ಚಿಕ್ಕಬಳ್ಳಾಪುರ: ಡಿಕೆ ಶಿವಕುಮಾರ್ ತಾತ ಆದ ಮೇಲೆ ಅದೃಷ್ಟ ಕುಲಾಯಿಸಿದೆ. ಆದರೆ ಸಿದ್ದರಾಮಯ್ಯ ಸುಮ್ಮನೆ ಕೂರುವುದಿಲ್ಲ, ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ ಎಂದು ಹೇಳಿದ್ದಾರೆ. ಇದು ಡಿಕೆಶಿಗೆ ಎಚ್ಚರಿಕೆಯ ಗಂಟೆಯಾಗಿದೆ ಎಂದು ಸಂಸದ ಡಾ.ಕೆ. ಸುಧಾಕರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಕೆ. ಸುಧಾಕರ್ ಸಿದ್ದರಾಮಯ್ಯ ಅವರನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಅವರ ಮನಸ್ಥಿತಿಯನ್ನು ಅರಿತಿದ್ದೇನೆ. ಅವರು ಸುಮ್ಮನೆ ಕೂರುವವರಲ್ಲ. ಭಿನ್ನಾಭಿಪ್ರಾಯ ಹೊಂದಿರುವ ಶಾಸಕರು ಅಭಿಯಾನ ಮಾಡಿದರೆ ಅದರ ಕೇಂದ್ರವಾಗಿ ಸಿದ್ದರಾಮಯ್ಯ ಇರುತ್ತಾರೆ ಎಂದರು.
ಸಿದ್ದರಾಮಯ್ಯ ಅವರನ್ನು ಜೊತೆಗೆ ಕರೆದುಕೊಂಡು ಮುಂದಿನ ಎರಡು ವರ್ಷಗಳನ್ನು ಪೂರೈಸುವುದು ಮತ್ತು 2028ರ ಚುನಾವಣೆಯಲ್ಲಿ ಅವರ ಸಹಕಾರ ಪಡೆಯುವುದು ಡಿ.ಕೆ. ಶಿವಕುಮಾರ್ ಅವರಿಗೆ ದೊಡ್ಡ ಸವಾಲು ಎಂದರು.
ಕಾಂಗ್ರೆಸ್ ನಲ್ಲಿ ಮೂರು-ನಾಲ್ಕು ಗುಂಪುಗಳಿರುತ್ತವೆ. ಹೊಸ ಸಚಿವರ ಸಂಪುಟ ರಚಿಸಲು ಡಿಕೆ ಶಿವಕುಮಾರ್ ಗೆ ಹೈಕಮಾಂಡ್ ಎಷ್ಟು ಅವಕಾಶ ನೀಡಲಿದೆ ಎಂಬುದು ನೋಡಬೇಕಿದೆ. ಇವೆಲ್ಲ ಸವಾಲು ಮೀರಿ ಅವರು ಆಡಳಿತ ನಡೆಸಬೇಕಾಗಿದೆ ಎಂದು ಹೇಳಿದರು.
ರಾಜ್ಯ ಸರ್ಕಾರದಲ್ಲಿ ಸಿದ್ದರಾಮಯ್ಯ ಅವರ ಅನುಪಸ್ಥಿತಿ ಖಂಡಿತವಾಗಿ ಕಾಣಲಿದೆ. ಏನೇ ಭಿನ್ನಾಭಿಪ್ರಾಯಗಳಿದ್ದರೂ ಅವರು ಸಾಮಾಜಿಕ ನ್ಯಾಯ, ಸಮಾನತೆ, ಸಾಮಾನ್ಯ ಜನರಿಗೆ ಉತ್ತಮ ಕಾರ್ಯಕ್ರಮ ನೀಡಿದ್ದಾರೆ ಎದು ಮೆಚ್ಚುಗೆ ವ್ಯಕ್ತಪಡಿಸಿದರು.
ಇನ್ನೂ ಡಿಕೆ ಶಿವಕುಮಾರ್ ತಾತ ಆದ ಮೇಲೆ ಅದೃಷ್ಟ ಖುಲಾಯಿಸಿದೆ. ಅವರು ಕಾಂಗ್ರೆಸ್ ಪಕ್ಷಕ್ಕಾಗಿ ಹೋರಾಟ, ಸಂಘಟನೆ ಮಾಡಿದ್ದಾರೆ. ರಿಯಲ್ ಎಸ್ಟೇಟ್ ಎನ್ನುವುದು ಕಳ್ಳತನ ಅಥವಾ ದರೋಡೆಯಲ್ಲ, ಅನ್ಯಾಯ ಮಾಡದೆ ಆ ವೃತ್ತಿ ಮಾಡಬೇಕು. ಹಾಗಾಗೀ ಯಾರೂ ಈ ವಿಚಾರದಲ್ಲಿ ಟೀಕೆ ಮಾಡಬಾರದು. ಅವರು ಸಿಎಂ ಆದ ಆರು ತಿಂಗಳ ನಂತರ ಆಡಳಿತದ ವೈಖರಿ ವಿಶ್ಲೇಷಿಸಬೇಕು ಎಂದರು.