಬ್ಬಂದಿಗೆ 3 ವರ್ಷ ಕಠಿಣ ಜೈಲು, ದುಬಾರಿ ದಂಡ: CBI ವಿಶೇಷ ಕೋರ್ಟ್ ಮಹತ್ವದ ತೀರ್ಪು

ಪಿಎಫ್ ಫಲಾನುಭವಿಗಳ ಫೋನ್‌ಪೇ ಖಾತೆಗಳಿಂದ ಲಂಚದ ಹಣ ಜಮೆ ಮಾಡಿಸಿಕೊಂಡ ಆರೋಪದ ಮೇರೆಗೆ ಇಪಿಎಫ್‌ಒ ಹಿರಿಯ ಸಾಮಾಜಿಕ ಭದ್ರತಾ ಸಹಾಯಕ ಎಸ್. ಪ್ರಸನ್ನಗೆ ಸಿಬಿಐ ವಿಶೇಷ ನ್ಯಾಯಾಲಯ 3 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.

ಬೆಂಗಳೂರು: ಹೈಟೆಕ್ ಭ್ರಷ್ಟಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಶೇಷ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು, PhonePe ಮೂಲಕ ಲಂಚ ಪಡೆದ EPFO ಸಿಬ್ಬಂದಿಗೆ 3 ವರ್ಷ ಜೈಲು, ದುಬಾರಿ ದಂಡ ವಿಧಿಸಿದೆ.

ಹೌದು.. ಭವಿಷ್ಯ ನಿಧಿ (ಪಿಎಫ್) ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಪ್ರಕ್ರಿಯೆಗೊಳಿಸುವುದಕ್ಕಾಗಿ ಆರು ಪಿಎಫ್ ಫಲಾನುಭವಿಗಳ ಫೋನ್‌ಪೇ ಖಾತೆಗಳಿಂದ ಲಂಚದ ಹಣ ಜಮೆ ಮಾಡಿಸಿಕೊಂಡ ಆರೋಪದ ಮೇರೆಗೆ ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ)ಯ ಹಿರಿಯ ಸಾಮಾಜಿಕ ಭದ್ರತಾ ಸಹಾಯಕ ಎಸ್. ಪ್ರಸನ್ನಗೆ ಸಿಬಿಐ ವಿಶೇಷ ನ್ಯಾಯಾಲಯ 3 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದ್ದು ಮಾತ್ರವಲ್ಲದೇ ಬರೊಬ್ಬರಿ 1 ಲಕ್ಷ ರೂ ದಂಡ ಕೂಡ ಹೇರಿದೆ.

ಆರೋಪಿಯಾಗಿರುವ ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ)ಯ ಹಿರಿಯ ಸಾಮಾಜಿಕ ಭದ್ರತಾ ಸಹಾಯಕ ಎಸ್. ಪ್ರಸನ್ನ ಅವರ ಫೋನ್‌ಪೇ ಖಾತೆಗೆ ಹಣ ಜಮೆಯಾಗಿರುವುದು ಅಕ್ರಮ ಲಂಚದ ಹಣವನ್ನು ಹೊಂದಿದ್ದಕ್ಕೆ ಸಮಾನವಾಗಿದೆ ಎಂದು ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದ್ದು, ನ್ಯಾಯಾಲಯವು ಪ್ರಸನ್ನ ಅವರಿಗೆ ಮೂರು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹1 ಲಕ್ಷ ದಂಡ ವಿಧಿಸಿದೆ.

"ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 7 ಮತ್ತು 8ರ ಅಡಿಯಲ್ಲಿ ದಾಖಲಾಗುವ ಇತರೆ ಪ್ರಕರಣಗಳಿಗಿಂತ ಭಿನ್ನವಾಗಿ, ಈ ಪ್ರಕರಣದಲ್ಲಿ ಅಕ್ರಮ ಲಂಚದ ಹಣವನ್ನು ಫೋನ್‌ಪೇ ಮೂಲಕ ವರ್ಗಾವಣೆ ಮಾಡಲಾಗಿದೆ. ಆರೋಪಿಯಿಂದ ಕಳಂಕಿತ ಹಣವನ್ನು ವಶಪಡಿಸಿಕೊಂಡಿರುವುದನ್ನು ಅಭಿಯೋಜಕರು ಯಾವುದೇ ಸಂದೇಹಕ್ಕೆ ಅವಕಾಶವಿಲ್ಲದಂತೆ ಸಾಬೀತುಪಡಿಸಿದ್ದಾರೆ" ಎಂದು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸತೀಶ್ ಜೆ. ಬಾಳಿ ಹೇಳಿದ್ದಾರೆ.

ಕಡಿಮೆ ಸಂಬಳ, ಹೀಗಾಗಿ ಲಂಚ ತೆಗೆದುಕೊಂಡೆ ಎಂಬುದನ್ನು ಒಪ್ಪಲಾಗಲ್ಲ

ಇದೇ ವೇಳೆ ಅಕ್ರಮ ಲಂಚದ ಮೊತ್ತದ ಪ್ರಮಾಣವು ಪ್ರಮುಖ ಅಂಶವಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ. "ಆರೋಪಿ ಕಡಿಮೆ ಸಂಬಳ ಪಡೆಯುತ್ತಿದ್ದ ಕಾರಣಕ್ಕೆ ಅವನು ಲಂಚ ಸ್ವೀಕರಿಸುವ ಅಭ್ಯಾಸ ಹೊಂದಿರಲಿಲ್ಲ ಎಂದು ಹೇಳಲಾಗುವುದಿಲ್ಲ. ಅವನ ಬ್ಯಾಂಕ್ ಖಾತೆ ವಿವರಗಳು, ಪಿಎಫ್ ಅರ್ಜಿದಾರರಾಗಿರುವ ಆರೋಪಿಗಳಾದ 2ರಿಂದ 7ನೇ ವ್ಯಕ್ತಿಗಳಿಂದ ಅಕ್ರಮ ಹಣ ಜಮೆಯಾಗಿರುವುದನ್ನು ದೃಢಪಡಿಸುತ್ತವೆ" ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಯಾವುದೇ ಹಣ ತನ್ನ ಫೋನ್‌ಪೇ ಖಾತೆಗೆ ಜಮೆಯಾಗುತ್ತಿದ್ದಂತೆಯೇ ಮೊಬೈಲ್‌ನಲ್ಲಿ ಸಂದೇಶ ಬರುತ್ತಿದ್ದ ಹಿನ್ನೆಲೆಯಲ್ಲಿ, ಪ್ರಸನ್ನ ಅವರು ಆ ಹಣದ ಕುರಿತು ವಿಚಾರಣೆ ನಡೆಸಿ ಅದನ್ನು ಹಿಂತಿರುಗಿಸಬೇಕಾಗಿತ್ತು. ಆದರೆ ಅವರು ಹಾಗೆ ಮಾಡಿಲ್ಲ ಎಂದು ನ್ಯಾಯಾಲಯ ಹೇಳಿದೆ. ಫೋನ್‌ಪೇ ಮೂಲಕ ಹಣ ಅವರ ಖಾತೆಯಲ್ಲಿ ಪತ್ತೆಯಾಗಿರುವುದು, ಅವರು ಆ ಹಣದ ಸ್ವಾಧೀನದಲ್ಲಿದ್ದರು ಎಂಬುದನ್ನು ಸೂಚಿಸುತ್ತದೆ. ಆದ್ದರಿಂದ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 20ರ ಪ್ರಕಾರ ತಮ್ಮ ನಿರ್ದೋಷಿತ್ವವನ್ನು ಸಾಬೀತುಪಡಿಸುವ ಹೊಣೆಗಾರಿಕೆ ಆರೋಪಿಯ ಮೇಲಿದೆ ಎಂದು ನ್ಯಾಯಾಲಯ ತಿಳಿಸಿದೆ.

ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ (ಸಿಆರ್‌ಪಿಸಿ) ಸೆಕ್ಷನ್ 313ರ ಅಡಿಯಲ್ಲಿ ವಿಚಾರಣೆ ನಡೆಸಿದ ವೇಳೆ ಆರೋಪಿಗೆ ಪರಿಸ್ಥಿತಿಗಳನ್ನು ವಿವರಿಸುವ ಅವಕಾಶ ನೀಡಲಾಗಿತ್ತು. ಆದರೆ ಅವರು ಆರೋಪಗಳನ್ನು ನಿರಾಕರಿಸಿದ್ದು, ಯಾವುದೇ ಸಮರ್ಪಕ ವಿವರಣೆಯನ್ನು ನೀಡಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಏನಿದು ಪ್ರಕರಣ?

ಇಪಿಎಫ್‌ಒದ ಪ್ರಾದೇಶಿಕ ಕಚೇರಿ, ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಸನ್ನ ಅವರು ತುಮಕೂರಿನಲ್ಲಿ ವಾಸವಾಗಿದ್ದಾರೆ. 2022ರ ಏಪ್ರಿಲ್ 12ರಂದು ತುಮಕೂರಿನ ಇಪಿಎಫ್‌ಒ ಪ್ರಾದೇಶಿಕ ಕಚೇರಿಯಲ್ಲಿ ನಡೆಸಿದ ಜಂಟಿ ದಿಢೀರ್ ಪರಿಶೀಲನೆಯ ವರದಿ ಹಾಗೂ ಮೂಲ ಮಾಹಿತಿ ಆಧರಿಸಿ, ಸಿಬಿಐ 2022ರ ಜೂನ್ 30ರಂದು ಎಫ್‌ಐಆರ್ ದಾಖಲಿಸಿ, ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 7 ಮತ್ತು 8ರ ಅಡಿಯಲ್ಲಿ ಏಳು ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು.

2021 ಮತ್ತು 2022ರ ಅವಧಿಯಲ್ಲಿ ಬಾಕಿ ಉಳಿದಿದ್ದ ಪಿಎಫ್ ದಾವೆಗಳು ಹಾಗೂ ಇತ್ಯರ್ಥ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಪ್ರಸನ್ನ ಅವರು ₹500ರಿಂದ ₹2,000ರವರೆಗೆ ಲಂಚದ ಬೇಡಿಕೆ ಇಟ್ಟಿದ್ದರೆಂದು ಆರೋಪಿಸಲಾಗಿದೆ. ಪಿಎಫ್ ಮೊತ್ತ ಇತ್ಯರ್ಥಗೊಂಡ ಬಳಿಕ ಫಲಾನುಭವಿಗಳು, ಅವರು ಬೇಡಿಕೆ ಇಟ್ಟಿದ್ದ ಲಂಚದ ಹಣವನ್ನು ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿದ್ದ ಅವರ ಖಾತೆಗೆ ವರ್ಗಾಯಿಸುತ್ತಿದ್ದರು. ಆ ಬ್ಯಾಂಕ್ ಖಾತೆಯು ಫೋನ್‌ಪೇ ಯುಪಿಐ ಐಡಿಗೆ ಸಂಪರ್ಕಿತವಾಗಿತ್ತು.

ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದ ಬಳಿಕ, ಪಿಎಫ್ ಫಲಾನುಭವಿಗಳಾಗಿದ್ದ ಉಳಿದ ಆರು ಆರೋಪಿಗಳು ಸಿಆರ್‌ಪಿಸಿ ಸೆಕ್ಷನ್ 307ರ ಅಡಿಯಲ್ಲಿ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಿದರು. ನ್ಯಾಯಾಲಯ ಆ ಅರ್ಜಿಯನ್ನು ಅಂಗೀಕರಿಸಿದ ನಂತರ ಅವರು ಪ್ರಕರಣದಲ್ಲಿ ಸರ್ಕಾರದ ಸಾಕ್ಷಿದಾರರು (ಅಪ್ರೂವರ್‌ಗಳು) ಆಗಿ ಮಾರ್ಪಟ್ಟರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

International Yoga Day 2026: ವಯಸ್ಸನ್ನು ಮೀರಿಸುವ ಆರೋಗ್ಯದ ಮಂತ್ರ ಯೋಗ, 50ಕ್ಕಿಂತ 70ರ ವಯಸ್ಸಿನಲ್ಲಿ ಹೆಚ್ಚು ಆರೋಗ್ಯವಂತರಾಗೋಣ: ಪ್ರಧಾನಿ ಮೋದಿ

Hormuz ಜಲಸಂಧಿಯಲ್ಲಿ ಅಮೆರಿಕಾ ಹೊಸ ಷರತ್ತು: ಭದ್ರತೆ ಬೇಕಾದರೆ ಸುಂಕ ಕಟ್ಟಿ, ಇಲ್ಲದಿದ್ದರೆ ನಿಮ್ಮ ಹಡಗುಗಳ ನೀವೇ ರಕ್ಷಿಸಿಕೊಳ್ಳಿ; ಹೊಸ ತೆರಿಗೆ ಬಾಂಬ್ ಸಿಡಿಸಿದ ಟ್ರಂಪ್

'ಎಲ್ಲದಕ್ಕೂ ಮಿತಿ ಇರಬೇಕು.. ಪ್ರಧಾನಿ ಹೇಳದೇ ಇದ್ದ ಮಾತನ್ನೂ ಕೇಳಬಲ್ಲರು': ಮೋದಿ ಬಗ್ಗೆ Shashi Tharoor 'ಮೆಚ್ಚುಗೆ', ಕಾಂಗ್ರೆಸ್ ವಾಗ್ದಾಳಿ

ಇಸ್ರೇಲ್-ಲೆಬನಾನ್ ಸಂಘರ್ಷ: ಶಾಂತಿ ಒಪ್ಪಂದ ಮುರಿಯುವ ಭೀತಿ: ಸ್ವಿಟ್ಜರ್ಲೆಂಡ್‌ಗೆ ಜೆಡಿ.ವ್ಯಾನ್ಸ್ ದೌಡು, ಇರಾನ್‌ ಸಮಾಧಾನಪಡಿಸಲು ರಾಜತಾಂತ್ರಿಕ ಕಸರತ್ತು..!

ಮೋದಿ ಕುರಿತು ಮೆಚ್ಚುಗೆ: 'ರಾಜಕೀಯ ಅಂಕ ಗಳಿಸಲು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ': ಪವನ್ ಖೇರಾಗೆ ಶಶಿ ತರೂರ್ ತಿರುಗೇಟು