ಬೆಂಗಳೂರು: ಆತ್ಮಹತ್ಯೆಗೆ ಯತ್ನಿಸಿದ್ದ 46 ವರ್ಷದ ಉದ್ಯಮಿಯೊಬ್ಬರನ್ನು ರಾಮಮೂರ್ತಿನಗರ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸಮಯಪ್ರಜ್ಞೆಯಿಂದ ರಕ್ಷಣೆ ಮಾಡಿರುವ ಘಟನೆ ಬೆಂಗಳೂರಿನ ಕಸ್ತೂರಿನಗರದ ಅಂಕಪ್ಪ ರೆಡ್ಡಿ ಲೇಔಟ್‌ನಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಉದ್ಯಮಿ ತನ್ನ ಸಂಬಂಧಿಕ ಹಾಗೂ ಸ್ನೇಹಿತ ವಾಸವಿದ್ದ ಅಪಾರ್ಟ್‌ಮೆಂಟ್‌ಗೆ ತೆರಳಿದ್ದರು. ಬಳಿಕ ಕಟ್ಟಡದ 5ನೇ ಮಹಡಿಗೆ ತೆರಳಿ, ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕೂಗಾಡುತ್ತಾ ಕುಟುಂಬ ಸದಸ್ಯರನ್ನು ಸ್ಥಳಕ್ಕೆ ಕರೆಸುವಂತೆ ಒತ್ತಾಯಿಸಿದ್ದರು.
ಘಟನೆಯ ಬಗ್ಗೆ ಕುಟುಂಬದ ಸದಸ್ಯರೊಬ್ಬರು ಬೆಳಿಗ್ಗೆ 9.23ಕ್ಕೆ ತುರ್ತು ಸಹಾಯವಾಣಿ 112ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಮಾಹಿತಿ ಪಡೆದ ಕೂಡಲೇ ರಾಮಮೂರ್ತಿನಗರ ಪೊಲೀಸ್ ಠಾಣೆಗೆ ಸೇರಿದ ಹೋಯ್ಸಳ-241 ವಾಹನದಲ್ಲಿದ್ದ ಎಎಸ್‌ಐ ಚೌಡಪ್ಪ ಹಾಗೂ ಹೆಡ್ ಕಾನ್‌ಸ್ಟೇಬಲ್ ಪರಶುರಾಮ್ ಅವರು ಕೇವಲ ಆರು ನಿಮಿಷಗಳಲ್ಲಿ ಸ್ಥಳಕ್ಕೆ ಆಗಮಿಸಿದ್ದಾರೆ.
ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿಯೊಂದಿಗೆ ಸಮನ್ವಯ ಸಾಧಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಉದ್ಯಮಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾದರು.
ಪ್ರಾಥಮಿಕ ವಿಚಾರಣೆಯಲ್ಲಿ, ಉದ್ಯಮಿ ಮಾನಸಿಕ ಒತ್ತಡದಿಂದ ಬಳಲುತ್ತಿದ್ದು, ಕುಟುಂಬದವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದ್ದರಿಂದ ಆತ ಈ ಕೃತ್ಯಕ್ಕೆ ಮುಂದಾಗಿದ್ದಾನೆಂದು ತಿಳಿದುಬಂದಿದೆ.
9 ದಿನಗಳಲ್ಲಿ 2ನೇ ಕಾರ್ಯಾಚರಣೆ
ಇದೇ ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಒಂಬತ್ತು ದಿನಗಳ ಅವಧಿಯಲ್ಲಿ ಇದು ಎರಡನೇ ರಕ್ಷಣಾ ಕಾರ್ಯಾಚರಣೆಯಾಗಿದೆ.
ಮೇ 21ರಂದು ಎನ್‌ಆರ್‌ಐ ಲೇಔಟ್‌ನ ಅಪಾರ್ಟ್‌ಮೆಂಟ್ ಕಟ್ಟಡದ 5ನೇ ಮಹಡಿಗೆ ಏರಿದ್ದ 16 ವರ್ಷದ ಬಾಲಕಿ ಆತ್ಮಹತ್ಯೆ ಬೆದರಿಕೆ ಹಾಕಿದ್ದಳು.
ಆಗ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಬಾಲಕಿಯನ್ನು ರಕ್ಷಿಸಿದ್ದರು. ಬಳಿಕ ಆಕೆಯನ್ನು ಚಿಕಿತ್ಸೆಗಾಗಿ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸಹಾಯವಾಣಿ
ನಿಮಗೆ ಆತ್ಮಹತ್ಯಾ ಆಲೋಚನೆಗಳು ಬರುತ್ತಿದ್ದರೆ, ಅಥವಾ ಸ್ನೇಹಿತರ ಬಗ್ಗೆ ಚಿಂತೆಯಾಗಿದ್ದರೆ ಅಥವಾ ಭಾವನಾತ್ಮಕ ಬೆಂಬಲದ ಅಗತ್ಯವಿದ್ದರೆ, ನಿಮ್ಮ ಸಮಸ್ಯೆಗಳ ಆಲಿಸಲು, ಬೆಂಬಲಿಸಲು ಸ್ನೇಹ ಫೌಂಡೇಶನ್ - 04424640050, ಟೆಲಿ ಮಾನಸ್ - 14416 ಅಥವಾ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್‌ನ ಸಹಾಯವಾಣಿ - 02225521111 ಗೆ ಕರೆ ಮಾಡಿ, ಈ ಸಹಾಯವಾಣಿ ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 8 ರಿಂದ ರಾತ್ರಿ 10 ರವರೆಗೆ ಲಭ್ಯವಿರುತ್ತದೆ.