ಬೆಂಗಳೂರು: ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ರೈತರ ಜೀವನಾಡಿಯಾಗಿರುವ ಜಾನುವಾರುಗಳಿಗೂ ಆಧಾರ್ ಮಾದರಿಯ ಬಯೋಮೆಟ್ರಿಕ್ ಗುರುತಿನ ವ್ಯವಸ್ಥೆಯನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.
ಕರ್ನಾಟಕದಲ್ಲಿ ಪಶುಸಂಗೋಪನಾ ಕ್ಷೇತ್ರದಲ್ಲಿ ಮಹತ್ವದ ಡಿಜಿಟಲ್ ಕ್ರಾಂತಿಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಶೀಘ್ರದಲ್ಲೇ ಜಾನುವಾರುಗಳಿಗೆ ‘ಆಧಾರ್’ ಮಾದರಿಯ ಡಿಜಿಟಲ್ ಗುರುತು ವ್ಯವಸ್ಥೆ ಜಾರಿಗೆ ಬರಲಿದೆ.
ಈ ಹೊಸ ವ್ಯವಸ್ಥೆಯಲ್ಲಿ ಜಾನುವಾರುಗಳ ಮೂಗಿನ ಭಾಗದ (Muzzle) ವೈಶಿಷ್ಟ್ಯಪೂರ್ಣ ಗುರುತುಗಳನ್ನು ಆಧರಿಸಿ ಬಯೋಮೆಟ್ರಿಕ್ ಗುರುತಿನ ಚೀಟಿ ಸೃಷ್ಟಿಸಲಾಗುತ್ತದೆ.
ಭಾರತದಲ್ಲೇ ಮೊದಲ ಬಾರಿಗೆ ಜಾರಿಗೆ ಬರುತ್ತಿರುವ ಈ ಯೋಜನೆ, ಸಾಂಪ್ರದಾಯಿಕ ಕಿವಿ ಚುಚ್ಚುವ ಟ್ಯಾಗ್ ವ್ಯವಸ್ಥೆಗೆ ಪರ್ಯಾಯವಾಗಲಿದೆ.
ಜಾನುವಾರುಗಳ ಮೂಗಿನ ಮೇಲಿನ ರೇಖೆಗಳು, ಮಡಚುಗಳು ಮತ್ತು ಗುರುತುಗಳು ಮಾನವರ ಬೆರಳಚ್ಚಿನಂತೆಯೇ ವಿಶಿಷ್ಟವಾಗಿರುವುದರಿಂದ, ಅದನ್ನು ಡಿಜಿಟಲ್ ಗುರುತಾಗಿ ಬಳಸಲಾಗುತ್ತಿದೆ.
ರಾಜ್ಯದ ಇ-ಆಡಳಿತ ಕೇಂದ್ರ (CeG) ಮತ್ತು ಕೃತಕ ಬುದ್ಧಿಮತ್ತೆ ವಿಭಾಗದ ಸಹಯೋಗದಲ್ಲಿ ಈ ಯೋಜನೆ ರೂಪುಗೊಂಡಿದ್ದು, ಪ್ರಾಯೋಗಿಕವಾಗಿ ಜಾರಿಗೆ ತರಲು ಸಿದ್ಧತೆಗಳು ನಡೆಯುತ್ತಿವೆ.
ಈ ಡಿಜಿಟಲ್ ವ್ಯವಸ್ಥೆಯ ಮೂಲಕ ಜಾನುವಾರುಗಳ ಲಸಿಕೆ ವಿವರ, ಆರೋಗ್ಯ ಸ್ಥಿತಿ, ವಿಮೆ ಮಾಹಿತಿ ಹಾಗೂ ಸಾವಿನ ಪರಿಹಾರ ಅರ್ಜಿಗಳನ್ನು ಸುಲಭವಾಗಿ ಟ್ರ್ಯಾಕ್ ಮಾಡಬಹುದಾಗಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಇ-ಆಡಳಿತ) ಪ್ರಧಾನ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ಅವರು ಮಾತನಾಡಿ, ಈ ಯೋಜನೆ ಜಾನುವಾರುಗಳ ನಿಖರ ಗುರುತನ್ನು ಖಚಿತಪಡಿಸುವುದರ ಜೊತೆಗೆ ಪಶುಸಂಗೋಪನಾ ಯೋಜನೆಗಳಲ್ಲಿ ನಡೆಯುವ ವಂಚನೆ ತಡೆಯಲು ಸಹಾಯಕವಾಗಲಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಪ್ರಸ್ತುತ ಒಂದು ಕೋಟಿಗೂ ಹೆಚ್ಚು ಜಾನುವಾರುಗಳಿದ್ದು, ಪ್ರತಿವರ್ಷ ಸುಮಾರು 10 ಲಕ್ಷದಷ್ಟು ಜಾನುವಾರುಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಇಷ್ಟು ದೊಡ್ಡ ಸಂಖ್ಯೆಯ ಜಾನುವಾರುಗಳನ್ನು ನಿರ್ವಹಿಸಲು AI ಆಧಾರಿತ ಡಿಜಿಟಲ್ ವ್ಯವಸ್ಥೆ ಪರಿಣಾಮಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕೃತಕ ಬುದ್ಧಿಮತ್ತೆ ವಿಭಾಗದ ಯೋಜನಾ ನಿರ್ದೇಶಕ ಶ್ರೀವ್ಯಾಸ್ ಎಚ್‌ಎಂ ಮಾತನಾಡಿ, “ಪ್ರಸ್ತುತ ಜಾನುವಾರುಗಳ ಗುರುತಿಗಾಗಿ ಕಿವಿ ಚುಚ್ಚುವ ವಿಧಾನ ಬಳಸಲಾಗುತ್ತಿದೆ. ಆದರೆ, AI ಆಧಾರಿತ ಮೂಗು ಗುರುತು ವ್ಯವಸ್ಥೆಯಿಂದ ಸುಲಭ ಹಾಗೂ ವೇಗವಾದ ಗುರುತು ಸಾಧ್ಯವಾಗಲಿದೆ ಎಂದು ಹೇಳಿದ್ಧಾರೆ.
ಈ ಯೋಜನೆಯ ಮತ್ತೊಂದು ವಿಶೇಷವೆಂದರೆ, ರೈತರಿಗೆ ಲಸಿಕೆ ದಿನಾಂಕಗಳ ಬಗ್ಗೆ SMS ಮೂಲಕ ಮುಂಚಿತ ಮಾಹಿತಿ ನೀಡಲಾಗುತ್ತದೆ. ಹೊಸದಾಗಿ ಹುಟ್ಟುವ ಕರುಗಳಿಗೂ ಡಿಜಿಟಲ್ ದಾಖಲೆ ಸೃಷ್ಟಿಸಬಹುದು. ಮುಂದಿನ ದಿನಗಳಲ್ಲಿ ಜಾನುವಾರುಗಳ ಮೂಗಿನ ಫೋಟೋ ಸ್ಕ್ಯಾನ್ ಮೂಲಕ ಆರೋಗ್ಯ ಮೌಲ್ಯಮಾಪನ ಮಾಡಬಹುದು ಎಂದು ತಿಳಿಸಿದ್ದಾರೆ.
ಈ AI ಆಧಾರಿತ ವ್ಯವಸ್ಥೆ ಪಶುಸಂಗೋಪನಾ ಇಲಾಖೆಯಲ್ಲಿ ಡಿಜಿಟಲ್ ಆಡಳಿತ ಬಲಪಡಿಸುವುದರ ಜೊತೆಗೆ ಜಾನುವಾರುಗಳ ಗುರುತು ಮತ್ತು ದಾಖಲೆ ನಿರ್ವಹಣೆಯಲ್ಲಿ ಹೆಚ್ಚಿನ ಪಾರದರ್ಶಕತೆ ಹಾಗೂ ಪರಿಣಾಮಕಾರಿತ್ವ ತರುವ ನಿರೀಕ್ಷೆಯಿದೆ.