ಕೋಲಾರ: ಕಲ್ಲು ಕ್ವಾರಿ ಸ್ಫೋಟದಿಂದ ಮೂವರು ಕಾರ್ಮಿಕರಿಗೆ ಗಂಭೀರ ಗಾಯಗೊಂಡಿರುವ ಘಟನೆ ಕೋಲಾರ ಜಿಲ್ಲೆಯ ಕೆ ಜಿ ಎಫ್ ತಾಲೂಕಿನ ಮಾರಿಕುಪ್ಪಂ ಬಳಿ ನಡೆದಿದೆ.
ಆಂಡರ್ಸನ್‌ಪೇಟೆ ಪೊಲೀಸ್ ವ್ಯಾಪ್ತಿಯ ಬಾಣಗೆರೆ ಗ್ರಾಮದ ಸರ್ವೆ ಸಂಖ್ಯೆ 139 ರಲ್ಲಿ ಬೆಳಿಗ್ಗೆ 10.15 ರ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು ಎಸ್‌ಪಿ ಶಿವಾಂಶು ರಜಪೂತ್ ತಿಳಿಸಿದ್ದಾರೆ.
ಗಾಯಾಳುಗಳನ್ನು ವೆಂಕಟನೂರು ಗ್ರಾಮದ ಮಾರಿ (60) ಮತ್ತು ಲಾಲ್ಕುಟೈ ಗ್ರಾಮದ ಮುನಿಯಪ್ಪ (58) ಮತ್ತು ಗೋವಿಂದ (60) ಎಂದು ಗುರುತಿಸಲಾಗಿದೆ.
ಇವರೆಲ್ಲರೂ ಧರ್ಮಪುರಿ ಜಿಲ್ಲೆಯವರಾಗಿದ್ದು, ಮೂವರ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಮೂವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಕ್ವಾರಿಯಲ್ಲಿ ತೋಡಿದ ರಂಧ್ರಗಳಲ್ಲಿ ಸ್ಫೋಟಕ ವಸ್ತು ತುಂಬುವ ವೇಳೆ ಉಂಟಾದ ಕಿಡಿಯಿಂದ ಬೆಂಕಿ ಕಾಣಿಸಿಕೊಂಡಿದ್ದು, ಅದರಿಂದ ಸ್ಫೋಟ ಸಂಭವಿಸಿ ಕಾರ್ಮಿಕರು ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.
ಘಟನೆಯ ವೇಳೆ ಅಲ್ಲಿಯೇ ಕೆಲಸ ಮಾಡುತ್ತಿದ್ದ ಪೆರಿಯಸ್ವಾಮಿ, ಅಂಬು, ರಮೇಶ್ವರನ್ ಮತ್ತು ಕೃಷ್ಣ ಎಂಬ ಕಾರ್ಮಿಕರು ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತಮಿಳುನಾಡಿನ ಧರ್ಮಪುರಿ ಜಿಲ್ಲೆಯಿಂದ ಕಾರ್ಮಿಕರನ್ನು ಕಂದಸ್ವಾಮಿ ಎಂಬ ಗುತ್ತಿಗೆದಾರ ನೇಮಿಸಿಕೊಂಡಿದ್ದಾಗಿ ವರದಿಯಾಗಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಎಸ್‌ಪಿ ಸ್ಫೋಟಕ ವಸ್ತು ತುಂಬುವ ವೇಳೆ ಕಿಡಿ ಉಂಟಾಗಿ ಬೆಂಕಿ ಕಾಣಿಸಿಕೊಂಡಿದೆ ಎಂದು ದೃಢಪಡಿಸಿದ್ದಾರೆ.