ಕೇಂದ್ರ ಚುನಾವಣಾ ಆಯೋಗ 
ರಾಜ್ಯ

ಸಾಲು ಸಾಲು ಸಮಸ್ಯೆ: ದತ್ತಾಂಶ ಹಂಚಿಕೊಳ್ಳದ ಕೇಂದ್ರ ಚುನಾವಣಾ ಆಯೋಗ; GBA ಚುನಾವಣೆ ಮತ್ತಷ್ಟು ವಿಳಂಬ!

ಒಂದು ವೇಳೆ ಮುಂದಿನ ಒಂದೆರಡು ದಿನಗಳಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ದತ್ತಾಂಶ ಸಿಗದಿದ್ದರೆ, ನಾವು ಈ ಸಂಗತಿಗಳನ್ನು ನ್ಯಾಯಾಲಯಗಳ ಮುಂದಿಟ್ಟು ಹೆಚ್ಚಿನ ಸಮಯಾವಕಾಶ ಕೋರುತ್ತೇವೆ.

ಬೆಂಗಳೂರು: ಸ್ಥಳೀಯ ಸಂಸ್ಥೆಗಳ (ನಗರ ಪಾಲಿಕೆ) ಚುನಾವಣೆಗಳನ್ನು ನಡೆಸುವುದು ಕರ್ನಾಟಕ ರಾಜ್ಯ ಚುನಾವಣಾ ಆಯೋಗಕ್ಕೆ ಸವಾಲಾಗಿ ಮುಂದುವರಿದಿದೆ. ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಂಡಿದ್ದರೂ ಇದೆ ಪರಿಸ್ಥಿತಿ ಭಿನ್ನವಾಗಿಲ್ಲ.

ಭಾರತೀಯ ಚುನಾವಣಾ ಆಯೋಗವು ನಮಗೆ ಇನ್ನೂ ದತ್ತಾಂಶವನ್ನು ನೀಡಿಲ್ಲ. ಅದನ್ನು ವಾರ್ಡ್‌ವಾರು ವಿಂಗಡಿಸಬೇಕಾಗುತ್ತದೆ. ದತ್ತಾಂಶ ಪಡೆಯುವಲ್ಲಿನ ವಿಳಂಬವು ಮುಂದಿನ ಕಾರ್ಯಕ್ರಮಗಳ ಮೇಲೆ ಪರಿಣಾಮ ಬೀರುತ್ತದೆ. ಸುಪ್ರೀಂ ಕೋರ್ಟ್ ಆದೇಶದಂತೆ, 2026ರ ಡಿಸೆಂಬರ್ ಅಂತ್ಯದೊಳಗೆ ನಗರ ಪಾಲಿಕೆ ಚುನಾವಣೆಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವುದು ಕಷ್ಟಕರವಾಗಬಹುದು ಎಂದು ರಾಜ್ಯ ಚುನಾವಣಾ ಆಯೋಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಗರ ಪಾಲಿಕೆ ಚುನಾವಣೆಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮುಂದೆ ಸಲ್ಲಿಸಲು, ಈಗಾಗಲೇ ನಡೆದಿರುವ ಘಟನೆಗಳು ಮತ್ತು ಮುಂದಿನ ದಿನಗಳಲ್ಲಿ ನಡೆಯಲಿರುವ ಕಾರ್ಯಕ್ರಮಗಳ ವಿವರವಾದ ಕಾಲಾನುಕ್ರಮಣಿಕೆಯನ್ನು ಸಿದ್ಧಪಡಿಸುತ್ತಿರುವುದಾಗಿ ಇತರ ಅಧಿಕಾರಿಗಳು ತಿಳಿಸಿದ್ದಾರೆ.

ಒಂದು ವೇಳೆ ಮುಂದಿನ ಒಂದೆರಡು ದಿನಗಳಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ದತ್ತಾಂಶ ಸಿಗದಿದ್ದರೆ, ನಾವು ಈ ಸಂಗತಿಗಳನ್ನು ನ್ಯಾಯಾಲಯಗಳ ಮುಂದಿಟ್ಟು ಹೆಚ್ಚಿನ ಸಮಯಾವಕಾಶ ಕೋರುತ್ತೇವೆ. ಆ ನಂತರ ಚುನಾವಣೆ ನಡೆಸುವುದು ಒಂದು ಸವಾಲಾಗಲಿದೆ ಎಂದು ಆ ಅಧಿಕಾರಿ ಹೇಳಿದರು.

ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ನಂತರ ಅಕ್ಟೋಬರ್ 27ರಂದು ಪ್ರಕಟಿಸಲಾದ ಅಂತಿಮ ಮತದಾರರ ಪಟ್ಟಿಯಲ್ಲಿ, 99,32,303 ಮತದಾರರ ಹೆಸರುಗಳನ್ನು ಪರಿಷ್ಕರಿಸಿ (ಸರಿಪಡಿಸಿ/ತೆಗೆದುಹಾಕಿ) ಪಟ್ಟಿ ಸಿದ್ಧಪಡಿಸಲಾಗಿದೆ. ಜೂನ್ 16ರವರೆಗೆ ರಾಜ್ಯದಲ್ಲಿ 5,54,32,314 ಮತದಾರರಿದ್ದರು; ಆದರೆ ಪರಿಷ್ಕೃತ ಪಟ್ಟಿಯಲ್ಲಿ ಈಗ 4,55,00,011 ಮತದಾರರಿದ್ದಾರೆ.

ಒಟ್ಟಾರೆಯಾಗಿ, ಮತದಾರರ ಪಟ್ಟಿಯಿಂದ 44,80,212 ಹೆಸರುಗಳನ್ನು ತೆಗೆದುಹಾಕಲಾಗಿದೆ. ದತ್ತಾಂಶದ ಪ್ರಕಾರ, ಬೆಂಗಳೂರಿನ ಜನಸಂಖ್ಯೆ 1,07,08,716 ಆಗಿದ್ದು, ಅದರಲ್ಲಿ 59,09,775 ಮಂದಿ ಮತದಾರರಿದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 24,01,939 ಮತದಾರರಿದ್ದರೆ, ಬಿಬಿಎಂಪಿ ಉತ್ತರ ವಲಯದಲ್ಲಿ 13,25,284, ಕೇಂದ್ರ ವಲಯದಲ್ಲಿ 10,67,374 ಮತ್ತು ದಕ್ಷಿಣ ವಲಯದಲ್ಲಿ 11,13,554 ಮತದಾರರಿದ್ದಾರೆ.

ಅಂತಿಮ ಮತದಾರರ ಪಟ್ಟಿಗಳನ್ನು ಸಾರ್ವಜನಿಕಗೊಳಿಸಲಾಗಿದೆ, ಆದರೆ ನಮಗೆ ಇನ್ನೂ ಸಂಪೂರ್ಣ ಮಾಹಿತಿ ಸಿಕ್ಕಿಲ್ಲ. ಈ ಮಾಹಿತಿಯನ್ನು ಕೋರಿ ನಾವು ಇಸಿಐಗೆ ಪತ್ರ ಬರೆದಿದ್ದೇವೆ. ಮಾಹಿತಿ ನಮಗೆ ಲಭ್ಯವಾದ ನಂತರ, ಅದು ಯಾವ ಸ್ವರೂಪದಲ್ಲಿದೆ (ಅಂದರೆ ಕಚ್ಚಾ ದತ್ತಾಂಶವೇ ಅಥವಾ ವಿಧಾನಸಭಾ ಕ್ಷೇತ್ರವಾರು ವಿಂಗಡಿಸಲಾದ ದತ್ತಾಂಶವೇ) ಎಂಬುದನ್ನು ಆಧರಿಸಿ, ವಾರ್ಡ್‌ವಾರು ವಿಂಗಡಣೆಗಾಗಿ ಅದನ್ನು ನಮ್ಮ ಸಾಫ್ಟ್‌ವೇರ್ ಮೂಲಕ ಸಂಸ್ಕರಿಸಬೇಕಾಗುತ್ತದೆ.

ಈ ಪ್ರಕ್ರಿಯೆಗಾಗಿ ಹಾಲಿ ಇರುವ ಮತದಾರರ ನೋಂದಣಿ ಅಧಿಕಾರಿಗಳನ್ನು ನಿಯೋಜಿಸಲಾಗುವುದು. ಇದಕ್ಕೆ ಕನಿಷ್ಠ 30 ದಿನಗಳು ಬೇಕಾಗುತ್ತವೆ ಮತ್ತು ನಂತರ ಪರಿಶೀಲನೆಗಾಗಿ ಹೆಚ್ಚುವರಿಯಾಗಿ ಐದು ದಿನಗಳ ಅಗತ್ಯವಿರುತ್ತದೆ ಎಂದು ಎಸ್‌ಇಸಿ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ಚುನಾವಣೆ ಘೋಷಣೆಯಾದರೆ, ಸರ್ಕಾರದ ಕಾರ್ಯನಿರ್ವಹಣೆಗೆ ಅಡಚಣೆ

"ಎಸ್‌ಐಆರ್ (SIR) ಪ್ರಕ್ರಿಯೆಗಿಂತ ಭಿನ್ನವಾಗಿ, ಇಲ್ಲಿ ಕರಡು ಮತದಾರರ ಪಟ್ಟಿ ಅಥವಾ ಅಂತಿಮ ಮತದಾರರ ಪಟ್ಟಿ ಎಂದು ಪ್ರತ್ಯೇಕವಾಗಿ ಪ್ರಕಟಿಸುವುದಿಲ್ಲ. ಸಮಯದ ಅಭಾವವಿರುವುದರಿಂದ, ವಾರ್ಡ್‌ವಾರು ವಿಂಗಡಣೆಯನ್ನು ಒಳಗೊಂಡ ಒಂದೇ ಒಂದು ಅಂತಿಮ ಮತದಾರರ ಪಟ್ಟಿಯನ್ನು ಮಾತ್ರ ಪ್ರಕಟಿಸಲಾಗುವುದು," ಎಂದು ಅಧಿಕಾರಿ ತಿಳಿಸಿದರು.

ಆದರೆ, ಇಸಿಐ (ECI) ದತ್ತಾಂಶವು ಆದಷ್ಟು ಬೇಗ ಸಿಗದಿದ್ದರೆ, ಬೇರೆ ಸಮಸ್ಯೆಗಳು ಉದ್ಭವಿಸುತ್ತವೆ. ಬೆಂಗಳೂರಿಗೆ ಚುನಾವಣೆ ಘೋಷಣೆಯಾದ ಕೂಡಲೇ, ರಾಜ್ಯ ಸರ್ಕಾರದ ಸಾಮಾನ್ಯ ಕಾರ್ಯನಿರ್ವಹಣೆಯು ಸ್ಥಗಿತಗೊಳ್ಳುತ್ತದೆ. ಚುನಾವಣಾ ದಿನಾಂಕಗಳನ್ನು ಘೋಷಿಸಲು ರಾಜ್ಯ ಸರ್ಕಾರದ ಅನುಮತಿಯಷ್ಟೇ ಅಲ್ಲದೆ, ಅಬಕಾರಿ ಇಲಾಖೆಯ ಅನುಮತಿಯೂ ಬೇಕಾಗುತ್ತದೆ, ಏಕೆಂದರೆ ಡಿಸೆಂಬರ್ ತಿಂಗಳು ವ್ಯಾಪಾರ ವಹಿವಾಟು ಗರಿಷ್ಠ ಮಟ್ಟದಲ್ಲಿರುವ ಸಮಯವಾಗಿರುತ್ತದೆ. ವರ್ಷಾಂತ್ಯದ ದಟ್ಟಣೆ ಇರುವುದರಿಂದ ಪೊಲೀಸ್ ಇಲಾಖೆಯ ಅನುಮತಿಯೂ ಅಗತ್ಯವಿರುತ್ತದೆ ಎಂದಿದ್ದಾರೆ.

ಜನವರಿ ಮತ್ತು ಫೆಬ್ರವರಿಯಲ್ಲಿ ಚುನಾವಣೆ ನಡೆಸುವುದು ಕಷ್ಟಕರವಾಗಬಹುದು, ಏಕೆಂದರೆ ಆ ಸಮಯದಲ್ಲಿ ಅಖಿಲ ಭಾರತ ಜನಗಣತಿ ನಡೆಯುವ ಸಾಧ್ಯತೆಯಿದೆ. ಮಾರ್ಚ್ ತಿಂಗಳು ಪರೀಕ್ಷಾ ಅವಧಿಯಾಗಿರುವುದರಿಂದ, ಶಿಕ್ಷಕರಿಗೆ ಯಾವುದೇ ರೀತಿಯ ತೊಂದರೆ ಉಂಟುಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನಾನು ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ, ಒಂದು ವೇಳೆ ...': ಮಧ್ಯಂತರ ಚುನಾವಣೆ ಫಲಿತಾಂಶ ಬಗ್ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯೆ ಏನು?

US Midterm Polls: ಗವರ್ನರ್ ಚುನಾವಣೆಯಲ್ಲಿ ಭಾರತೀಯ ಮೂಲದ ವಿವೇಕ್ ರಾಮಸ್ವಾಮಿಗೆ ಸೋಲು, ಇತಿಹಾಸ ನಿರ್ಮಿಸಿದ ಆಮಿ!

AC ಇಲ್ಲ, GPS ಇಲ್ಲ, ಆದರೂ ಛಲ ಬಿಡಲಿಲ್ಲ; -14°C ಚಳಿಯಲ್ಲೂ 2001ರ ಮಾರುತಿ 800 ಓಡಾಟ; 11 ರಾಜ್ಯಗಳ ದಾಟಿ ಲಡಾಖ್ ತಲುಪಿದ ಕರಾವಳಿ ಯುವಕರು..!

ಅಮೆರಿಕ ಮಧ್ಯಂತರ ಚುನಾವಣೆ: ಡೆಮೋಕ್ರಾಟ್ ಪಕ್ಷ ಮುನ್ನಡೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಹಿನ್ನಡೆ

ಸೋತ ಅಭ್ಯರ್ಥಿಗಳಿಗೆ ಸಾರ್ವಜನಿಕ ಹುದ್ದೆ 'ಸಾಂತ್ವನ ಬಹುಮಾನ'ವಲ್ಲ; ಸರ್ಕಾರದ ಹಿಂಬಾಗಿಲ ನೇಮಕಕ್ಕೆ ಹೈಕೋರ್ಟ್ ತಡೆ..!