ಬೆಳಗಾವಿ: ಬೆಳಗಾವಿ ನಗರದ ಕಪಿಲೇಶ್ವರ ದೇವಸ್ಥಾನ ಸಮೀಪ ಭಾನುವಾರ ಬೆಳಿಗ್ಗೆ ನಡೆದ ದಾರುಣ ಘಟನೆಯಲ್ಲಿ ಇಬ್ಬರು ಬಾಲಕರು ಮೃತಪಟ್ಟಿದ್ದಾರೆ.
ಬಾವಿಯ ಗೋಡೆಯ ಒಂದು ಭಾಗ ಆಕಸ್ಮಿಕವಾಗಿ ಕುಸಿದ ಪರಿಣಾಮ ಈ ಅವಘಡ ಸಂಭವಿಸಿದೆ. ಮಕ್ಕಳು ಮೊದಲು ಸಮೀಪದ ಕಪಿಲೇಶ್ವರ ಕೆರೆಯಲ್ಲಿ ಈಜಾಟ ನಡೆಸಿ ಬಳಿಕ ಬಾವಿ ಕಟ್ಟೆ ಮೇಲೆ ಕುಳಿತಿದ್ದ ವೇಳೆ ಗೋಡೆ ಕುಸಿದು ಬಿದ್ದಿದೆ. ಈ ವೇಳೆ ಮಕ್ಕಳು ಬಾವಿಗೆ ಬಿದ್ದು ಸಾವನ್ನಪ್ಪಿದ್ದಾರೆ.
ಮೃತರನ್ನು ಶಿವಂ ಪರಶುರಾಮ ಸುಂದೀಕರ (7) ಮತ್ತು ಪರಶುರಾಮ ರಾಜು ನಿಲಾಜ್ಕರ್ (11) ಎಂದು ಗುರುತಿಸಲಾಗಿದೆ.
ಘಟನೆ ಸಂಭವಿಸುತ್ತಿದ್ದಂತೆಯೇ ತಕ್ಷಣವೇ ಅಗ್ನಿಶಾಮಕ ದಳ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಸಿಬ್ಬಂದಿ ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಶ್ರಮಪಟ್ಟು ಕಾರ್ಯಾಚರಣೆ ನಡೆಸಿದರೂ ಮಕ್ಕಳನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.
ಸುದ್ದಿ ಹರಡುತ್ತಿದ್ದಂತೆಯೇ ಪ್ರದೇಶದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಮಕ್ಕಳ ಸಾವು ದೃಢವಾಗುತ್ತಿದ್ದಂತೆಯೇ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಸ್ಥಳಕ್ಕೆ ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿಗಳೂ ಭೇಟಿ ನೀಡಿ ಸಹಕಾರ ನೀಡಿದರು. ಒಬ್ಬ ಬಾಲಕನ ಶವವನ್ನು ಪತ್ತೆ ಹಚ್ಚಲಾಗಿದ್ದು, ಮತ್ತೊಬ್ಬನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಬಾವಿಯೊಳಗೆ ಇನ್ನಾರೂ ಸಿಲುಕಿಕೊಂಡಿಲ್ಲವೆಂಬುದನ್ನು ಖಚಿತಪಡಿಸಲು ಕ್ಯಾಮೆರಾ ಬಳಕೆ ಮಾಡಲಾಗುತ್ತಿದ್ದು, ಶೋಧ ಪ್ರಕ್ರಿಯೆಯನ್ನು ಸುಗಮಗೊಳಿಸಲು ನೀರನ್ನು ಪಂಪ್ ಮಾಡುವ ಕಾರ್ಯಾ ಪ್ರಾರಂಭಿಸಿದ್ದಾರೆ.