ಬೆಂಗಳೂರು: ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಗೃಹಿಣಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಟ್ಟದಾಸನಪುರ ಮೂಲದ ವಂದನಾ (23) ಮೃತಪಟ್ಟ ದುರ್ದೈವಿ. ಕಳೆದ ಮೂರು ವರ್ಷಗಳ ಹಿಂದೆ ಹುಳಿಮಾವಿನ ನಿವಾಸಿಯಾಗಿದ್ದ ವಿಕ್ರಮ್ ಎಂಬಾತನೊಂದಿಗೆ ವಂದನಾ ಅವರ ವಿವಾಹವಾಗಿತ್ತು.
ವಂಧನಾ ಕುಟುಂಬದವರು ಇದು ಆತ್ಮಹತ್ಯೆ ಅಲ್ಲ, ದೌರ್ಜನ್ಯ ಹಾಗೂ ವರದಕ್ಷಿಣೆ ಹಿಂಸೆ ಹಿನ್ನೆಲೆಯಲ್ಲಿ ನಡೆದಿರುವ ಕೊಲೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಪತಿ ವಿಕ್ರಮ್, ಅವನ ತಾಯಿ ಹಾಗೂ ಇನ್ನಿಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ದೂರುದಾರರಾದ ವಂಧನಾ ಸಹೋದರ ನರಸಿಂಹ ಮೂರ್ತಿ ನೀಡಿದ ಮಾಹಿತಿಯ ಪ್ರಕಾರ, 2023ರ ಆಗಸ್ಟ್‌ನಲ್ಲಿ ವಿವಾಹವಾದ ನಂತರದಿಂದಲೇ ವಂಧನಾಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು. ಬೈಕ್ ಕೊಡಬೇಕೆಂದು ನಿರಂತರ ಒತ್ತಡವಿತ್ತು.
ಘಟನೆ ನಡೆದ ದಿನ ಬೆಳಗ್ಗೆ 10 ಗಂಟೆ ಸುಮಾರಿಗೆ ವಿಕ್ರಮ್ ನನ್ನ ತಾಯಿಗೆ ಕರೆ ಮಾಡಿ ವಂದನಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿಸಿದ್ದ. ಬಳಿಕ ವಂಧನಾಳನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯರು ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದರು ಎಂದು ಕಣ್ಣೀರಿಟ್ಟಿದ್ದಾರೆ.
ವಿವಾಹದ ಕೆಲವು ದಿನಗಳಲ್ಲೇ ಹೆಚ್ಚುವರಿ ವರದಕ್ಷಿಣೆ ಬೇಡಿಕೆ ಶುರುವಾಗಿತ್ತು, ಈ ಬಗ್ಗೆ ವಂಧನಾ ಪೋಷಕರಿಗೆ ತಿಳಿಸಿದ್ದಳುಹೇಳಿದ್ದಾರೆ. ಇಬ್ಬರ ಕುಟುಂಬಗಳ ನಡುವೆ ಹಲವು ಬಾರಿ ಸಂಧಾನ ಸಭೆಗಳೂ ನಡೆದಿದ್ದವು ಎಂದು ತಿಳಿದುಬಂದಿದೆ.
ಆದರೆ ಇದೀಗ, ವಂಧನಾಳನ್ನು ಕೊಲೆ ಮಾಡಿ ಅದನ್ನು ಆತ್ಮಹತ್ಯೆಯಂತೆ ತೋರಿಸಲು ಪ್ರಯತ್ನಿಸಲಾಗಿದೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ವರದಕ್ಷಿಣೆ ಕಿರುಕುಳ ಹಾಗೂ ಕೊಲೆ ಪ್ರಕರಣದಡಿ ಕೇಸ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.