ಗೋಕರ್ಣ (ಉತ್ತರ ಕನ್ನಡ): ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿರುವ ದಿಬ್ಬಣಶೇಷಿ ಸಮುದ್ರ ತೀರದಲ್ಲಿ ಭಾನುವಾರ ಸಂಭವಿಸಿದ ದುರಂತವೊಂದರಲ್ಲಿ, ಬೆಂಗಳೂರಿನಿಂದ ಪ್ರವಾಸಕ್ಕೆ ಬಂದಿದ್ದ ಇಬ್ಬರು ಪ್ರವಾಸಿಗರು (ಒಬ್ಬ ಮಹಿಳೆ ಸೇರಿದಂತೆ) ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಮತ್ತೊಬ್ಬ ವ್ಯಕ್ತಿ ನಾಪತ್ತೆಯಾಗಿದ್ದಾರೆ. ಖಾಸಗಿ ಸಂಸ್ಥೆಯ ಉದ್ಯೋಗಿಗಳಾಗಿದ್ದ ಮೃತರು, ತಮ್ಮ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ಈಜಲು ಸಮುದ್ರಕ್ಕಿಳಿದಾಗ ಈ ದುರ್ಘಟನೆ ಸಂಭವಿಸಿದೆ. ಮೃತರನ್ನು ಶೋಭಾ ದಾಸ್ (22) ಮತ್ತು ಅಕ್ರಮ್ ಎಂದು ಗುರುತಿಸಲಾಗಿದೆ.
ನಾಪತ್ತೆಯಾಗಿರುವ ವ್ಯಕ್ತಿಯ ಹೆಸರು ವಿಶ್ವೇಶ್ ಎ.ಕೆ. ಎಂದು ತಿಳಿದುಬಂದಿದೆ. ಇವರು ಬೆಂಗಳೂರಿನ ಬೆಳ್ಳಂದೂರಿನಲ್ಲಿರುವ 'ಅಲೋರಿಕಾ ಇಂಡಿಯಾ ಪ್ರೈವೇಟ್ ಲಿಮಿಟೆಡ್' (Alorica India Pvt Ltd) ಎಂಬ ಖಾಸಗಿ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ 16 ಜನರ ಗುಂಪಿನಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕಂಪನಿಯು ನೀಡಿದ ಬೋನಸ್ ನಿಂದ ಸಂಭ್ರಮಾಚರಣೆಗಾಗಿ ಇವರು ಇಲ್ಲಿಗೆ ಬಂದಿದ್ದರು. 16 ಮಂದಿಯೂ ಒಂದು ಖಾಸಗಿ ರೆಸಾರ್ಟ್‌ನಲ್ಲಿ ತಂಗಿದ್ದರು ಮತ್ತು ಮರುದಿನ ಸಮುದ್ರಕ್ಕೆ ಇಳಿದಿದ್ದರು ಎನ್ನಲಾಗಿದೆ.
ಆದರೆ, ದಡದಿಂದ ಸುಮಾರು 15-16 ಅಡಿ ದೂರದಲ್ಲಿದ್ದಾಗ ಅಲೆಗಳು ಹೆಚ್ಚಾಗಿದೆ. ಅವರು ಅಪಾಯದಲ್ಲಿರುವುದನ್ನು ಗಮನಿಸಿದ ಸ್ಥಳೀಯರು ಜೀವ ರಕ್ಷಕರಿಗೆ (ಲೈಫ್ ಗಾರ್ಡ್‌ಗಳಿಗೆ) ಮಾಹಿತಿ ನೀಡಿದ್ದಾರೆ. ಕೂಡಲೇ ಮೀನುಗಾರರು ಅವರನ್ನು ರಕ್ಷಿಸಲು ಧಾವಿಸಿದ್ದಾರೆ. ಆದರೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆಯೇ ಶೋಭಾ ಮತ್ತು ಅಕ್ರಮ್ ಮೃತಪಟ್ಟಿದ್ದಾರೆ.
ನಾಪತ್ತೆಯಾಗಿರುವ ವಿಶ್ವೇಶ್ ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆಎಂದು ಗೋಕರ್ಣ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀಧರ್ ತಿಳಿಸಿದ್ದಾರೆ.