ಬೆಂಗಳೂರು: ನಮ್ಮ ಮೆಟ್ರೋದ ನೇರಳೆ ಮಾರ್ಗದ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ಗುರುವಾರ ಮತ್ತೆ ರೈಲು ಕೈಕೊಟ್ಟಿದ್ದು, ತಾಂತ್ರಿಕ ದೋಷ ಕಂಡುಬಂದಿತ್ತು. ಪರಿಣಾಮ ಕೆಲಕಾಲ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.
ಕಳೆದ ಮಂಗಳವಾರವಷ್ಟೇ ಇದೇ ಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ರೈಲು ಕೆಟ್ಟು ನಿಂತ ಪರಿಣಾಮ ಮೆಟ್ರೋ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿತ್ತು.
ನಿನ್ನೆ ಸಹ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ, ರೈಲಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಡೋರ್ ಲಾಕ್ ಆಗದಿದ್ದರಿಂದ ಲೋಕೋಪೈಲೆಟ್ ರೈಲನ್ನು ನಿಲ್ಲಿಸಿದ್ದರು. ಮೆಟ್ರೋ ಸಿಬ್ಬಂದಿ, ಎಲ್ಲಾ ಪ್ರಯಾಣಿಕರನ್ನು ರೈಲಿನಿಂದ ಇಳಿಯುವಂತೆ ಕೇಳಿಕೊಂಡರು.
ಇದೀಗ ಡೋರ್ ಲಾಕ್ ಆಗದಿರುವುದಕ್ಕೆ ಅಸಲಿ ಕಾರಣ ಪತ್ತೆ ಹಚ್ಚಿದ ಬಿಎಂಆರ್ ಸಿಎಲ್, ಪ್ರಯಾಣಿಕರೊಬ್ಬರ ಮೆಟಲ್ ಚೈನ್ ಮೆಟ್ರೋ ಡೋರ್ ಗೈಡ್‌ವೇಯಲ್ಲಿ ಸಿಲುಕಿದ್ದರಿಂದ ಗುರುವಾರ ಮೆಟ್ರೋ ಬಾಗಿಲು ಮುಚ್ಚದೇ ಎಡವಟ್ಟು ಆಯ್ತು ಎಂದು ಸ್ಪಷ್ಟಪಡಿಸಿದೆ.
ಈ ಸಂಬಂಧ ಶುಕ್ರವಾರ ಮಾಧ್ಯಮ ಪ್ರಕಟಣೆ ಹೊರಡಿಸಿದೆ ಬಿಎಂಆರ್ ಸಿಎಲ್, ರೈಲು ಹಾಗೂ ಅದರ ಬಾಗಿಲಿನ ವ್ಯವಸ್ಥೆಯನ್ನು ಸಮಗ್ರವಾಗಿ ತಾಂತ್ರಿಕ ಪರಿಶೀಲನೆಗೆ ಒಳಪಡಿಸಿದ ನಂತರ, ರೈಲಿನ ಉಪಕರಣಗಳಲ್ಲಿ ಯಾವುದೇ ರೀತಿಯ ತಾಂತ್ರಿಕ ದೋಷ ಕಂಡುಬಂದಿಲ್ಲ ಎಂದು ಹೇಳಿದೆ.
ಬಿಎಂಆರ್‌ಸಿಎಲ್‌ನ ಕಾರ್ಯಾಚರಣೆ ಮತ್ತು ನಿರ್ವಹಣಾ ತಂಡಗಳು ಜಂಟಿಯಾಗಿ ಸಮಗ್ರ ಪ್ರಾಥಮಿಕ ತನಿಖೆ ನಡೆಸಿದ್ದು, ಪ್ರಯಾಣಿಕರೊಬ್ಬರ ಮೆಟಲ್ ಚೈನ್ ರೈಲಿನ ಬಾಗಿಲಿನ ಡೋರ್ ಗೈಡ್‌ವೇ ಯಲ್ಲಿ ಸಿಲುಕಿಕೊಂಡಿದ್ದನ್ನು ಪತ್ತೆ ಹಚ್ಚಿವೆ. ಇದರಿಂದಾಗಿಯೇ ಬಾಗಿಲುಗಳು ಸ್ವಯಂಚಾಲಿತವಾಗಿ ಲಾಕ್ ಆಗಲು ಸಾಧ್ಯವಾಗಿರಲಿಲ್ಲ ಎಂದು ತಿಳಿಸಿದೆ.
ನಮ್ಮ ಮೆಟ್ರೋ ಪ್ರಯಾಣಿಕರ ಸುರಕ್ಷತೆಯೇ ಬಿಎಂಆರ್‌ಸಿಎಲ್‌ಗೆ ಅತ್ಯುನ್ನತ ಆದ್ಯತೆಯಾಗಿದೆ. ಸಾರ್ವಜನಿಕರಿಗೆ ಸುರಕ್ಷಿತ, ವಿಶ್ವಾಸಾರ್ಹ ಹಾಗೂ ನಿರಂತರ ಮೆಟ್ರೋ ಸೇವೆಗಳನ್ನು ಒದಗಿಸಲು ನಾವು ಸದಾ ಬದ್ಧರಾಗಿದ್ದೇವೆ ಎಂದು ಮೆಟ್ರೋ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಯಾಣಿಕರು ಮೆಟ್ರೋ ಹತ್ತುವಾಗ ಮತ್ತು ಇಳಿಯುವಾಗ ತಮ್ಮ ಬ್ಯಾಗ್ ಹಾಗೂ ಸರಗಳಂತಹ ವಸ್ತುಗಳ ಬಗ್ಗೆ ಎಚ್ಚರ ವಹಿಸುವುದು ಅವಶ್ಯಕವಾಗಿದೆ ಎಂದು ಹೇಳಿದೆ.