ಹಾಸನ: ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ಹಾಗೂ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ವಿರುದ್ಧ ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಮಾಡಿರುವ ಲಂಚದ ಆರೋಪ ರಾಜ್ಯ ರಾಜಕಾರಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಈ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಶಿವಲಿಂಗೇಗೌಡ, ಹಾಸನಾಂಬೆ ಪಾದದಾಣೆಗೂ ಒಂದೇ ಒಂದು ಪೈಸೆ ಲೋಪ ಮಾಡಿಲ್ಲ, ಮಾಡಲು ಬಿಡುವುದಿಲ್ಲ ಎಂದು ಖಡಕ್ ಉತ್ತರ ನೀಡಿದ್ದಾರೆ.
ಹಾಸನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ಮೊಸರಲ್ಲಿ ಕಲ್ಲು ಹುಡುಕುವ ಬುದ್ದಿಯನ್ನು ಇನ್ನೂ ಬಿಡಲಿಲ್ಲ. ಮೊಸರಲ್ಲಿ ಕಲ್ಲು ಹುಡುಕುವ ಬುದ್ದಿ ಬಿಡಬೇಕು. ಹಾಸನಾಂಬ ಜಾತ್ರಾ ಮಹೋತ್ಸವದಲ್ಲಿ ಒಂದೇ ಒಂದು ಪೈಸೆ ಲೋಪ ಮಾಡಲು ನಾನು ಬಿಡುವುದಿಲ್ಲ. ಆ ರೀತಿಯ ಆಡಳಿತ ನಡೆಯುತ್ತಿದೆ. ಅದರ ಬಗ್ಗೆ ಪ್ರತ್ಯಕ್ಷ ಸಾಕ್ಷಿಗಳ ಮೂಲಕ ಹೇಳುತ್ತೇನೆ. ಇಂತಹ ಧಾರ್ಮಿಕ ಸಮಾರಂಭದಲ್ಲಿ ಕೀಳುಮಟ್ಟದ ರಾಜಕೀಯ ಮಾಡಬೇಡಿ. ಕೀಳುಮಟ್ಟದ ರಾಜಕಾರಣ ನಿಲ್ಲಿಸಿ ಎಂದು ಕಿಡಿಕಾರಿದ್ದಾರೆ.
20 ದಿವಸ ಆಯ್ತು ನಾನು ನನ್ನ ಮನೆಯಲ್ಲಿ ಮಲಗಿ, ಇದೇ ಹಾಸನದಲ್ಲಿ ನಿದ್ರೆ ಇಲ್ಲಿದೆ ಹಗಲು-ರಾತ್ರಿ ಕೆಲಸ ಮಾಡುತ್ತಿದ್ದೇನೆ. ನನಗೆ ಒಂದು ಜವಾಬ್ದಾರಿಯನ್ನು ನಮ್ಮ ಮುಖ್ಯಮಂತ್ರಿಗಳು ವಹಿಸಿದ್ದಾರೆ. ಅವರಿಗೆ ಹೆಸರು ಬರುವ ರೀತಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಸಂಸದರ ಜೊತೆ ಹಗಲು-ರಾತ್ರಿ ಕೆಲಸ ಮಾಡಿದ್ದೇವೆ ಎಂದು ಹೇಳಿದರು.
ನೀವು ಬಂದು ಹಾಸನಾಂಬ ದೇವಿ ದರ್ಶನ ಪಡೆದು ಅದು ಹೇಗೆ ನುಡಿದಿರಿ ಗೊತ್ತಿಲ್ಲ. ಆ ತಾಯಿಯ ಪಾದದ ಮೇಲೆ ಆಣೆ ಮಾಡಲು ತಯಾರಿದ್ದೇನೆ. ಭ್ರಷ್ಟಾಚಾರದ ಆರೋಪ ಮಾಡೋದು ಬೇಕಾದಷ್ಟು ಇದೆ. ಇದೆಲ್ಲ ಬೇಡ, ನನಗೆ ನೋವಾಗಿ ಹೇಳುತ್ತಿದ್ದೇನೆ ಎಂದು ಬೇಸರ ಹೊರಹಾಕಿದ್ದಾರೆ.
ಇದಕ್ಕೂ ಮುನ್ನ ಶಾಸಕ ಸ್ವರೂಪ ಪ್ರಕಾಶ್ ಅವರ ಮನೆಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರು, ಮಧ್ಯವರ್ತಿಗಳ ಮೂಲಕ ಜಿಲ್ಲಾಧಿಕಾರಿ ಕಚೇರಿಯೇ ನೇರವಾಗಿ ಕ್ರಷರ್ ಮಾಲೀಕರು ಹಾಗೂ ವಸತಿ ಬಡಾವಣೆಗಳ ಮಾಲೀಕರಿಂದ ಹಣ ಸುಲಿಗೆ ಮಾಡುತ್ತಿರುವ ದಾಖಲೆಗಳನ್ನು ಬಿಡುಗಡೆ ಮಾಡಿದರು.ಜಿಲ್ಲಾಧಿಕಾರಿ ಲತಾಕುಮಾರಿ ಅವರ ಆಪ್ತ ಸಹಾಯಕ ಶಶಿಕಿರಣ್ ಎಂಬ ವ್ಯಕ್ತಿ ಹಣವನ್ನು ಸುಲಿಗೆ ಮಾಡಿ ಜಿಲ್ಲಾಧಿಕಾರಿಗಳಿಗೆ ಕೊಡುತ್ತಿದ್ದಾರೆ ಎನ್ನಲಾದ ಅಂಶವು ಆ ವ್ಯಕ್ತಿಯ ವಾಟ್ಸಾಪ್ ಚಾಟ್ ಗಳ ಮೂಲಕ ಬಯಲಿಗೆ ಬಂದಿದೆ ಎಂದು ಸಚಿವರು ಹೇಳಿದ್ದರು.
ಅಲ್ಲದೆ ಈ ಸಂದರ್ಭದಲ್ಲಿ ಶಶಿಕಿರಣ್ ಅವರ ವಾಟ್ಸಾಪ್ ಚಾಟ್ ದಾಖಲೆಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದರು.