ಮೈಸೂರು: ನಂಜನಗೂಡು ತಾಲೂಕಿನ ಆಕಳ ಗ್ರಾಮದ ಸುತ್ತಮುತ್ತ ಡ್ರೋನ್ ಕ್ಯಾಮರಾದಲ್ಲಿ ಹುಲಿ ಮತ್ತು ಅದರ ಮೂರು ಮರಿಗಳು ಕಾಣಿಸಿಕೊಂಡಿದ್ದು, ಗ್ರಾಮಸ್ಥರ ನಿತ್ಯ ಜೀವನದಲ್ಲಿ ಆತಂಕ ಉಂಟುಮಾಡಿದೆ.
ಎರಡು ದಿನಗಳ ಹಿಂದಷ್ಟೇ ಗ್ರಾಮದ ರೈತ ಪರಮೇಶ್ ಅವರ ಮೇಲೆ ಹುಲಿ ದಾಳಿ ಮಾಡಿತ್ತು. ಗಾಯಗೊಂಡಿರುವ ರೈತ ಚಿಕಿತ್ಸೆ ಪಡೆಯುತ್ತಿದ್ದಾರೆ. ಡೋರನಕಟ್ಟೆ ಕಾಲೋನಿಯಲ್ಲಿ ಆದಿವಾಸಿ ಮಹಿಳೆಯನ್ನು ಹುಲಿ ಬಲಿ ಪಡೆದಿತ್ತು. ಈ ಘಟನೆ ಬಳಿಕ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿ, ಹುಲಿಯನ್ನು ಸೆರೆಹಿಡಿಯುವಂತೆ ಒತ್ತಾಯಿಸಿದ್ದರು.
ಇದೀಗ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ಹುಲಿ ಸೆರೆಹಿಡಿಯುವ ಕಾರ್ಯಾಚರಣೆ ಆರಂಭಿಸಲಾಗಿದೆ. ಕಾರ್ಯಾಚರಣೆಯ ಭಾಗವಾಗಿ ಡ್ರೋನ್ ಕ್ಯಾಮರಾ ಮೂಲಕ ಅರಣ್ಯ ಪ್ರದೇಶದಲ್ಲಿ ನಿಗಾ ವಹಿಸಲಾಗಿದ್ದು, ಕಳೆದ ರಾತ್ರಿ ನಾಲ್ಕು ಹುಲಿಗಳು ಕ್ಯಾಮರಾದಲ್ಲಿ ಸೆರೆಯಾಗಿವೆ.