ಬೆಂಗಳೂರು: ಮಹಿಳೆಯರ ವಿರುದ್ಧ ನಡೆಯುವ ಅಪರಾಧಗಳನ್ನು ತಡೆಯಲು ಪೊಲೀಸ್ ಇಲಾಖೆ ಹಲವು ಕ್ರಮ ಕೈಗೊಂಡಿದ್ದರೂ, ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ (NCRB) 2024ರ ವರದಿ ಪ್ರಕಾರ, ದೇಶದ 19 ಮಹಾನಗರಗಳಲ್ಲಿ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳಲ್ಲಿ ಬೆಂಗಳೂರು ಮೂರನೇ ಸ್ಥಾನದಲ್ಲಿದೆ.
ಪಟ್ಟಿಯಲ್ಲಿ ಮೊದಲ ಹಾಗೂ ಎರಡನೇ ಸ್ಥಾನದಲ್ಲಿ ದೆಹಲಿ ಹಾಗೂ ಮುಂಬೈ ನಗರಗಳಿವೆ. 2024ರಲ್ಲಿ ಬೆಂಗಳೂರಿನಲ್ಲಿ 4,748 ಮಹಿಳಾ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, 2023ರಲ್ಲಿ ಈ ಸಂಖ್ಯೆ 4,870 ಆಗಿತ್ತು.
ಅತ್ಯಾಚಾರ ಪ್ರಕರಣಗಳಲ್ಲಿ ಅಲ್ಪ ಪ್ರಮಾಣದ ಇಳಿಕೆ ಕಂಡುಬಂದಿದ್ದು, 2024ರಲ್ಲಿ 168 ಪ್ರಕರಣಗಳು ದಾಖಲಾಗಿವೆ. 2023ಕ್ಕೆ ಹೋಲಿಸಿದರೆ ಇದು ಒಂದು ಪ್ರಕರಣವಷ್ಟೇ ಇಳಿಕೆಯಾಗಿರುವುದು ಕಂಡು ಬಂದಿದೆ. ಇನ್ನು ಲೈಂಗಿಕ ಕಿರುಕುಳ ಪ್ರಕರಣಗಳು 210ರಿಂದ 180ಕ್ಕೆ ಇಳಿದಿವೆ.
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದ್ದು, 897 ಪ್ರಕರಣಗಳು ದಾಖಲಾಗಿವೆ.
ಮಹಿಳೆಯನ್ನು ವಿವಸ್ತ್ರಗೊಳಿಸುವ ದೌರ್ಜನ್ಯ ಪ್ರಕರಣಗಳಲ್ಲಿ 66 ಪ್ರಕರಣಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ವರದಕ್ಷಿಣೆ ಸಾವು ಪ್ರಕರಣಗಳಲ್ಲಿ 25 ಪ್ರಕರಣಗಳೊಂದಿಗೆ ಜೈಪುರದ ಜೊತೆ ನಾಲ್ಕನೇ ಸ್ಥಾನದಲ್ಲಿದೆ.
19 ಮಹಾನಗರಗಳಲ್ಲಿ ದಾಖಲಾಗಿರುವ ಮಹಿಳಾ ದೌರ್ಜನ್ಯ ಪ್ರಕರಣಗಳಲ್ಲಿ ಪತಿ ಅಥವಾ ಸಂಬಂಧಿಕರಿಂದ ಕ್ರೌರ್ಯ ಪ್ರಕರಣಗಳು ಶೇ.28.4ರಷ್ಟು ಇದ್ದು, ಬಳಿಕ ಮಹಿಳೆಯರ ಅಪಹರಣ ಹಾಗೂ ಕಿಡ್ನಾಪ್ ಪ್ರಕರಣಗಳು ಶೇ.20.1ರಷ್ಟಿವೆ. ಮಹಿಳೆಯ ದೌರ್ಜನ್ಯ ಪ್ರಕರಣಗಳು ಶೇ.9.2ರಷ್ಟಿವೆ.
ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಸಂಘದ (AIDWA) ಹಿರಿಯ ನಾಯಕಿ ವಿಮಲಾ ಕೆ.ಎಸ್ ಪ್ರತಿಕ್ರಿಯಿಸಿ, “ಬೆಂಗಳೂರು ಸೇರಿದಂತೆ ಮಹಾನಗರಗಳಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳು ಕಡಿಮೆಯಾಗಿವೆ ಎಂಬ ವರದಿ ನಂಬಲು ಕಷ್ಟ. ಪ್ರಕರಣಗಳು ಕಡಿಮೆ ರಿಪೋರ್ಟ್ ಆಗುತ್ತಿವೆಯೋ ಅಥವಾ ಬೇರೆ ಕಾರಣಗಳಿಂದ ಮುಚ್ಚಿಹಾಕಲಾಗುತ್ತಿದೆಯೋ ಎನ್ನುವ ಅನುಮಾನ ಇದೆ ಎಂದು ಹೇಳಿದ್ದಾರೆ.
ಪ್ರತಿದಿನ ಪತ್ರಿಕೆಗಳಲ್ಲಿ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಸೇರಿದಂತೆ ಅನೇಕ ಪ್ರಕರಣಗಳು ವರದಿಯಾಗುತ್ತಿವೆ. ಶಿಕ್ಷೆಯ ಪ್ರಮಾಣ ಕಡಿಮೆಯಿರುವುದರಿಂದ ಸಂತ್ರಸ್ತರ ಭರವಸೆ ಕಳೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ