ಧಾರವಾಡ: ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಬೋಗೆನಾಗರಕೊಪ್ಪ ಗ್ರಾಮದ 70 ವರ್ಷದ ವೃದ್ಧೆ ಪಕ್ಕೀರಮ್ಮ ಮಗುವಿಗೆ ಜನ್ಮ ನೀಡಿದ್ದಾರೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ವಿಡಿಯೋದಲ್ಲಿ ವೃದ್ಧೆ ಪಕ್ಕೀರಮ್ಮ ನನಗೆ ಮಗುವನ್ನು ದೇವರು ಕೊಟ್ಟಿದ್ದಾನೆ ಎಂದು ಹೇಳಿದ್ದಾರೆ. ಅಲ್ಲದೆ ಕೆಲ ಮಹಿಳೆಯರು ವದ್ಧೆಯನ್ನು ಪ್ರಶ್ನಿಸುತ್ತಿರುವುದು ಕಾಣಬಹುದು. ಆದರೆ ಈಗ ಸತ್ಯ ಬಯಲಾಗಿದ್ದು ಲೈಕ್ಸ್ ಮತ್ತು ವ್ಯೂಸ್‌ಗಾಗಿ ಮಾಡಿದ ‘ಫೇಕ್ ರೀಲ್ಸ್’ ಎಂದು ತಿಳಿದುಬಂದಿದೆ.
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ವೃದ್ಧೆ ತನ್ನ ಪಕ್ಕದಲ್ಲಿ ನವಜಾತ ಮಗುವೊಂದನ್ನು ಮಲಗಿಸಿಕೊಂಡು ಈ ವಿಡಿಯೋ ಮಾಡಿದ್ದಾರೆ. ನಾನೇ ಈ ಮಗುವಿಗೆ ಜನ್ಮ ನೀಡಿದ್ದೇನೆ. ಇದನ್ನು ನನಗೆ ಆ ದೇವರೇ ಕರುಣಿಸಿದ್ದಾನೆ ಎಂದು ವೃದ್ಧೆ ಹೇಳಿದ್ದು ಅದನ್ನು ವಿಡಿಯೋ ಮಾಡಲಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ವೈದ್ಯಕೀಯ ಲೋಕವೇ ಅಚ್ಚರಿಪಡುವಂತಹ ಘಟನೆ ಎಂದು ಜನರು ಬೆರಗಾಗಿದ್ದರು.
ಆದರೆ ಇದು ರೀಲ್ಸ್ ವಿಡಿಯೋ ಎಂದು ಗೊತ್ತಾದ ಮೇಲೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾನ್ಯವಾಗಿ ರೀಲ್ಸ್ ಹುಚ್ಚಿಗಾಗಿ ಯುವಜನತೆ ನಾನಾ ತರಹದ ವಿಡಿಯೋಗಳನ್ನು ಮಾಡುತ್ತಾರೆ. ಆದರೆ ಇಲ್ಲೊಬ್ಬ ವೃದ್ಧೆಗೂ ರೀಲ್ ಹುಚ್ಚು ಹಿಡಿದಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಕಿಡಿಕಾರಿದ್ದಾರೆ.