ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿ ಹಗರಣದ ಕುರಿತು ಹೆಚ್ಚಿನ ತನಿಖೆ ನಡೆಸಲು ಪುನರ್‌ರಚಿಸಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಮುಖ್ಯಸ್ಥರನ್ನಾಗಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಆರ್. ಹಿತೇಂದ್ರ ಅವರನ್ನು ಕರ್ನಾಟಕ ಹೈಕೋರ್ಟ್ ನೇಮಿಸಿದೆ.
ರಾಜ್ಯ ಸರ್ಕಾರ ಶಿಫಾರಸು ಮಾಡಿದ್ದ ಎಡಿಜಿಪಿ ದರ್ಜೆಯ ನಾಲ್ವರು ಅಧಿಕಾರಿಗಳ ಪೈಕಿ ಹಿತೇಂದ್ರ ಅವರ ಹೆಸರನ್ನು ಹೈಕೋರ್ಟ್ ಆಯ್ಕೆ ಮಾಡಿದೆ. ಈ ಹಿಂದೆ ಸೂಚಿಸಲಾಗಿದ್ದ ಡಿಜಿಪಿ ಅಲೋಕ್ ಕುಮಾರ್ ಬದಲಿಗೆ ಹಿತೇಂದ್ರ ಅವರನ್ನು ನೇಮಿಸಲಾಗಿದೆ. ಅಲ್ಲದೆ, ಐಪಿಎಸ್ ಅಧಿಕಾರಿ ದಿವ್ಯಾ ವಿ. ಗೋಪಿನಾಥ್ ಅವರ ಬದಲಿಗೆ ಎಡಿಜಿಪಿ (ಆಡಳಿತ) ಸೌಮೇಂದು ಮುಖರ್ಜಿ ಅವರನ್ನು ಎಸ್‌ಐಟಿ ಸದಸ್ಯರನ್ನಾಗಿ ನೇಮಿಸಲಾಗಿದೆ.
ಸೆಪ್ಟೆಂಬರ್ 21ರಂದು ನ್ಯಾಯಾಲಯ ನೇಮಿಸಿದ್ದ ಉಳಿದ ಮೂವರು ಐಪಿಎಸ್ ಅಧಿಕಾರಿಗಳಾದ ಅನುಪ್ ಎ. ಶೆಟ್ಟಿ, ಕುಶಾಲ್ ಚೌಕ್ಸೆ ಮತ್ತು ಕ್ಷಮಾ ಮಿಶ್ರಾ ಅವರ ನೇಮಕಾತಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಬಸನಗೌಡ ಆರ್. ಪಾಟೀಲ್ ಮತ್ತಿತರರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಸೋಮವಾರ ಇಬ್ಬರು ಅಧಿಕಾರಿಗಳ ಬದಲಾವಣೆಗೆ ಆದೇಶ ಹೊರಡಿಸಿದರು.
ಕೆಪಿಎಸ್‌ಸಿ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಆರೋಪಕ್ಕೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ಈ ಪೈಕಿ ಒಂದು ಪ್ರಕರಣವನ್ನು ಅಪರಾಧ ತನಿಖಾ ಇಲಾಖೆ (ಸಿಐಡಿ)ಗೆ ವಹಿಸಲಾಗಿದ್ದರೆ, ಮತ್ತೊಂದು ಪ್ರಕರಣವನ್ನು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿತ್ತು.
ಪುನರ್‌ರಚನೆಯಾದ ಎಸ್‌ಐಟಿ ವಿಶ್ವಾಸಾರ್ಹತೆ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಯಾವುದೇ ಪ್ರಭಾವಕ್ಕೆ ಒಳಗಾಗದೆ ತನಿಖೆ ಮುಂದುವರಿಸಬೇಕು ಎಂದು ಹೈಕೋರ್ಟ್ ಸೂಚಿಸಿದೆ.
ಹಿಂದಿನ ಸಿಐಡಿ ತನಿಖೆಯ ನೆರಳು ಹೊಸ ತನಿಖೆಯ ಮೇಲೆ ಬೀಳದಂತೆ ನೋಡಿಕೊಳ್ಳುವುದು ಅತ್ಯಗತ್ಯ ಎಂದು ನ್ಯಾಯಾಲಯ ಹೇಳಿದೆ. ಹೀಗಾಗಿ, ಹಿಂದಿನ ಸಿಐಡಿ ತನಿಖೆಯಲ್ಲಿ ಯಾವುದೇ ಹುದ್ದೆ, ಸ್ಥಾನಮಾನ ಅಥವಾ ಸಾಮರ್ಥ್ಯದಲ್ಲಿ ಭಾಗಿಯಾಗಿದ್ದ ಅಧಿಕಾರಿಗಳನ್ನು ಎಸ್‌ಐಟಿಯ ಸಹಾಯಕ ತಂಡಕ್ಕೂ ಸೇರ್ಪಡೆ ಮಾಡಬಾರದು ಎಂದು ಸ್ಪಷ್ಟಪಡಿಸಿದೆ.
ಹಿಂದಿನ ಸಿಐಡಿ ತನಿಖೆಯೊಂದಿಗೆ ಯಾವುದೇ ಸಂಬಂಧವಿಲ್ಲದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ತನಿಖೆಗೆ ಅಗತ್ಯವಿರುವಂತೆ ಆಯ್ಕೆ ಮಾಡಿಕೊಳ್ಳಲು ಎಸ್‌ಐಟಿಗೆ ಸ್ವಾತಂತ್ರ್ಯ ನೀಡಲಾಗಿದೆ. ಈ ಪ್ರತ್ಯೇಕತೆ ಕೇವಲ ಆದೇಶದ ಅಕ್ಷರಗಳಲ್ಲಿ ಮಾತ್ರವಲ್ಲದೆ, ಅದರ ಆಶಯದಲ್ಲಿಯೂ ಸಂಪೂರ್ಣವಾಗಿ ಪಾಲನೆಯಾಗಬೇಕು ಎಂದು ನ್ಯಾಯಾಲಯ ಹೇಳಿದೆ.
ತನಿಖೆಯನ್ನು ಪರಿಣಾಮಕಾರಿಯಾಗಿ ಮತ್ತು ತ್ವರಿತವಾಗಿ ಪೂರ್ಣಗೊಳಿಸಲು ಎಸ್‌ಐಟಿ ಕೇಳುವ ಎಲ್ಲ ಅಗತ್ಯ ಮೂಲಸೌಕರ್ಯ, ಸಿಬ್ಬಂದಿ, ತಾಂತ್ರಿಕ ಸೌಲಭ್ಯ, ಸಾರಿಗೆ ವ್ಯವಸ್ಥೆ ಹಾಗೂ ಇತರ ಸಂಪನ್ಮೂಲಗಳನ್ನು ರಾಜ್ಯ ಸರ್ಕಾರ ಒದಗಿಸಬೇಕು. ಸಂಪೂರ್ಣ ಸಹಕಾರ ನೀಡಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ಎಸ್‌ಐಟಿ ಅಧಿಕಾರಿಗಳನ್ನು ಅವರ ಪ್ರಸ್ತುತ ಹುದ್ದೆಯಿಂದ ಬೆಂಗಳೂರಿನ ಹೊರಗೆ ವರ್ಗಾವಣೆ ಮಾಡಬಾರದು ಎಂದು ನ್ಯಾಯಾಲಯ ಸೂಚಿಸಿದೆ.
ಇದೇ ವೇಳೆ, ಜಾರಿ ನಿರ್ದೇಶನಾಲಯ (ಇ.ಡಿ.) ಮತ್ತು ಎಸ್‌ಐಟಿ ತಮ್ಮ ತಮ್ಮ ಕಾನೂನು ವ್ಯಾಪ್ತಿಯಲ್ಲಿ ಸ್ವತಂತ್ರವಾಗಿ ಹಾಗೂ ಸಮಾನಾಂತರವಾಗಿ ತನಿಖೆ ಮುಂದುವರಿಸಬೇಕು. ಪರಸ್ಪರ ಸಮನ್ವಯ ಮತ್ತು ಸಹಕಾರದೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದೆ. ತನಿಖೆಯ ಪ್ರಗತಿಯ ವರದಿಯನ್ನು ಇ.ಡಿ. ಕಾಲಕಾಲಕ್ಕೆ ನ್ಯಾಯಾಲಯಕ್ಕೆ ಸಲ್ಲಿಸುತ್ತಿರಬೇಕು ಎಂದು ಆದೇಶದಲ್ಲಿ ಹೇಳಿದೆ.