ಬೆಂಗಳೂರು: ವಿಶ್ವದ ಅತ್ಯಂತ ಕುಟುಂಬ ಸ್ನೇಹಿ ವಿಮಾನ ನಿಲ್ದಾಣಗಳ ಪೈಕಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 3ನೇ ಸ್ಥಾನ ಪಡೆದಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾಹಿತಿ ಹಂಚಿಕೊಂಡಿದ್ದು, ಇದು ನಾಡಿನ ಹೆಮ್ಮೆಯ ಸಂಗತಿಯಾಗಿದೆ ಎಂದಿದ್ದಾರೆ.
ಬೆಂಗಳೂರು ಏರ್‌ಪೋರ್ಟ್ ಕುಟುಂಬ ಸಹಿತ ಪ್ರಯಾಣಿಸುವವರಿಗೆ ಹೇಳಿ ಮಾಡಿಸಿದಂತಹ ವಿಮಾನ ನಿಲ್ದಾಣ ಎಂದು ಗುರುತಿಸಲ್ಪಟ್ಟಿದ್ದು, ಇಲ್ಲಿನ ಶಿಶುಪಾಲನಾ ಸೌಲಭ್ಯಗಳು, ಮಕ್ಕಳಿಗಾಗಿ ವಿಶೇಷ ಪ್ಲೇಜೋನ್‌ಗಳು, ವಿಶಾಲ ಟರ್ಮಿನಲ್‌ಗಳು ಸೇರಿದಂತೆ ವಿಶ್ವ ದರ್ಜೆಯ ಮೂಲಭೂತ ಸೌಕರ್ಯಗಳು ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಕ್ಕಳಿಗಾಗಿ ವಿಶೇಷ ಪ್ಲೇಜೋನ್ ಗಳು, ಕುಟುಂಬ ವಿಹಾರಗಳು ಮತ್ತು ವಿಶ್ರಾಂತಿ ತಾಣಗಳು, ಪರಿಚರ್ಯೆ ಮತ್ತು ಶಿಶು ಆರೈಕೆ ಕೊಠಡಿಗಳು, ಹಸಿರುಮಯ ಮತ್ತು ವಿಶಾಲ ಪ್ರದೇಶಗಳನ್ನೊಳಗೊಂಡ ಟರ್ಮಿನಲ್ ಗಳು , ಅತಿ ಹೆಚ್ಚು ಗ್ರಾಹಕರಿಂದ ತೃಪ್ತಿಕರ ರೇಟಿಂಗ್ಸ್ ಸಿಕ್ಕಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ವಿಮಾನ ಪ್ರಯಾಣಿಕರಿಗೆ ಸುಸಜ್ಜಿತ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಹಾಗೂ ಉಲ್ಲಾಸಭರಿತ ಪ್ರಯಾಣದ ಅನುಭವ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮೊದಲ ಆದ್ಯತೆ ನೀಡುತ್ತಿದೆ ಎಂದು ಅವರು ತಿಳಿಸಿದ್ದಾರೆ.