ಬೆಂಗಳೂರು: ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 56,432 ಹುದ್ದೆಗಳ ಭರ್ತಿಗೆ ಕ್ರಮ ಕೈಗೊಂಡಿರುವುದಾಗಿ ಸಿಎಂ ಸಿದ್ದರಾಮಯ್ಯ ಇಂದು ಬಜೆಟ್ನಲ್ಲಿ ಘೋಷಣೆ ಮಾಡಿದ್ದಾರೆ.
2006-27ನೇ ಸಾಲಿನ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸರ್ಕಾರಿ ಹುದ್ದೆಗಳಿಗೆ ನೇರ ನೇಮಕಾತಿ ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯನ್ನು ಒಂದು ಬಾರಿಗೆ ಮಾತ್ರ ಐದು ವರ್ಷ ಸಡಿಲಿಕೆ ಮಾಡಲಾಗಿದೆ ಎಂದು ಘೋಷಿಸಿದರು. ಈ ಮೂಲಕ ವಯೋಮಿತಿ ಆತಂಕದಲ್ಲಿದ್ದ ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ ನೀಡಿದರು.
ಉದ್ಯೋಗ ನೇಮಕಾತಿ ಒಳಮೀಸಲಾತಿ ಪ್ರಮಾಣದ ಬಗ್ಗೆ ಪ್ರಕರಣಗಳು ನ್ಯಾಯಾಲಯದಲ್ಲಿ ಇರುವುದರಿಂದಾಗಿ ಅಭ್ಯರ್ಥಿಗಳಿಗೆ ಯಾವುದೇ ನಷ್ಟವನ್ನು ತಡೆಗಟ್ಟುವ ಉದ್ದೇಶದಿಂದಾಗಿ ನೇಮಕಾತಿ ವಯೋಮಿತಿಯನ್ನು 5 ವರ್ಷ ಸಡಿಲಿಕೆ ಮಾಡಲಾಗಿದೆ. ಪ್ರಥಮ ದರ್ಜೆ ಕಾಲೇಜು, ಪಾಲಿಟೆಕ್ನಿಕ್ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಮಹಿಳಾ ಅತಿಥಿ ಉಪನ್ಯಾಸಕರಿಗೆ 90 ದಿನಗಳ ಮಾತೃತ್ವ ರಜೆಯನ್ನ ಮುಂದಿನ ಶೈಕ್ಷಣಿಕ ಸಾಲಿನಿಂದ ಜಾರಿಗೊಳಿಸಲಾಗುವುದು ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಉದ್ಯೋಗ ಸೃಷ್ಟಿಗೆ ಹೆಚ್ಚು ಒತ್ತು ನೀಡಿದ್ದು, ಅದಕ್ಕೆ ಪೂರಕವಾದ ಯೋಜನೆಯನ್ನು ಜಾರಿ ಮಾಡಿದ್ದೇವೆ. ವ್ಯಾಪಾರ ಕೈಗಾರಿಕಾ ಕ್ಷೇತ್ರದಲ್ಲಿ ಸಾಕಷ್ಟು ಒತ್ತು ನೀಡಲಾಗುವುದು ಎಂದು ತಿಳಿಸಿದರು.ಕಳೆದ ತಿಂಗಳು ಧಾರವಾಡದಲ್ಲಿ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳು ನಡೆಸಿದ ಬೃಹತ್ ಪ್ರತಿಭಟನೆಯ ಬೆನ್ನಲ್ಲೇ ರಾಜ್ಯ ಸರ್ಕಾರ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಉದ್ಯೋಗ ಭರ್ತಿ ಕುರಿತು ಮಹತ್ವದ ನಿರ್ಧಾರ ತೆಗೆದುಕೊಂಡಿತ್ತು.
ಈಗಾಗಲೇ ಶೇ.56ರಷ್ಟು ಮೀಸಲಾತಿ ಬದಲು ಶೇ.50 ರಷ್ಟು ಮಾತ್ರವೇ ವಿವಿಧ ಹುದ್ದೆಗಳನ್ನು ಭರ್ತಿಗೆ ಸಚಿವ ಸಂಪುಟ ಅನುಮೋದನೇ ನೀಡಿದ್ದು, 30 ದಿನಗಳಲ್ಲಿ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ತಿಳಿಸಿತ್ತು.
ಅರಣ್ಯ ಇಲಾಖೆಯಲ್ಲಿನ ವಿವಿಧ ವೃಂಧಗಳಲ್ಲಿನ 2,00 ಹುದ್ದೆಗಳನ್ನು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭರ್ತಿ ಮಾಡಲಾಗುವುದು. ಉತ್ತರ ಕರ್ನಾಟಕದಲ್ಲಿ ಆರ್ಥಿಕ ಅಭಿವೃದ್ಧಿ ಮತ್ತು ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಲು ಬೆಳಗಾವಿ ಜಿಲ್ಲೆಯಲ್ಲಿ 1,00 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಪಾರ್ಕ್ ಸ್ಥಾಪನೆ ಮಾಡಲಾಗುವುದು ಎಂದು ಘೋಷಣೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಘೋಷಿಸಿದರು.