ಬೆಂಗಳೂರು: ಕರ್ನಾಟಕ ಹೈಕೋರ್ಟ್ ಸರ್ಕಾರದ ಉಚಿತ ಯೋಜನೆಗಳು ಹಾಗೂ ದಿನಬಳಕೆ ವಸ್ತುಗಳ ಬೆಲೆ ಏರಿಕೆಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಪ್ರಕರಣವೊಂದರ ವಿಚಾರಣೆ ನಡೆಸುವ ಸಂದರ್ಭದಲ್ಲಿ ನ್ಯಾಯಪೀಠವು, "ಸರ್ಕಾರದ ಯೋಜನೆಗಳು ಉಚಿತವಾದರೆ, ಅಗತ್ಯ ವಸ್ತುಗಳ ದರ ಹೆಚ್ಚುವುದು ಸಹ ಖಚಿತ. ಹೀಗೆ ಪ್ರತಿಯೊಂದರ ಬೆಲೆಯನ್ನೂ ಹೆಚ್ಚಿಸುತ್ತಾ ಹೋದರೆ ಸಾಮಾನ್ಯ ಜನ ಜೀವನ ಸಾಗಿಸುವುದಾದರೂ ಹೇಗೆ? ಮನುಷ್ಯ ಎಲ್ಲಿಗೆ ಹೋಗಬೇಕು?" ಎಂದು ಕಳವಳದೊಂದಿಗೆ ತರಾಟೆಗೆ ತೆಗೆದುಕೊಂಡಿದೆ. ಆ ಕುರಿತ ವರದಿ ಇಲ್ಲಿದೆ:
ಏನಿದು ಪ್ರಕರಣ?
ಅನ್ನಭಾಗ್ಯ ಯೋಜನೆಯಡಿ ಮೈಸೂರಿನ ಸರ್ಕಾರಿ ಉಗ್ರಾಣವೊಂದರಲ್ಲಿ ಸಂಗ್ರಹಿಸಿಡಲಾಗಿದ್ದ ಆಹಾರ ಧಾನ್ಯಗಳಲ್ಲಿ ಸುಮಾರು 320 ಕ್ವಿಂಟಲ್ ಅಕ್ಕಿ ಮತ್ತು 85 ಕ್ವಿಂಟಲ್ ಗೋಧಿ ಕೊರತೆ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ನಿಯಂತ್ರಣ ಕಾಯ್ದೆಯಡಿ ತಮ್ಮ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಉಗ್ರಾಣದ ಹಿರಿಯ ವ್ಯವಸ್ಥಾಪಕರೊಬ್ಬರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸುವಾಗ ನ್ಯಾಯಪೀಠವು ಸರ್ಕಾರದ ನೀತಿಗಳ ವಿರುದ್ಧ ಮೌಖಿಕವಾಗಿ ಆಕ್ರೋಶ ಹೊರಹಾಕಿತು.
Online Desk
ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಹೈಕೋರ್ಟ್ ಆಕ್ಷೇಪ
ಜನಸಾಮಾನ್ಯರು ಎದುರಿಸುತ್ತಿರುವ ಆರ್ಥಿಕ ಸಂಕಷ್ಟವನ್ನು ಉದಾಹರಣೆ ಸಹಿತ ವಿವರಿಸಿದ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರು, "ಕಳೆದ ತಿಂಗಳು ತುಪ್ಪ ತರಲು ಹೋದಾಗ ಪ್ರತಿ ಕೆ.ಜಿ.ಗೆ 650 ರೂಪಾಯಿ ಇತ್ತು. ಆದರೆ ಈಗ ಅದು ಬರೋಬ್ಬರಿ 850 ರೂಪಾಯಿ ಆಗಿದೆ. ಇಷ್ಟೊಂದು ದರ ಹೆಚ್ಚಾದರೆ ದೀಪಾವಳಿಗೆ ತುಪ್ಪದ ದೀಪ ಹಚ್ಚುವುದು ಹೇಗೆ? ಯಮದೀಪ ಹಚ್ಚುವ ಬದಲು ನನ್ನನ್ನೇ ಕರೆದುಕೊಂಡು ಹೋಗು ಎಂದು ಯಮನನ್ನೇ ಕೇಳಬೇಕಷ್ಟೇ!" ಎಂದು ಮಾರ್ಮಿಕವಾಗಿ ನುಡಿದರು.
ದೀಪಾವಳಿ ನಂತರ ಸಕ್ಕರೆ ಬೆಲೆ ಪ್ರತಿ ಕೆ.ಜಿ.ಗೆ 90 ರೂಪಾಯಿ!
ಇದರೊಂದಿಗೆ, ಮಾರುಕಟ್ಟೆಯಲ್ಲಿ ಸದ್ಯ ಉತ್ತಮ ಅಕ್ಕಿಯ ದರ ಕೆ.ಜಿ.ಗೆ 103 ರೂಪಾಯಿ ತಲುಪಿದೆ. ಇತ್ತ ಸರ್ಕಾರ ಕಬ್ಬಿಗೆ ತಲಾ 3,000 ರೂ.ಗಳಿಗೂ ಅಧಿಕ ಬೆಂಬಲ ಬೆಲೆ ಘೋಷಿಸಿದೆ. ಈ ಹೆಚ್ಚುವರಿ ಹಣವನ್ನು ಸರ್ಕಾರ ತನ್ನ ಜೇಬಿನಿಂದ ಕೊಡಲ್ಲ, ಜನರ ತೆರಿಗೆ ಹಣದಿಂದಲೇ ಕೊಡುತ್ತದೆ. ನೋಡುತ್ತಾ ಇರಿ, ದೀಪಾವಳಿ ಮುಗಿದ ಮೇಲೆ ಸಕ್ಕರೆ ಬೆಲೆ ಪ್ರತಿ ಕೆ.ಜಿ.ಗೆ 90 ರೂಪಾಯಿ ತಲುಪುತ್ತದೆ ಎಂದು ಎಚ್ಚರಿಸಿದರು.
ಮನುಷ್ಯ ಎಲ್ಲಿಗೆ ಹೋಗಬೇಕು?
ಮುಂದುವರೆದು, "ಒಂದೆಡೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ, ಮತ್ತೊಂದೆಡೆ ದಿನಸಿ ತರಲು ಬಸ್ನಲ್ಲಿ ಹೋದರೆ ಬಸ್ ಟಿಕೆಟ್ ದರವನ್ನೂ ಜಾಸ್ತಿ ಮಾಡಲಾಗಿದೆ. ಹೀಗೆ ಎಲ್ಲವನ್ನೂ ಹೆಚ್ಚಿಸುತ್ತಾ ಹೋದರೆ ಮನುಷ್ಯ ಎಲ್ಲಿಗೆ ಹೋಗಬೇಕು? ಸಾಮಾನ್ಯ ಜನ ಜೀವನ ಸಾಗಿಸುವುದಾದರೂ ಹೇಗೆ?" ಎಂದು ಪ್ರಶ್ನಿಸಿದರು.
ಹಳೇ ಮಾಲು, ಹೊಸ ಬಿಲ್ಲು!
ಸರ್ಕಾರದ ಉಗ್ರಾಣಗಳಲ್ಲಿ ನಡೆಯುವ ಅಕ್ರಮಗಳ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ ಕೋರ್ಟ್, "ಯಾವುದೇ ವಸ್ತುವಿನ ಬೆಲೆ ಹೆಚ್ಚಾದ ತಕ್ಷಣ ಉಗ್ರಾಣದಲ್ಲಿ ಮೊದಲೇ ದಾಸ್ತಾನು ಮಾಡಲಾದ ಹಳೆಯ ಸರಕುಗಳ ಮೇಲೂ ಹೊಸ ದರ ಮುದ್ರಿಸಿ ಸರಬರಾಜು ಮಾಡಲಾಗುತ್ತದೆ. ಇದು 'ಹಳೇ ಕಲ್ಲು, ಹೊಸ ಬಿಲ್ಲು' ಅಥವಾ 'ಹಳೇ ಮಾಲು, ಹೊಸ ಸೀಲು' ಎಂಬಂತಾಗಿದೆ. ಬಡ ಜನರಿಗೆ ಉಚಿತವಾಗಿ ನೀಡಬೇಕಾದ ಪದಾರ್ಥಗಳನ್ನು ಕ್ವಿಂಟಲ್ಗಟ್ಟಲೆ ಕದ್ದು, ಕಾಳಸಂತೆಯಲ್ಲಿ ಮಾರಾಟ ಮಾಡುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ" ಎಂದು ಕಠಿಣವಾಗಿ ಹೇಳಿದೆ. ಸದ್ಯ ಈ ತೀವ್ರ ಚರ್ಚೆಗೆ ಗ್ರಾಸವಾಗಿರುವ ಪ್ರಕರಣದ ಮುಂದಿನ ವಿಚಾರಣೆಯನ್ನು ಹೈಕೋರ್ಟ್ ನವೆಂಬರ್ 11 ಕ್ಕೆ ನಿಗದಿಪಡಿಸಿದೆ.