ರಾಜ್ಯ

News wrap 17-03-2026 | ಸಚಿವ ಸಂಪುಟ ಪುನಾರಚನೆ ಮಾಡಿ- ಸಿಎಂ ಗೆ ಹೆಚ್ಚಿದ ಒತ್ತಡ; ಕರವೇ ಪ್ರತಿಭಟನೆ: ರೈಲ್ವೆ ಪರೀಕ್ಷೆ ರದ್ದು; ಬೆಳಗಾವಿ:'ಕಪ್ಪು ನೋಟು' ಜಾಲ ಪತ್ತೆ: ಏಳು ಮಂದಿ ಬಂಧನ

ಸಚಿವ ಸಂಪುಟ ಪುನಾರಚನೆ ಮಾಡಿ; ಕನಿಷ್ಠ 20 ಹಿರಿಯ ಶಾಸಕರಿಗೆ ಸ್ಥಾನ ಕೊಡಿ: ಸಿಎಂ ಗೆ ಹೆಚ್ಚಿದ ಒತ್ತಡ

ಬಜೆಟ್ ಅಧಿವೆಶನದ ನಡುವೆಯೇ ರಾಜ್ಯ ರಾಜಕಾರಣದಲ್ಲಿ ಮಹತ್ತರ ಬೆಳವಣಿಗೆ ನಡೆದಿದೆ. ಸಚಿವ ಸಂಪುಟ ಪುನಾರಚನೆ ವೇಳೆ ಕನಿಷ್ಠ 20 ಹಿರಿಯ ಶಾಸಕರಿಗೆ ಸಂಪುಟದಲ್ಲಿ ಸ್ಥಾನ ನೀಡುವಂತೆ ವಿಧಾನಸೌಧ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ಎಂಎಲ್ಎಗಳು ಮನವಿ ಮಾಡಿದ್ದಾರೆ. ಭೋಜನ ವಿರಾಮದ ಸಮಯದಲ್ಲಿ ಸಿಎಂ ಭೇಟಿಯಾಗಿರುವ ‘ಕೈ’ ಶಾಸಕರು 3ಕ್ಕೂ ಹೆಚ್ಚು ಬಾರಿ ನಾವು ಎಂಎಲ್ಎಗಳಾಗಿದ್ದೇವೆ. ಹೀಗಾಗಿ ನಮಗೂ ಅವಕಾಶ ನೀಡಿ ಎಂಬ ಆಗ್ರಹ ಮುಂದಿಟ್ಟಿದ್ದಾರೆ. ಶಾಸಕರಾದ ಎನ್.ಎ.ಹ್ಯಾರಿಸ್, ಹಂಪನಗೌಡ ಬಾದರ್ಲಿ, ಬಾಲಕೃಷ್ಣ, ನಾರಾಯಣಸ್ವಾಮಿ, ಅಶೋಕ ಪಟ್ಟಣ, ಯಶವಂತರಾಯಗೌಡ ಪಾಟೀಲ್, ತನ್ವೀರ್ ಸೇಠ್, ರಾಘವೇಂದ್ರ ಹಿಟ್ನಾಳ್ ಸೇರಿ 16 ಶಾಸಕರಿಂದ ಈ ಬಗ್ಗೆ ಮನವಿ ಮಾಡಲಾಗಿದೆ. ಈ ವೇಳೆ ಹೈಕಮಾಂಡ್ ಜೊತೆ ನಾನು ಮಾತನಾಡ್ತೇನೆ, ನೀವೂ ಮಾತನಾಡಿ ಎಂದು ಸಿಎಂ ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕನ್ನಡಕ್ಕೆ ಇಲ್ಲದ ಅವಕಾಶ; ಕರವೇ ಪ್ರತಿಭಟನೆ: ರೈಲ್ವೆ ಪರೀಕ್ಷೆ ರದ್ದು

ಹುಬ್ಬಳ್ಳಿ, ಬೆಂಗಳೂರು ಮತ್ತು ಮೈಸೂರು ಕೇಂದ್ರಗಳಲ್ಲಿ ಆರಂಭವಾಗಿದ್ದ ರೈಲ್ವೆ ಪದನ್ನೋತಿ ಪರೀಕ್ಷೆಗಳನ್ನು ಕರ್ನಾಟಕ ರಕ್ಷಣಾ ವೇದಿಕೆಯ ತೀವ್ರ ಹೋರಾಟದ ಹಿನ್ನೆಲೆಯಲ್ಲಿ ಮಂಗಳವಾರ ರದ್ದುಗೊಳಿಸಲಾಗಿದೆ. ಇಂದು ಬೆಳಿಗ್ಗೆ 8 ಗಂಟೆಯಿಂದಲೇ ಹುಬ್ಬಳ್ಳಿಯ ನೈರುತ್ಯ ರೈಲ್ವೆ ಪ್ರಧಾನ ಕಚೇರಿ ಮುಂದೆ ನೆರೆದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪರೀಕ್ಷೆಗಳನ್ನು ರದ್ದುಪಡಿಸುವಂತೆ ಆಗ್ರಹಿಸಿದರು. ತಂಡ ತಂಡವಾಗಿ ಪರೀಕ್ಷಾ ಸ್ಥಳಕ್ಕೆ ಆಗಮಿಸಿದ ಕಾರ್ಯಕರ್ತರು ಪರೀಕ್ಷಾ ಕೇಂದ್ರಗಳಿಗೆ ನುಗ್ಗಲು ಮುಂದಾದರು. ಈ ಸಂದರ್ಭದಲ್ಲಿ ಪ್ರತಿಭಟನಾನಿರತ ಕರವೇ ಮುಖಂಡರೊಂದಿಗೆ ಮಾತುಕತೆ ನಡೆಸಿದ ರೈಲ್ವೆ ಅಧಿಕಾರಿಗಳು ಪರೀಕ್ಷೆಗಳನ್ನು ರದ್ದುಪಡಿಸಿರುವುದಾಗಿ ಘೋಷಿಸಿದರು. ಪರೀಕ್ಷೆಗೆ ಆಗಮಿಸಿದ್ದ ಪರೀಕ್ಷಾರ್ಥಿಗಳನ್ನು ಹೊರಗೆ ಕಳುಹಿಸಲಾಯಿತು. ಬೆಂಗಳೂರಿನಲ್ಲೂ ಕರವೇ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದರು. ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದರು.

ಲೈಂಗಿಕ ಕಿರುಕುಳ: ಮೂಡುಬಿದಿರೆ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಅಮಾನತು

ಮೂಡುಬಿದಿರೆ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಸಂದೇಶ್ ಬಿ.ಜಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿದೆ. ಈ ಸಂಬಂಧ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಬೆಂಗಳೂರಿನಲ್ಲಿ ಮೂವರು ಮಹಿಳೆಯರು ದೂರು ಸಲ್ಲಿಸಿದ್ದು, ಈ ದೂರನ್ನು ಮುಖ್ಯಮಂತ್ರಿ, ಗೃಹ ಸಚಿವರು, ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ), ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ರಾಜ್ಯ ಮಹಿಳಾ ಆಯೋಗಕ್ಕೆ ರವಾನಿಸಲಾಗಿದೆ. ಕೌಟುಂಬಿಕ ವ್ಯಾಜ್ಯ ಅಥವಾ ದೂರು ನೀಡಲು ಬರುವ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಈತ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ಪ್ರಕರಣವೊಂದರಲ್ಲಿ ಸಂತ್ರಸ್ತೆಯೊಬ್ಬಳ ಗಂಡನನ್ನು ಕೇಸ್‌ನಲ್ಲಿ ಸಿಲುಕಿಸಿ, ಆತನನ್ನು ಬಿಡುಗಡೆ ಮಾಡಲು ನನ್ನ ಜೊತೆ ಮಲಗಬೇಕು ಅಥವಾ 25 ಲಕ್ಷ ರೂಪಾಯಿ ನೀಡಬೇಕು ಎಂದು ಇನ್ಸ್‌ಪೆಕ್ಟರ್ ಧಮಕಿ ಹಾಕಿದ್ದ ಎಂಬ ಆರೋಪವೂ ಕೇಳಿಬಂದಿದೆ. ಈಮಧ್ಯೆ, ತಡರಾತ್ರಿ ಮಹಿಳೆಯೊಬ್ಬರ ಮನೆಯ ಕಾಂಪೌಂಡ್ ಗೋಡೆಯನ್ನು ಸಂದೇಶ್ ಹಾರುತ್ತಿರುವ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗಿವೆ. ಪ್ರಕರಣದ ತನಿಖೆಗೆ ಆದೇಶಿಸಿದ್ದ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು, ಇನ್ಸ್‌ಪೆಕ್ಟರ್ ಸಂದೇಶ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಬೆಳಗಾವಿ:'ಕಪ್ಪು ನೋಟು' Currency ವಂಚನೆ ಜಾಲ ಪತ್ತೆ: ಏಳು ಮಂದಿ ಬಂಧನ

ರಾಸಾಯನಿಕಗಳು ಮತ್ತು ಕಪ್ಪು ಬಣ್ಣದ ಕಾಗದ ಬಳಸಿ ನಿಜವಾದ ನೋಟು ಮುದ್ರಿಸಬಹುದು ಎಂದು ಜನರನ್ನು ವಂಚಿಸುತ್ತಿದ್ದ ಆರೋಪದ ಮೇರೆಗೆ ಮಹಾರಾಷ್ಟ್ರದ ಇಬ್ಬರು ಪೊಲೀಸ್ ಪೇದೆಗಳು ಸೇರಿದಂತೆ ಎಂಟು ಜನರನ್ನು ಬೆಳಗಾವಿ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ. ಗೋಕಾಕ ನಗರದ ಹನುಮಾನ ದೇವಸ್ಥಾನದ ಬಳಿ ಇರುವ ಮನೆಯೊಂದರ ಮೇಲೆ ಗೋಕಾಕ ನಗರ ಠಾಣೆ ಪೊಲೀಸರು ಮಂಗಳವಾರ ದಾಳಿ ನಡೆಸಿ ಗ್ಯಾಂಗ್ ನ್ನು ಪತ್ತೆ ಹಚ್ಚಿದ್ದಾರೆ. ಇನ್ನೂ ಒಬ್ಬ ವ್ಯಕ್ತಿ ತಲೆಮರೆಸಿಕೊಂಡಿದ್ದಾನೆ. ಬಂಧಿತರು ಮೂಲ ಕರೆನ್ಸಿ ನೋಟುಗಳನ್ನು ತೆಗೆದುಕೊಂಡು ಅವುಗಳಿಗೆ ಕಪ್ಪು ಬಣ್ಣದ ರಾಸಾಯನಿಕ ಹಾಕುತ್ತಿದ್ದರು. ಅವುಗಳನ್ನು ಡ್ರೈ ಮಾಡಿ ಸರಳ ಕಪ್ಪು ಕಾಗದದಂತೆ ಕಾಣುವಂತೆ ಮಾಡುತ್ತಿದ್ದರು. ಅವುಗಳನ್ನು ಅಮಾಯಕರಿಗೆ ತೋರಿಸಿ, ನೀವು ಅದನ್ನು ಬಿಸಿ ಮಾಡಿ ನಿರ್ದಿಷ್ಟ ರಾಸಾಯನಿಕ ದ್ರಾವಣದಲ್ಲಿ ಹಾಕಿದರೆ ಅದು ಮೂಲ ಕರೆನ್ಸಿಗೆ ಬದಲಾಗುತ್ತದೆ ಎಂದು ಹೇಳುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಳೆ: ಚಾಮರಾಜನಗರ, ಮೈಸೂರು ಸೇರಿ ರಾಜ್ಯದ ಹಲವೆಡೆ ಆಲಿಕಲ್ಲು ಸಹಿತ ಭಾರೀ ಮಳೆ

ರಾಜ್ಯದ ಹಲವು ಜಿಲ್ಲೆಗಳಲ್ಲಿ ವಾತಾವರಣ ಏಕಾಏಕಿ ಬದಲಾವಣೆಯಾಗಿದ್ದು, ಹಲವು ಜಿಲ್ಲೆಗಳಲ್ಲಿ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆಯಾಗಿದೆ. ಸೋಮವಾರ ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಗಳ ಹಲವಾರು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗಿದೆ. ಉತ್ತರ ಕರ್ನಾಟಕದ ಹೆಚ್ಚಿನ ಭಾಗಗಳಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ತಲುಪಿತ್ತು. ಮಳೆಯಿಂದಾಗಿ ವಾತಾವರಣ ತಂಪಾಗಿದೆ. ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲ್ಲೂಕಿನಲ್ಲಿ ರೈತನೊಬ್ಬ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಮುತ್ತಂಗಿ ಗ್ರಾಮದ ನಿವಾಸಿ ವೈಜನಾಥ್ ಶೇರೆಗಾರ್ ತನ್ನ ಜಮೀನಿನಲ್ಲಿ ದನಗಳನ್ನು ಮೇಯಿಸುತ್ತಿದ್ದಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಅವರ ಮಗನಿಗೆ ಸುಟ್ಟಗಾಯಗಳಾಗಿವೆ. ಮೈಸೂರು, ಕೊಡಗು, ಚಾಮರಾಜನಗರ ಸೇರಿದಂತೆ ಹಲವೆಡೆ ಒಂದು ಗಂಟೆಗೂ ಅಧಿಕವಾಗಿ ಗುಡುಗು ಸಹಿತ ಮಳೆಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಟ್ರಂಪ್ ಗೆ ತೀವ್ರ ಹಿನ್ನಡೆ: ಇರಾನ್ ವಿರುದ್ಧ ಯುದ್ಧ ವಿರೋಧಿಸಿ ಅಮೆರಿಕದ ಭಯೋತ್ಪಾದನಾ ನಿಗ್ರಹ ಮುಖ್ಯಸ್ಥ ರಾಜೀನಾಮೆ!

ಮೂಡಬಿದ್ರೆ ಇನ್ಸ್‌ಪೆಕ್ಟರ್ ಸಂದೇಶ್ ಕಾಮಕಾಂಡ?: ಸಂತ್ರಸ್ತೆಯ ಮಗಳ ಮೇಲೂ ಕಣ್ಣು, ಆಡಿಯೋ-ವಿಡಿಯೋ ವೈರಲ್..! ಅಮಾನತು

'ಸಚಿವರೇ ಇಲ್ಲ.. ಏನ್ ಮಾಡ್ಬೇಕು..?' ಆಗ ಯುಟಿ ಖಾದರ್, ಈಗ ಹೊರಟ್ಟಿ..: ಅಧಿವೇಶನಕ್ಕೆ ಗೈರು ಕುರಿತು ಪರಿಷತ್ ಸಭಾಪತಿ ಅಸಮಾಧಾನ!

ಬಂಗಾಳ ಚುನಾವಣೆ: 291 ಸ್ಥಾನಗಳಲ್ಲಿ ಮಾತ್ರ TMC ಸ್ಪರ್ಧೆ; ಉಳಿದ ಸ್ಥಾನಗಳ ಕಥೆ ಏನು?

Bengaluru Rain: ಯುಗಾದಿ ಮುನ್ನವೇ ಬೆಂಗಳೂರಿನಲ್ಲಿ ಗಾಳಿ ಸಹಿತ ಆಲಿಕಲ್ಲು ಮಳೆ; 3-4 ದಿನ ವರ್ಷಧಾರೆ ಸಾಧ್ಯತೆ!

SCROLL FOR NEXT