ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರ ಕನ್ನಡಪರ ಹೋರಾಟಗಾರರ ಕೇಸ್ ಮುಂದಿಟ್ಟುಕೊಂಡು ಕೋಮು ಗಲಭೆಕೋರರ ಖುಲಾಸೆಗೆ ಮುಂದಾಗಿದ್ದು, ತುಷ್ಟೀಕರಣಕ್ಕಾಗಿ ಶ್ರೇಷ್ಠ ಸಂವಿಧಾನ ಮತ್ತು ದೇಶದ ಕಾನೂನನ್ನೇ ಬಲಿ ಕೊಡುತ್ತಿದೆ" ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದ್ದಾರೆ.
ರಾಜ್ಯದಲ್ಲಿ ಪ್ರತಿಭಟನೆ-ಗಲಭೆ ಮೇಲಿನ 52 ಕ್ರಿಮಿನಲ್ ಪ್ರಕರಣ ಹಿಂಪಡೆಯಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದ್ದು, ಇದು 'ಕನ್ನಡ ಪರ ಹೋರಾಟಗಾರರ ಮೇಲಿನ ಕಾಳಜಿಗಿಂತ ಮುಸ್ಲಿಂ ಗಲಭೆಕೋರರ ಮೇಲಿನ ಹಿತಾಸಕ್ತಿಗಾಗಿ' ಎಂದು ಸಚಿವರು ಆರೋಪಿಸಿದ್ದಾರೆ.
ಗುಲ್ಬರ್ಗ ಜಿಲ್ಲೆ ಆಳಂದ ಮಾತ್ರವಲ್ಲದೆ, ಹುಬ್ಬಳ್ಳಿ ಗಲಭೆ ಪ್ರಕರಣದಲ್ಲೂ ಆರೋಪಿಗಳ ಮೇಲಿನ ಕ್ರಿಮಿನಲ್ ಕೇಸ್ ಹಿಂಪಡೆದ ಕಾಂಗ್ರೆಸ್ ದೇಶಕ್ಕೆ ದೊಡ್ಡ ಗಂಡಾಂತರವಾಗಿ ಪರಿಣಮಿಸಿದೆ ಎಂದಿದ್ದಾರೆ.
ಆಳಂದ ಕೋಮು ಗಲಭೆಯಲ್ಲಿ 100ಕ್ಕೂ ಹೆಚ್ಚು ಆರೋಪಿಗಳ ಮೇಲಿದ್ದ ಕ್ರಿಮಿನಲ್ ಕೇಸ್‌ಗಳನ್ನು ಹಿಂಪಡೆದಿರುವುದು ಅತ್ಯಂತ ಖಂಡನೀಯ. ಕೋಮು ಗಲಭೆ ಸೃಷ್ಟಿಸಿ ಪೊಲೀಸರ ಮೇಲೇ ಮಾರಣಾಂತಿಕ ಹಲ್ಲೆ ನಡೆಸಿದ್ದ ಗುಂಪಿನ ಮೇಲಿನ ಕ್ರಿಮಿನಲ್ ಕೇಸ್ ಹಿಂಪಡೆದ ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ಮತ್ತು ಓಲೈಕೆ ರಾಜಕಾರಣ ಎಲ್ಲೆ ಮೀರಿದೆ ಎಂದು ಹರಿಹಾಯ್ಡಿದಾರೆ.
ಕೋಮು ಗಲಭೆ ಸೃಷ್ಟಿಸಿದ್ದ ಉದ್ರಿಕ್ತ ಮುಸ್ಲಿಂ ಯುವಕರ ಗುಂಪು ಧಾರ್ಮಿಕ ಘೋಷಣೆ ಕೂಗುತ್ತ ಪೊಲೀಸರ ಮೇಲೇ ಮಾರಕಾಸ್ತ್ರ ಬೀಸಿದ್ದು, ಪರಿಣಾಮ DSP ಮತ್ತು ಪೇದೆ ತೀವ್ರ ಗಾಯಗೊಂಡಿದ್ದರು. ಇದ್ಯಾವುದನ್ನೂ ಲೆಕ್ಕಿಸದೆ ಈ ಸರ್ಕಾರ ಇದೀಗ ಕನ್ನಡಪರ ಹೋರಾಟಗಾರರ ಮೇಲಿನ ಕೇಸ್ ಹಿಂಪಡೆಯುವ ನೆಪ ಮುಂದಿಟ್ಟುಕೊಂಡು ಕೋಮು ಗಲಭೆಕೋರರನ್ನೂ ಬಿಡುಗಡೆ ಮಾಡಿರುವುದು ಓಲೈಕೆಯ ಪರಮಾವಧಿ ಎಂದು ಕಿಡಿ ಕಾರಿದ್ದಾರೆ.
ಗಲಭೆಕೋರರಿಗೆ ಸನ್ಮಾನ ಮಾಡಿದಂತೆ: ಇದನ್ನೆಲ್ಲಾ ನೋಡಿದರೆ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಕಾನೂನು ರಕ್ಷಕರಿಗೇ ರಕ್ಷಣೆ ಇಲ್ಲದಾಗಿದೆ ಎಂಬುದು ಸ್ಪಷ್ಟ. ಗಲಭೆಕೋರರನ್ನು ಸರ್ಕಾರ ಸನ್ಮಾನದ ರೀತಿಯಲ್ಲಿ ಬಿಡುಗಡೆ ಮಾಡುತ್ತಿರುವುದು ನಿಜಕ್ಕೂ ದುರಂತ ಎಂದು ಖಂಡಿಸಿದ್ದಾರೆ.
ಜನರ ಕಣ್ಣಿಗೆ ಮಣ್ಣೆರಚೋ ಯತ್ನ: ರೈತರು, ಕನ್ನಡಪರ ಹೋರಾಟಗಾರರ ಪ್ರತಿಭಟನೆ ಪ್ರಕರಣಗಳ ಜೊತೆ ಈ ಗಲಭೆಕೋರರ ಕೇಸ್‌ಗಳನ್ನೂ ಸೇರಿಸಿ ಹಿಂಪಡೆದು ಜನರ ಕಣ್ಣಿಗೆ ಮಣ್ಣೆರಚಲು ಯತ್ನಿಸಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಲಭೆಕೋರರ ರಕ್ಷಣೆಯೇ ಮುಖ್ಯವಾಯಿತೇ?: ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಕಾನೂನು ಪಾಲಿಸುವ ಸಾರ್ವಜನಿಕರ ರಕ್ಷಣೆಗಿಂತ ರಾಹುಲ್ ಗಾಂಧಿ ಮತ್ತು ಗಲಭೆಕೋರರ ಓಲೈಕೆಯೇ ಮುಖ್ಯವಾಯಿತೇ? ಎಂದು ಪ್ರಶ್ನಿಸಿರುವ ಜೋಶಿ, ಇದು ತುಷ್ಟೀಕರಣದ ಪರಮಾವಧಿ. ಕರ್ತವ್ಯ ನಿರತ ಪೊಲೀಸರಿಗೇ ರಕ್ಷಣೆ ಇಲ್ಲದಿದ್ದರೆ ಹೇಗೆ? ಇನ್ನು, ರಾಜ್ಯದ ಕಾನೂನು ಸುವ್ಯವಸ್ಥೆ ಗತಿಯೇನು? ಎಂದು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.