ಮಂಡ್ಯ: ‘ಕುಣಿಯಲಾಗದವನಿಗೆ ನೆಲ ಡೊಂಕು’ ಎಂಬಂತಾಗಿದೆ ಎಚ್.ಡಿ. ಕುಮಾರಸ್ವಾಮಿ ಅವರ ಪಾಡು. ಆರೋಪ, ಟೀಕೆ ಮಾಡುವುದನ್ನು ಬಿಟ್ಟು ಮೊದಲು ನಮ್ಮ ಜಿಲ್ಲೆಯ ಜನರ ಋಣ ತೀರಿಸುವ ಕೆಲಸ ಮಾಡಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.
ನಗರದ ಮಂಡ್ಯ ವಿಶ್ವವಿದ್ಯಾಲಯ ಆವರಣದಲ್ಲಿ ₹1,793 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಇಲ್ಲಿನ ಜನ ಎರಡೂವರೆ ಲಕ್ಷ ಮತಗಳ ಅಂತರದಿಂದ ನಿಮಗೆ ಅಧಿಕಾರ ನೀಡಿದ್ದಾರೆ.
ಆದರೆ ನೀವು ಜಿಲ್ಲೆಗೆ ನೀಡಿದ ಕೊಡುಗೆಯೇನು? ಸಿಎಸ್‌ಆರ್ ನಿಧಿಯಲ್ಲಿ ಅಲ್ಲೊಂದು ಇಲ್ಲೊಂದು ಬಸ್ ನಿಲ್ದಾಣ ನಿರ್ಮಿಸಿದರೆ ಅದು ಅಭಿವೃದ್ಧಿ ಎನಿಸಿಕೊಳ್ಳುವುದಿಲ್ಲ. ನೀವು ಕೈಗಾರಿಕೆ ಸ್ಥಾಪಿಸಲು ಕೇಳಿರುವ 100 ಎಕರೆ ಜಮೀನು ನೀಡಿದ್ದೇವೆ. ಅಗತ್ಯ ಬಿದ್ದರೆ ಇನ್ನೂ 500 ಎಕರೆ ಕೊಡಲು ಸಿದ್ಧರಿದ್ದೇವೆ. ಮೊದಲು ಕೆಲಸ ಮಾಡಿ ತೋರಿಸಿ’ ಎಂದು ಕುಟುಕಿದರು.
ನಿಮ್ಮ ಕೈಯಲ್ಲಿ ಕಾರ್ಖಾನೆ ನಿರ್ಮಿಸಲು ಆಗುವುದಿಲ್ಲ ಎಂಬುದು ನನಗೆ ಚೆನ್ನಾಗಿ ಗೊತ್ತು, ಏಕೆಂದರೆ ನಾನು ನಿಮ್ಮ ಜತೆಯಲ್ಲೇ ಇದ್ದವನು. ಸರ್ಕಾರಿ ಸ್ವಾಮ್ಯದ ಏಕೈಕ ಸಕ್ಕರೆ ಕಾರ್ಖಾನೆ ಮೈಷುಗರ್ ನಮ್ಮ ಜಿಲ್ಲೆಯಲ್ಲಿದೆ. ಇಲ್ಲಿ ಡಿಸ್ಟಿಲರಿ ಘಟಕ ಪ್ರಾರಂಭಿಸಲು ಸಾಕಷ್ಟು ಶ್ರಮಿಸುತ್ತಿದ್ದೇನೆ. ನಿಮಗೆ ನಿಜವಾಗಿಯೂ ಜಿಲ್ಲೆಯ ಜನರ ಋಣ ತೀರಿಸುವ ಕಾಳಜಿ ಇದ್ದರೆ, ಪ್ರಧಾನಿಯವರೊಂದಿಗೆ ಮಾತನಾಡಿ ಈ ಮೈಷುಗರ್ ಕಾರ್ಖಾನೆಗೆ ₹250 ಕೋಟಿ ಅನುದಾನ ತಂದುಕೊಡಿ. ನಾನೇ ಖುದ್ದಾಗಿ ನಿಮಗೆ ಸಾರ್ವಜನಿಕವಾಗಿ ಅಭಿನಂದನೆ ಸಲ್ಲಿಸುತ್ತೇನೆ’ ಎಂದರು.