ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿರುವ ಸ್ಟಿಂಗ್ ಆಪರೇಷನ್ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಅವರ ಆರೋಪಗಳಿಗೆ ಕಾಂಗ್ರೆಸ್ ನಾಯಕರು ತಿರುಗೇಟು ನೀಡಿದ್ದಾರೆ.
ತೆರೆ ಹಿಂದೆ ಮಗು ಚಿವುಟಿ, ಮಾಧ್ಯಮಗಳ ಮುಂದೆ ತೊಟ್ಟಿಲು ತೂಗುತ್ತಿದ್ದ "HD ಸ್ಟಿಂಗ್ ಸ್ವಾಮಿಯಾಗಿದ್ದಾರೆ. ಅವರ ಮನೆಯಿಂದಲೇ ಸ್ಟಿಂಗ್ ಆಪರೇಷನ್ ವಿಡಿಯೋ ಅಪ್ಲೋಡ್ ಆಗಿದ್ದು, 29 ಲಕ್ಷ ರೂ ವಹಿವಾಟು ನಡೆದಿದೆ ಎಂದು ಆರೋಪಿಸಿದ್ದಾರೆ.
ಕುಮಾರಸ್ವಾಮಿ ಸುದ್ದಿಗೋಷ್ಠಿ ಬೆನ್ನಲ್ಲೇ, ಸ್ಟಿಂಗ್ ಆಪರೇಷನ್ ಕಿಂಗ್‌ನ ಪೆನ್ ಡ್ರೈವ್ ಬ್ರದರ್ ಎಂಬ ಫಲಕ ಪ್ರದರ್ಶಿಸಿ ಸುದ್ದಿಗೋಷ್ಠಿ ನಡೆಸಿದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ಹೆಸರನ್ನು ತಳಕು ಹಾಕಿ ಸ್ಫೋಟಕ ಆರೋಪಗಳನ್ನು ಮಾಡಿದ್ದಾರೆ.
“2026ರ ಆಗಸ್ಟ್ 27ರಂದು ಎಚ್. ಡಿ ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಪ್ರಧಾನಿಗೆ ಸ್ಟಿಂಗ್ ವಿಡಿಯೋ ತೋರಿಸಿ, ‘ಈ ಒಂದು ವಿಡಿಯೋ ಸಾಕು, ರಾಜ್ಯದಲ್ಲಿ ಕಾಂಗ್ರೆಸ್ ಸಂಹಾರ ಮಾಡಲು ಅನುಮತಿ ನೀಡಿ’ ಎಂದು ಮನವೊಲಿಸಿದ್ದರು. ಇದಕ್ಕೆ ಪ್ರಧಾನಿ ಮೋದಿ ಅವರು ‘ಗೋ ಅಹೆಡ್’ ಎಂದಿದ್ದಾರೆ. ಈ ವಿಚಾರವನ್ನು ಸ್ವತಃ ಕುಮಾರಸ್ವಾಮಿ ಅವರೇ ತಮ್ಮ ಆಪ್ತರ ಬಳಿ ಹೇಳಿಕೊಂಡಿರುವ ಆಡಿಯೋ ಸಾಕ್ಷಿ ನಮ್ಮ ಬಳಿ ಇದೆ ಎಂದು ಬಾಂಬ್ ಸಿಡಿಸಿದರು.
ಕಳೆದ ಒಂದು ತಿಂಗಳಿಂದ ಕುಮಾರಸ್ವಾಮಿ ಸತತ ಸುದ್ದಿಗೋಷ್ಠಿಗಳನ್ನು ನಡೆಸಿ ರಾಜ್ಯದ ಮರ್ಯಾದೆ ಹರಾಜು ಹಾಕುತ್ತಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ಜನಪ್ರಿಯತೆ ಸಹಿಸಲಾಗದೆ, 2028ಕ್ಕೆ ಅಧಿಕಾರ ಹಿಡಿಯುವ ದುರುದ್ದೇಶದಿಂದ ಕುಮಾರಸ್ವಾಮಿಗೆ ನರೇಂದ್ರ ಮೋದಿ ಮತ್ತು ಅಮಿತ್ ಶಾ ಸುಪಾರಿ ಕೊಟ್ಟಿದ್ದಾರೆ. ಈ ಕಥೆಯ ಡೈರೆಕ್ಟರ್, ಪ್ರೊಡ್ಯೂಸರ್ ಮತ್ತು ಆ್ಯಕ್ಟರ್ ಎಲ್ಲವೂ ಕುಮಾರಸ್ವಾಮಿಯವರೇ ಎಂದು ವಾಗ್ದಾಳಿ ನಡೆಸಿದರು.
ಸ್ಟಿಂಗ್ ಕೆಲಸಕ್ಕಾಗಿ ಪ್ರಜ್ವಲ್ ಪ್ರಸಾದ್, ರಿತೇಶ್ ಹಾಗೂ ವಿನೋದ್ ಎಂಬುವವರನ್ನು ಕುಮಾರಸ್ವಾಮಿ ನೇಮಿಸಿಕೊಂಡಿದ್ದರು. ಇವರಿಗೆ 1 ಲಕ್ಷದಿಂದ 2 ಲಕ್ಷದವರೆಗೆ ಸಂಬಳ ನಿಗದಿ ಮಾಡಲಾಗಿತ್ತು. ಬಾಗೇಪಲ್ಲಿ ಪ್ರಶಾಂತ್ ಮೂಲಕ ವಿಡಿಯೋ ಪಡೆದು, ರಿತೇಶ್ ಮತ್ತು ವಿನೋದ್‌ಗೆ 50,000 ರೂ. ನೀಡಿ ಹೊಸ ಮೊಬೈಲ್ ಖರೀದಿಸಲಾಗಿತ್ತು. ಆ ಮೊಬೈಲ್‌ನಿಂದ ಕುಮಾರಸ್ವಾಮಿ ಅವರ ಸಮ್ಮುಖದಲ್ಲೇ ದೆಹಲಿ ನಿವಾಸದಿಂದ ವಿಡಿಯೋ ಅಪ್‌ಲೋಡ್ ಮಾಡಲಾಗಿದೆ ಎಂದು ಬಂಧಿತ ಆರೋಪಿ ರಿತೇಶ್ ಸ್ವತಃ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ. ಅಲ್ಲದೆ, ಈ ಮೂವರ ಖಾತೆಗಳಿಂದ ಮೂರು ಪ್ರತ್ಯೇಕ ದಿನಗಳಲ್ಲಿ 29 ಲಕ್ಷ ಹಣಕಾಸು ವಹಿವಾಟು ನಡೆದಿದೆ. ಈ ಹಣ ಯಾರದ್ದು ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಪ್ರಾಥಮಿಕ ವರದಿಯ ಆಧಾರದ ಮೇಲೆ ತಾಂತ್ರಿಕ ಸಾಕ್ಷ್ಯಗಳನ್ನು ಬಿಡುಗಡೆ ಮಾಡಿದ್ದಾರೆ. ಅವರು ಹೇಳಿರುವುದು ಕೇವಲ ಶೇ. 10ರಷ್ಟು ಸತ್ಯವಷ್ಟೇ. ಬರುವ ಗುರುವಾರ ಅಥವಾ ಶುಕ್ರವಾರದ ವೇಳೆಗೆ ಕಮಿಷನರ್ ಇನ್ನಷ್ಟು ಮಹತ್ವದ ವಿವರಗಳನ್ನು ಬಹಿರಂಗಪಡಿಸಲಿದ್ದಾರೆ. ಬೇರೆಯವರ ಮನೆ ಮೇಲೆ ಎಸೆಯಲು ಹೋದ ಬಾಂಬ್ ಈಗ ಕುಮಾರಸ್ವಾಮಿ ಅವರ ಮನೆ ಮೇಲೆಯೇ ಬಿದ್ದಿದೆ” ಎಂದು ಲೇವಡಿ ಮಾಡಿದರು.
ಸಂತ್ರಸ್ತ ಮಹಿಳೆ ಈ ಹಿಂದೆಯೇ ಇ-ಮೇಲ್ ದೂರು ನೀಡಿದ್ದರು ಎಂದು ಕುಮಾರಸ್ವಾಮಿ ಬೊಬ್ಬೆ ಹೊಡೆಯುತ್ತಿದ್ದಾರೆ. ಹಾಗಿದ್ದರೆ ಆ ಇ-ಮೇಲ್ ಪ್ರತಿ ಎಲ್ಲಿದೆ? ಅದನ್ನು ಧೈರ್ಯವಿದ್ದರೆ ಸಾರ್ವಜನಿಕವಾಗಿ ಬಿಡುಗಡೆ ಮಾಡಲಿ. ಅಸಲಿಗೆ ಯಾವುದೇ ಸ್ಟಿಂಗ್ ಅಥವಾ ದೌರ್ಜನ್ಯ ನಡೆದಿಲ್ಲ. ಕೇವಲ ಹಣ ವಸೂಲಿ ಮತ್ತು ಬ್ಲ್ಯಾಕ್‌ಮೇಲ್ ಮಾಡುವ ದುರುದ್ದೇಶದಿಂದ ಈ ಷಡ್ಯಂತ್ರ ಹೆಣೆಯಲಾಗಿದೆ ಎಂದು ಕಾಂಗ್ರೆಸ್ ನಾಯಕರು ತಿರುಗೇಟು ನೀಡಿದ್ದಾರೆ.