ಬೆಂಗಳೂರು: ಬಿಜೆಪಿ ಆಯೋಜಿಸಿದ್ದ ಪ್ರತಿಭಟನಾ ರ್ಯಾಲಿಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಲಾಗಿದೆ ಎಂದು ಆರೋಪಿಸಿ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. "ಬಿಜೆಪಿಯಂತಹ ರಾಜಕೀಯ ಪಕ್ಷ ಆಯೋಜಿಸುವ ಪ್ರತಿಭಟನೆಯಲ್ಲಿ ಕಾರ್ಯಕರ್ತರು ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗುವುದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ" ಎಂದು ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರು ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಏನಿದು ಘಟನೆ?
ಡಿಸೆಂಬರ್ 18, 2022 ರಂದು ಮಂಡ್ಯದಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವರ ಆಕ್ಷೇಪಾರ್ಹ ಹೇಳಿಕೆಯೊಂದರ ವಿರುದ್ಧ ಬಿಜೆಪಿ ಬೆಂಬಲಿಗರು ಮತ್ತು ಕಾರ್ಯಕರ್ತರು ಪ್ರತಿಭಟನೆ ಹಮ್ಮಿಕೊಂಡಿದ್ದರು. ಈ ಪ್ರತಿಭಟನೆಯ ವಿಡಿಯೋ ತುಣುಕನ್ನು ಯೂಟ್ಯೂಬ್‌ನಲ್ಲಿ ನೋಡಿ ಮಾನಸಿಕವಾಗಿ ನೊಂದಿದ್ದೇನೆ ಎಂದು ಆರೋಪಿಸಿ ಕಣ್ಣಂಬಾಡಿ ಕುಮಾರ್ ಎಂಬುವರು ಎರಡು ವರ್ಷಗಳ ಬಳಿಕ ಅಂದರೆ 2024 ರಲ್ಲಿ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಡಿ.ಎಸ್. ರವಿ ಕುಮಾರ್ ಎಂಬುವರ ವಿರುದ್ಧ ಐಪಿಸಿ ಸೆಕ್ಷನ್ 153B (ರಾಷ್ಟ್ರೀಯ ಭಾವೈಕ್ಯತೆಗೆ ಧಕ್ಕೆ) ಮತ್ತು 505(1)(b) (ಸಾರ್ವಜನಿಕ ಶಾಂತಿ ಕದಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇದನ್ನು ಪ್ರಶ್ನಿಸಿ ರವಿ ಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ವೇಳೆ, "ಪ್ರತಿಭಟನಾಕಾರರು ಆವೇಶದ ಭರದಲ್ಲಿ ಪಾಕಿಸ್ತಾನ್ ಮುರ್ದಾಬಾದ್ ಎಂದು ಕೂಗುವ ಬದಲು ನಾಲಿಗೆ ತಪ್ಪಿ ಪಾಕಿಸ್ತಾನ್ ಜಿಂದಾಬಾದ್ ಎಂದು ಹೇಳಿದ್ದಾರೆ. ದೇಶದ ವಿರುದ್ಧ ಘೋಷಣೆ ಕೂಗುವ ಅಥವಾ ಸಾರ್ವಜನಿಕ ಶಾಂತಿ ಕದಡುವ ಯಾವುದೇ ಉದ್ದೇಶ ಅವರಿಗಿರಲಿಲ್ಲ" ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯದಲ್ಲಿ ಸ್ಪಷ್ಟಪಡಿಸಿದ್ದರು.
ಊಹಿಸಲೂ ಸಾಧ್ಯವಿಲ್ಲದ್ದು!
ಮುಂದುವರೆದು, ಪ್ರಕರಣ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ಏಕಸದಸ್ಯ ಪೀಠವು, "ಒಂದು ರಾಜಕೀಯ ಪಕ್ಷವಾಗಿರುವ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಆಯೋಜಿಸಿದ ಪ್ರತಿಭಟನೆಯಲ್ಲಿ ಭಾಗವಹಿಸಿದವರು 'ಪಾಕಿಸ್ತಾನ್ ಜಿಂದಾಬಾದ್' ಎಂದು ಕೂಗುತ್ತಾರೆ ಎಂಬುದನ್ನು ಮೊದಲ ನೋಟದಲ್ಲೇ ಊಹಿಸಲೂ ಸಾಧ್ಯವಿಲ್ಲ" ಎಂದರು. ಜೊತೆಗೆ, ಆವೇಶದ ಭರದಲ್ಲಿ ಮುರ್ದಾಬಾದ್ ಎನ್ನುವ ಬದಲು ಜಿಂದಾಬಾದ್ ಎಂಬ ಪದ ಬಂದ್ದಿದೆ ಎಂಬ ಅರ್ಜಿದಾರರ ವಾದ ಒಪ್ಪುವಂತದ್ದಾಗಿದೆ ಎಂದ ಕೋರ್ಟ್, ಘಟನೆ ನಡೆದು 2 ವರ್ಷಗಳ ಬಳಿಕ ಕೇವಲ ವಿಡಿಯೋ ತುಣುಕನ್ನು ಆಧರಿಸಿ ದೂರು ದಾಖಲಿಸಲಾಗಿದೆ. ಈ ಘೋಷಣೆಯಿಂದ ಸಾರ್ವಜನಿಕ ವಲಯದಲ್ಲಿ ಯಾವುದೇ ಗಲಭೆ ಅಥವಾ ಅಶಾಂತಿ ಸೃಷ್ಟಿಯಾಗಿಲ್ಲ ಮತ್ತು ಅದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಗಮನಿಸಿ, ರವಿ ಕುಮಾರ್ ವಿರುದ್ಧದ ಕ್ರಿಮಿನಲ್ ನಡಾವಳಿಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ.