ಸಚಿವ ಸಂಪುಟ ಸಭೆ 
ರಾಜ್ಯ

ಒಳ ಮೀಸಲಾತಿ: ಮತಬ್ಯಾಂಕ್ ಲೆಕ್ಕಾಚಾರದಲ್ಲಿ ಸಿದ್ದು ಸರ್ಕಾರ, ಉಪಚುನಾವಣೆ ಮುಗಿಯುವವರೆಗೂ ತೀರ್ಮಾನಕ್ಕೆ ಬ್ರೇಕ್..!

ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆ, ಒಳ ಮೀಸಲಾತಿ ವಿಷಯದಲ್ಲಿ ತುರ್ತು ನಿರ್ಧಾರ ಕೈಗೊಂಡರೆ ರಾಜಕೀಯವಾಗಿ ಹಿನ್ನಡೆ ಉಂಟಾಗಬಹುದು ಎಂಬ ಆತಂಕ ಸರ್ಕಾರದೊಳಗೆ ವ್ಯಕ್ತವಾಗಿದೆ.

ಬೆಂಗಳೂರು: ಒಳ ಮೀಸಲಾತಿ ವಿಚಾರ ರಾಜ್ಯ ರಾಜಕೀಯದಲ್ಲಿ ಮತ್ತೆ ಸದ್ದು ಮಾಡುತ್ತಿದ್ದು, ಇದರ ಬೆನ್ನಲ್ಲೇ, ಮತಬ್ಯಾಂಕ್ ಲೆಕ್ಕಾಚಾರದಲ್ಲಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ.

ಉಪಚುನಾವಣೆಗಳು ಮುಗಿಯುವವರೆಗೂ ಒಳ ಮೀಸಲಾತಿ ಕುರಿತಂತೆ ಯಾವುದೇ ಅಂತಿಮ ತೀರ್ಮಾನ ಕೈಗೊಳ್ಳದಿರಲು ತೀರ್ಮಾನಿಸಿದೆ.

ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆ, ಒಳ ಮೀಸಲಾತಿ ವಿಷಯದಲ್ಲಿ ತುರ್ತು ನಿರ್ಧಾರ ಕೈಗೊಂಡರೆ ರಾಜಕೀಯವಾಗಿ ಹಿನ್ನಡೆ ಉಂಟಾಗಬಹುದು ಎಂಬ ಆತಂಕ ಸರ್ಕಾರದೊಳಗೆ ವ್ಯಕ್ತವಾಗಿದೆ.

ವಿಶೇಷವಾಗಿ ಎಸ್‌ಸಿ ಸಮುದಾಯದ ಎಡ ಮತ್ತು ಬಲ ಸಮುದಾಯಗಳ ನಡುವೆ ಇರುವ ಭಿನ್ನಾಭಿಪ್ರಾಯಗಳು ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ಸರ್ಕಾರ ಎಚ್ಚರಿಕೆಯ ಹೆಜ್ಜೆ ಇಟ್ಟಿದೆ.

ಈ ಹಿನ್ನೆಲೆಯಲ್ಲಿ, ಶುಕ್ರವಾರ ನಡೆಯಬೇಕಿದ್ದ ವಿಶೇಷ ಸಚಿವ ಸಂಪುಟ ಸಭೆಯನ್ನು ಮುಂದೂಡಲಾಗಿದೆ. ಈ ಸಭೆಯಲ್ಲಿ ಒಳ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಅಂತಿಮ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇತ್ತು. ಆದರೆ, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗುವ ಸಾಧ್ಯತೆ ಇರುವುದಾಗಿ ಕಾನೂನು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸಭೆಯನ್ನು ಉಪಚುನಾವಣೆಗಳ ಬಳಿಕಕ್ಕೆ ಮುಂದೂಡಲಾಗಿದೆ.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಅವರು ಈ ಕುರಿತು ಸ್ಪಷ್ಟನೆ ನೀಡಿದ್ದು, “ಇದೀಗ ಯಾವುದೇ ತೀರ್ಮಾನ ಕೈಗೊಳ್ಳುವುದಿಲ್ಲ. ಉಪಚುನಾವಣೆಗಳು ಮುಗಿದ ನಂತರ ಈ ವಿಚಾರವನ್ನು ಪುನಃ ಪರಿಗಣಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಪ್ರಗತಿಯಲ್ಲಿರುವ ನೇಮಕಾತಿಯನ್ನು ಸ್ಥಗಿತಗೊಳಿಸಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಘೋಷಿಸಿರುವ 56,342 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಮುಂದುವರಿಯಲಿದೆ ಎಂದೂ ಹೇಳಿದರು.

ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರದಲ್ಲಿ ಚರ್ಚೆ ನಡೆದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಚರ್ಚಿಸುವ ಅವಕಾಶವಿತ್ತು. ಆದರೆ, ನಿರ್ಧಾರವನ್ನೇ ತೆಗೆದುಕೊಳ್ಳದ ಪರಿಸ್ಥಿತಿ ಇರುವಾಗ ಚರ್ಚಿಸುವ ಅಗತ್ಯವೇನಿದೆ? ಹೀಗಾಗಿ ಈ ವಿಚಾರದಲ್ಲಿ ಯಾವುದೇ ಚರ್ಚೆಗಳೂ ನಡೆದಿಲ್ಲ ಎಂದರು.

ಆದರೆ ವಿವಿಧ ಎಸ್‌ಸಿ ಸಮುದಾಯಗಳಿಂದ ಬಂದಿರುವ ಸಚಿವರಾದ ಡಾ. ಎಚ್.ಸಿ. ಮಹಾದೇವಪ್ಪ, ಕೆ.ಎಚ್. ​​ಮುನಿಯಪ್ಪ, ಡಾ. ಜಿ. ಪರಮೇಶ್ವರ, ಪ್ರಿಯಾಕ್ ಖರ್ಗೆ, ಆರ್.ಬಿ. ತಿಮ್ಮಾಪುರ ಮತ್ತು ಶಿವರಾಜ್ ತಂಗಡಗಿ ತಮ್ಮ ಅಭಿಪ್ರಾಯಗಳಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದರಿಂದ ಸಭೆ ವೇಳೆ ಬಿಸಿ ಚರ್ಚೆ ನಡೆಯಿತು. ನಂತರ ಮುಖ್ಯಮಂತ್ರಿಗಳು ವಿಶೇಷ ಸಚಿವ ಸಂಪುಟವನ್ನು ಮುಂದೂಡಲು ನಿರ್ಧರಿಸಿದರು ಎಂದು ಮೂಲಗಳು ತಿಳಿಸಿವೆ.

ಇನ್ನೊಂದೆಡೆ, ಒಳ ಮೀಸಲಾತಿ ವಿಚಾರದಲ್ಲಿ ಎಸ್‌ಸಿ ಸಮುದಾಯದೊಳಗೆ ತೀವ್ರ ಭಿನ್ನಾಭಿಪ್ರಾಯಗಳು ಮುಂದುವರಿದಿವೆ. ಮಾದಿಗ ಸಮುದಾಯ ಸೇರಿದಂತೆ ಕೆಲ ಗುಂಪುಗಳು ಒಳ ಮೀಸಲಾತಿಯನ್ನು ತಕ್ಷಣ ಜಾರಿಗೊಳಿಸಲು ಒತ್ತಾಯಿಸುತ್ತಿದ್ದು, ಭೋವಿ, ಲಂಬಾಣಿ, ಕೊರಚ, ಕೊರಮ ಸಮುದಾಯಗಳು ಈ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ, ಯಾವುದೇ ಮೀಸಲಾತಿ ಬದಲಾವಣೆ ಇಲ್ಲದೇ ನೇಮಕಾತಿ ಪ್ರಕ್ರಿಯೆ ಮುಂದುವರಿಸುವಂತೆ ಆಗ್ರಹಿಸುತ್ತಿವೆ.

ಈ ವಿಷಯವನ್ನು ಅಧ್ಯಯನ ಮಾಡಿದ ನಾಗಮೋಹನ್ ದಾಸ್ ಆಯೋಗವು ಒಳ ಮೀಸಲಾತಿಗೆ ಶಿಫಾರಸು ನೀಡಿದ್ದರೂ, ಇದರ ವಿರುದ್ಧ ನ್ಯಾಯಾಲಯಗಳಲ್ಲಿ ಪ್ರಕರಣಗಳು ಮುಂದುವರಿದಿವೆ. ಜೊತೆಗೆ ಒಟ್ಟು ಮೀಸಲಾತಿ ಪ್ರಮಾಣವು 50 ಶೇಕಡಾ ಮಿತಿ ಮೀರುವ ವಿಚಾರವೂ ಕಾನೂನು ಸವಾಲಾಗಿ ಪರಿಣಮಿಸಿದೆ.

ಸಚಿವ ಸಂಪುಟದೊಳಗೂ ಈ ವಿಷಯದಲ್ಲಿ ಏಕಮತಾಭಿಪ್ರಾಯ ಮೂಡದಿರುವುದು ಗಮನಾರ್ಹವಾಗಿದೆ. ವಿವಿಧ ಎಸ್‌ಸಿ ಸಮುದಾಯಗಳಿಗೆ ಸೇರಿದ ಸಚಿವರು ಪರಸ್ಪರ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ವಿಚಾರವು ರಾಜಕೀಯವಾಗಿ ಸೂಕ್ಷ್ಮವಾಗಿರುವುದನ್ನು ತೋರಿಸುತ್ತಿದೆ.

ಒಟ್ಟಿನಲ್ಲಿ, ಒಳ ಮೀಸಲಾತಿ ವಿಚಾರದಲ್ಲಿ ತುರ್ತು ನಿರ್ಧಾರ ಕೈಗೊಳ್ಳುವುದರಿಂದ ಚುನಾವಣಾ ರಾಜಕೀಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ಸರ್ಕಾರ ಕಾದು ನೋಡುವ ತಂತ್ರವನ್ನು ಅನುಸರಿಸಿದ್ದು, ಅಂತಿಮ ತೀರ್ಮಾನವನ್ನು ಉಪಚುನಾವಣೆಗಳ ಬಳಿಕಕ್ಕೆ ಮುಂದೂಡಿದೆ.

ಈ ನಡುವೆ, ಸಚಿವ ಸಂಪುಟ ಸಭೆಯಲ್ಲಿ ಇನ್ನೂ ಹಲವು ಪ್ರಮುಖ ಆಡಳಿತಾತ್ಮಕ ನಿರ್ಧಾರಗಳಿಗೂ ಅನುಮೋದನೆ ನೀಡಲಾಗಿದೆ. ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ಅಂಗೀಕೃತವಾದ ಮೂರು ಮಸೂದೆಗಳಿಗೆ ಅನುಮೋದನೆ ನೀಡಲಾಗಿದೆ.

2026ರ ಕರ್ನಾಟಕ ರಾಜ್ಯ ನಾಗರಿಕ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ ತಿದ್ದುಪಡಿ) ಮಸೂದೆಗೆ ಅನುಮೋದನೆ ನೀಡಲಾಗಿದ್ದು, 2026 ಮೊದಲು ನಿರ್ಣಾಯಕ ಹುದ್ದೆಗಳಿಗೆ ಮತ್ತು ಶಿಕ್ಷಕರನ್ನು ಬೋಧಕ ಹುದ್ದೆಯಿಂದ ಬೋಧಕೇತರ ಹುದ್ದೆಗೆ ವರ್ಗಾವಣೆ ಮಾಡುವುದನ್ನು ಈ ಮಸೂದೆ ನಿಷೇಧಿಸುತ್ತದೆ.

ಇದರ ಜೊತೆಗೆ, ಕರ್ನಾಟಕ ಸರ್ಕಾರಿ ಶಿಕ್ಷಣ ಸಂಸ್ಥೆಗಳ ಭೂಮಿ (ರಕ್ಷಣಾ ಮತ್ತು ನಿಯಮಿತಗೊಳಿಸುವ) ಮಸೂದೆಗೂ ಅನುಮೋದನೆ ನೀಡಲಾಗಿದೆ. ಈ ಮಸೂದೆ ಮೂಲಕ ಸರ್ಕಾರಿ ಶಿಕ್ಷಣ ಸಂಸ್ಥೆಗಳು 12 ವರ್ಷಗಳಿಂದ ನಿರಂತರವಾಗಿ ಬಳಸಿಕೊಂಡು ಬರುತ್ತಿರುವ, ದಾನವಾಗಿ ನೀಡಲ್ಪಟ್ಟ ಅಥವಾ ಸರ್ಕಾರಕ್ಕೆ ಹಸ್ತಾಂತರಗೊಂಡ ಭೂಮಿಗೆ ಕಾನೂನುಬದ್ಧ ರಕ್ಷಣೆ ಹಾಗೂ ನಿಯಮಿತಗೊಳಿಸುವ ವ್ಯವಸ್ಥೆ ಕಲ್ಪಿಸಲಾಗುತ್ತದೆ.

ಕರ್ನಾಟಕ ಮೋಟಾರು ವಾಹನ ತೆರಿಗೆ (ತಿದ್ದುಪಡಿ) ಮಸೂದೆಗೂ ಅನುಮೋದನೆ ದೊರೆತಿದ್ದು, ರಾಜ್ಯದಲ್ಲಿ ಹೆಚ್ಚಿರುವ ತೆರಿಗೆ ಭಾರದಿಂದ ಇತರ ರಾಜ್ಯಗಳಲ್ಲಿ ವಾಹನ ನೋಂದಣಿ ಮಾಡಿಸಿಕೊಳ್ಳುವ ಪ್ರವೃತ್ತಿಯನ್ನು ತಡೆಗಟ್ಟುವ ಉದ್ದೇಶವನ್ನು ಹೊಂದಲಾಗಿದೆ.

ಇನ್ನೂ ಒಂದು ಮಹತ್ವದ ನಿರ್ಧಾರವಾಗಿ, 2003ಕ್ಕೂ ಮೊದಲು ನೇಮಕಗೊಂಡು, ಇಲಾಖೆಯ ವಿಭಜನೆಯ ವೇಳೆ ಯಾವ ಇಲಾಖೆಯಲ್ಲಿ ಸೇರುವುದೆಂದು ಅಭಿಪ್ರಾಯ ನೀಡದೇ ನೀರಾವರಿ ಇಲಾಖೆಯಲ್ಲೇ ಮುಂದುವರಿದ 379 ಅಧಿಕಾರಿಗಳು/ನೌಕರರನ್ನು, ಸಂಬಂಧಿತ ಕ್ಯಾಡರ್‌ನ ಹಿರಿಯತಾ ಪಟ್ಟಿಯಲ್ಲಿ ಪರಿಗಣಿಸಲು ಸರ್ಕಾರ ಒಪ್ಪಿಗೆ ನೀಡಿದೆ.

ಅದರ ಜೊತೆಗೆ, ಲೋಕಾಯುಕ್ತದಲ್ಲಿ ಖಾಲಿ ಇದ್ದ ಹೆಚ್ಚುವರಿ ನಿಯಂತ್ರಕ (ವಿಚಾರಣೆ) ಹುದ್ದೆಗೆ ನಿವೃತ್ತ ಜಿಲ್ಲಾ ನ್ಯಾಯಾಧೀಶ ಎ.ಜಿ. ಗಂಗಾಧರ್ ಅವರನ್ನು ಒಪ್ಪಂದ ಆಧಾರದ ಮೇಲೆ ನೇಮಕ ಮಾಡುವ ನಿರ್ಧಾರವೂ ಕೈಗೊಳ್ಳಲಾಗಿದೆ.

ಆರೋಗ್ಯ ಕ್ಷೇತ್ರದಲ್ಲಿಯೂ ಮಹತ್ವದ ನಿರ್ಧಾರ ಕೈಗೊಂಡಿದ್ದು, 2015-16ರಿಂದ 2018-19ರವರೆಗೆ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ (RBSK) ಅಡಿಯಲ್ಲಿ 148 ಚಿಕಿತ್ಸೆಗಳು ಹಾಗೂ MoUಗೆ ಸೇರದ ಹೆಚ್ಚುವರಿ ಚಿಕಿತ್ಸೆಗಳಿಗಾಗಿ ಖಾಸಗಿ ಆಸ್ಪತ್ರೆಗಳು ಸಲ್ಲಿಸಿದ್ದ ರೂ.23 ಕೋಟಿ ಬಾಕಿ ಬಿಲ್‌ಗಳನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (SAST) ಅನುದಾನದಿಂದ ಪಾವತಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Hormuz closure: ಹಾರ್ಮುಜ್ ಜಲಸಂಧಿ ಬಂದ್, ಏಷ್ಯಾದ ಬಂದರುಗಳಲ್ಲಿ ಕ್ಯೂನಲ್ಲಿ ನಿಂತ ಹಡಗುಗಳು!

ಪದೇ ಪದೇ ಇರಾನ್ ದಾಳಿ: ಅಬುದಾಬಿಯಲ್ಲಿ ಕ್ಷಿಪಣಿ ಅವಶೇಷಗಳು ಬಿದ್ದು, ಭಾರತೀಯ ಪ್ರಜೆ ಸೇರಿದಂತೆ ಇಬ್ಬರು ಸಾವು!

ರಾಜ್ಯ ಸರ್ಕಾರ ನಿಯಮದ ಮಿತಿಯೊಳಗೆ ಸಾಲ ಮಾಡಿದೆ: ಸಿಎಂ ಸಿದ್ದರಾಮಯ್ಯ ಸಮರ್ಥನೆ

ಬಾಗಲಕೋಟೆ, ದಾವಣಗೆರೆ ಉಪಚುನಾವಣೆ: ಕಣದಲ್ಲಿ 34 ಅಭ್ಯರ್ಥಿಗಳು, 80 ಲಕ್ಷ ನಗದು, 1.74 ಲಕ್ಷ ರೂ. ಮೌಲ್ಯದ ಮದ್ಯ ವಶಕ್ಕೆ

ಹೆಚ್ಚುತ್ತಿರುವ ಸಬ್ಸಿಡಿ: ಗ್ರಾಮ ಪಂಚಾಯಿತಿ ಅನುದಾನಕ್ಕೆ ರಾಜ್ಯ ಸರ್ಕಾರ ಕೊಕ್- CAG ವರದಿ

SCROLL FOR NEXT