ಬೆಂಗಳೂರು: ಕರ್ನಾಟಕದ ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ದಂತ ಕಾಲೇಜುಗಳ ಒಕ್ಕೂಟ (COMED-K) ನಡೆಸುವ ಪದವಿಪೂರ್ವ ಪ್ರವೇಶ ಪರೀಕ್ಷೆ (UGET)ಯಲ್ಲಿ ಕರ್ನಾಟಕ ವಿದ್ಯಾರ್ಥಿಗಳ ಸಾಧನೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿರುವುದು ಕಂಡುಬಂದಿದೆ. ಈ ವರ್ಷ ಪ್ರಕಟವಾದ ಅಗ್ರ 10 ರ‍್ಯಾಂಕ್ ಪಟ್ಟಿಯಲ್ಲಿ ರಾಜ್ಯದ ಒಬ್ಬ ವಿದ್ಯಾರ್ಥಿಯೂ ಸ್ಥಾನ ಪಡೆಯದಿರುವುದು ಖೇದನೀಯ ವಿಚಾರವಾಗಿದೆ.
2026ನೇ ಸಾಲಿನ ಎಂಜಿನಿಯರಿಂಗ್ ಪದವಿ ಪ್ರವೇಶಕ್ಕಾಗಿ ನಡೆದ COMED-K UGET ಪರೀಕ್ಷೆಯ ಫಲಿತಾಂಶವನ್ನು ಶುಕ್ರವಾರ ಪ್ರಕಟಿಸಲಾಗಿದ್ದು, ಅಗ್ರ 10 ರ‍್ಯಾಂಕ್‌ಗಳನ್ನೂ ಕರ್ನಾಟಕದ ಹೊರಗಿನ ವಿದ್ಯಾರ್ಥಿಗಳೇ ಪಡೆದುಕೊಂಡಿದ್ದಾರೆ. ವಿಶೇಷವೆಂದರೆ, ಅಗ್ರ 10 ಸಾಧಕರಲ್ಲಿ ಐವರು ಜಾರ್ಖಂಡ್‌ನವರಾಗಿದ್ದು, ತಲಾ ಒಬ್ಬರು ಆಂಧ್ರಪ್ರದೇಶ, ಪಂಜಾಬ್, ಛತ್ತೀಸ್‌ಗಢ, ಬಿಹಾರ ಮತ್ತು ಉತ್ತರಾಖಂಡ ರಾಜ್ಯದವರಾಗಿದ್ದಾರೆ.
2025ರಲ್ಲಿ ಅಗ್ರ 10 ಪಟ್ಟಿಯಲ್ಲಿ ಕರ್ನಾಟಕದ ಆರು ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದರು. ಆದರೆ ಈ ವರ್ಷ ಅಗ್ರ 100 ರ‍್ಯಾಂಕ್‌ಗಳಲ್ಲಿ ಕರ್ನಾಟಕದ 30 ವಿದ್ಯಾರ್ಥಿಗಳು ಇದ್ದಾರೆ.
ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳ ಸಂಖ್ಯೆಯಲ್ಲಿಯೂ ಕರ್ನಾಟಕದ ಹೊರಗಿನ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮೇ 9ರಂದು ದೇಶದ 171 ನಗರಗಳ 303 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಪರೀಕ್ಷೆಗೆ ಒಟ್ಟು 1,10,774 ಅಭ್ಯರ್ಥಿಗಳು ಹಾಜರಾಗಿದ್ದರು. ಇವರಲ್ಲಿ 36,954 ಮಂದಿ ಕರ್ನಾಟಕದವರಾಗಿದ್ದರೆ, 73,820 ಮಂದಿ ಇತರೆ ರಾಜ್ಯಗಳವರಾಗಿದ್ದಾರೆ.
ಅಧಿಕಾರಿಗಳು ಹಂಚಿಕೊಂಡಿರುವ ಅಂಕಿಅಂಶಗಳ ಪ್ರಕಾರ, 90ರಿಂದ 100 ಪರ್ಸೆಂಟೈಲ್ ನಡುವೆ 11,207 ಅಭ್ಯರ್ಥಿಗಳಿದ್ದು, ಅವರಲ್ಲಿ 3,496 ಮಂದಿ ಕರ್ನಾಟಕದವರು. 80ರಿಂದ 90 ಪರ್ಸೆಂಟೈಲ್ ನಡುವೆ 11,385 ಅಭ್ಯರ್ಥಿಗಳಿದ್ದು, ಅವರಲ್ಲಿ 3,207 ಮಂದಿ ಕರ್ನಾಟಕದವರು. 70ರಿಂದ 80 ಪರ್ಸೆಂಟೈಲ್ ನಡುವೆ 10,940 ಅಭ್ಯರ್ಥಿಗಳಿದ್ದು, ಅವರಲ್ಲಿ 3,111 ಮಂದಿ ಕರ್ನಾಟಕದವರಾಗಿದ್ದಾರೆ.
ಫಲಿತಾಂಶ ವೀಕ್ಷಣೆ
ಅಭ್ಯರ್ಥಿಗಳು ತಮ್ಮ ತಮ್ಮ ‘Applicant Login’ ಮೂಲಕ ರ‍್ಯಾಂಕ್‌ಗಳನ್ನು ವೀಕ್ಷಿಸಬಹುದು. ಅರ್ಹ ಅಭ್ಯರ್ಥಿಗಳ ರ‍್ಯಾಂಕ್ ಕಾರ್ಡ್‌ಗಳನ್ನು ಸೃಷ್ಟಿಸಿ COMED-K ವೆಬ್‌ಸೈಟ್‌ನಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತದೆ.
ಈ ವರ್ಷವೂ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಆನ್‌ಲೈನ್ ಮೂಲಕವೇ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಭ್ಯರ್ಥಿಗಳು ತಮ್ಮ ದಾಖಲೆಗಳ ಸ್ಕ್ಯಾನ್ ಪ್ರತಿಗಳನ್ನು ಲಾಗಿನ್ ಮೂಲಕ ಅಪ್‌ಲೋಡ್ ಮಾಡಬೇಕಾಗುತ್ತದೆ. ಈ ದಾಖಲೆಗಳನ್ನು ಪರಿಣಿತ ಪರಿಶೀಲನಾ ಅಧಿಕಾರಿಗಳ ತಂಡವು ಪರಿಶೀಲಿಸಲಿದೆ.
ಲಭ್ಯವಿರುವ ಸೀಟುಗಳ ಸಂಖ್ಯೆ, ಬೋಧನಾ ಶುಲ್ಕದ ವಿವರಗಳು ಹಾಗೂ ಕೌನ್ಸೆಲಿಂಗ್ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.
ಕೌನ್ಸೆಲಿಂಗ್‌ನಲ್ಲಿ ಭಾಗವಹಿಸುವ ವಿಧಾನವನ್ನು ವಿವರಿಸುವ ಪ್ರತ್ಯೇಕ ಮಾರ್ಗಸೂಚಿ ದಾಖಲೆ ಕೂಡ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ. ಅಭ್ಯರ್ಥಿಗಳು ನಿಯಮಿತವಾಗಿ ವೆಬ್‌ಸೈಟ್ ಪರಿಶೀಲಿಸುವುದರ ಜೊತೆಗೆ, ಸೀಟು ಆಯ್ಕೆ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು ಎಂದು ಕಾಮೆಡ್ಅ ಕೆ ಅಧಿಕಾರಿಗಳು ತಿಳಿಸಿದ್ದಾರೆ.
ದರ್ಶಿಲ್ ಮೋದಿ – ರಾಂಚಿ, ಜಾರ್ಖಂಡ್
ಪ್ರಿಯಾನುಜ್ ಭಾಗಬತಿ – ಜಂಶೆಡ್ಪುರ, ಜಾರ್ಖಂಡ್
ಶ್ರೇಷ್ಠಾ ಗುಪ್ತಾ – ಡೆಹ್ರಾಡೂನ್, ಉತ್ತರಾಖಂಡ
ಅರ್ಷ್ ಪರಾಶರ್ – ಜಾರ್ಖಂಡ್
ಇಶಾಂಕಾ ಅಗರ್ವಾಲ್ – ಜಂಶೆಡ್ಪುರ, ಜಾರ್ಖಂಡ್
ಅನೀಶ್ ಶುಕ್ಲಾ – ಜಂಶೆಡ್ಪುರ, ಜಾರ್ಖಂಡ್
ನರೇಂದ್ರಬಾಬು ಗಾರಿ ಮಹಿತ್ – ಚಿತ್ತೂರು, ಆಂಧ್ರಪ್ರದೇಶ
ದೃಷ್ಟಿ ಸಚ್‌ದೇವ್ – ಬಿಲಾಸ್ಪುರ, ಛತ್ತೀಸ್‌ಗಢ
ಮನಸ್ ಜಿಂದಾಲ್ – ಪಂಜಾಬ್
ಆದಿತ್ಯ ಕುಮಾರ್ – ಬಿಹಾರ