ಬೆಂಗಳೂರು: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ರಾಜಾಜಿನಗರದ ಭೀಕರ ಸರಣಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಆಘಾತಕಾರಿ ಸಂಗತಿ ಹೊರಬಿದ್ದಿದೆ.
ಪ್ರಕರಣದ ಪ್ರಮುಖ ಆರೋಪಿ, ಕ್ಯಾಬ್ ಚಾಲಕ ಇಂದುಶೇಖರ್ (52), ತಾನು ಮಾಡಿದ ಕೊಲೆಗಳನ್ನು ಮುಚ್ಚಿಹಾಕಲು ಮೃತರ ಅಪ್ರಾಪ್ತ ಮಕ್ಕಳನ್ನೇ ದಾಳವಾಗಿ ಬಳಸಿಕೊಂಡು ಸಂಬಂಧಿಕರಿಗೆ ಸುಳ್ಳು ಹೇಳಿಸಿದ್ದ ಎನ್ನಲಾದ ಆಡಿಯೋವೊಂದು ಬಹಿರಂಗವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಾಷ್ಯಂ ಸರ್ಕಲ್ ನಿವಾಸಿಯಾದ ಆರೋಪಿ ಇಂದುಶೇಖರ್ ಕ್ಯಾಬ್ ಚಾಲಕನಾಗಿದ್ದ. ಈತ ತನ್ನ ಪತ್ನಿ ಸೇರಿದಂತೆ ಆಕೆಯ ಕುಟುಂಬದ ಆರು ಮಂದಿ ಹಾಗೂ ಏಳು ವರ್ಷದ ಬಾಲಕನನ್ನು 15 ದಿನಗಳ ಅವಧಿಯಲ್ಲಿ ರುಬ್ಬುವ ಕಲ್ಲಿನಿಂದ ಹೊಡೆದು ಕೊಂದಿದ್ದ ಎನ್ನಲಾಗಿದೆ. ಬಳಿಕ ಮೃತದೇಹಗಳನ್ನು ಕರ್ನಾಟಕ ಮತ್ತು ತಮಿಳುನಾಡಿನ ವಿವಿಧ ಸ್ಥಳಗಳಲ್ಲಿ ಎಸೆದಿದ್ದ ಎಂದು ಆರೋಪಿಸಲಾಗಿದೆ.
ಮೃತ ನಳಿನಿ ಅವರ ಸಂಬಂಧಿಕರು ಮತ್ತು ಅವರ ಪುತ್ರ ಸುರೇಶ್ (ಹೆಸರು ಬದಲಿಸಲಾಗಿದೆ) ನಡುವಿನ ಸಂಭಾಷಣೆ ಆಡಿಯೋದಲ್ಲಿದೆ.
ಪೋಷಕರ ಬಗ್ಗೆ ವಿಚಾರಿಸಲು ಸಂಬಂಧಿಕರು ಕರೆ ಮಾಡಿದಾಗ, ಅವರು ಪ್ರವಾಸಕ್ಕೆ ತೆರಳಿದ್ದು ಮೂರು ತಿಂಗಳ ಬಳಿಕವಷ್ಟೇ ವಾಪಸ್ ಬರುತ್ತಾರೆ ಎಂದು ಬಾಲಕ ಹೇಳಿದ್ದಾನೆ ಎನ್ನಲಾಗಿದೆ. ಕುಟುಂಬದ ಮತ್ತೊಬ್ಬ ಬಾಲಕ ಪುನೀತ್ ಕೂಡ ಅವರ ಜತೆಗಿದ್ದಾನೆ ಎಂದು ತಿಳಿಸಿದ್ದಾನೆ.
ಹತ್ಯೆಯ ಬಳಿಕ ಆರೋಪಿ ಇಂದುಶೇಖರ್ ಮೃತರ ಮೊಬೈಲ್‌ಗಳನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದ ಎನ್ನಲಾಗಿದೆ. ಸಂಬಂಧಿಕರು ಮೃತರಿಗೆ ಕರೆ ಮಾಡಿದಾಗ ಅನುಮಾನ ಬಾರದಂತೆ ಆತನೇ ಕರೆ ಸ್ವೀಕರಿಸಿ ಮಾತನಾಡುತ್ತಿದ್ದ ಎಂದು ತಿಳಿದುಬಂದಿದೆ.
ಶಿವಕುಮಾರ್ ಮತ್ತು ಅವರ ಪತ್ನಿ ದಿವ್ಯಾ ಅವರನ್ನು ಹತ್ಯೆ ಮಾಡಿದ ಬಳಿಕ ಅವರ ಪುತ್ರ ಪುನೀತ್‌ನನ್ನೂ ತನ್ನ ಬಳಿಯೇ ಇರಿಸಿಕೊಂಡು, ಸಂಬಂಧಿಕರ ಕರೆಗಳಿಗೆ ಉತ್ತರಿಸುವಂತೆ ಆರೋಪಿ ಮಾಡಿದ್ದ ಎನ್ನಲಾಗಿದೆ.
ಬಳಿಕ ಪುನೀತ್‌ನನ್ನೂ ಕೊಲೆ ಮಾಡಲಾಗಿದೆ. ಇದೇ ರೀತಿ ಶಂಕರ್ ಮತ್ತು ನಳಿನಿ ಅವರನ್ನು ಹತ್ಯೆ ಮಾಡಿದ ನಂತರ ಅವರ ಪುತ್ರ ಸುರೇಶ್‌ನನ್ನು ತನ್ನೊಂದಿಗೆ ಕರೆದೊಯ್ದು, ಸಂಬಂಧಿಕರೊಂದಿಗೆ ಮಾತನಾಡುವಂತೆ ಮಾಡಿ ಹತ್ಯೆಯ ವಿಚಾರ ಮುಚ್ಚಿಡಲು ಯತ್ನಿಸಿದ್ದ ಎಂದು ಮೂಲಗಳು ತಿಳಿಸಿವೆ.
ಇದೀಗ ಬಹಿರಂಗವಾಗಿರುವ ಆಡಿಯೋದಲ್ಲಿ ಸಂಬಂಧಿಯೊಬ್ಬರು ಸುರೇಶ್‌ಗೆ ಕರೆ ಮಾಡಿ, ಆತನ ತಾಯಿ ನಳಿನಿ ಅವರೊಂದಿಗೆ ಮಾತನಾಡಿಸುವಂತೆ ಕೇಳಿಕೊಳ್ಳುತ್ತಾರೆ. ಬಾಲಕನ ಅಜ್ಜಿ ತುಂಗಮ್ಮ ಅವರು ತಮ್ಮ ಮಗಳೊಂದಿಗೆ ಮಾತನಾಡಲು ಕಾತರರಾಗಿದ್ದಾರೆ. ಹೀಗಾಗಿ ತಾಯಿಯೊಂದಿಗೆ ಮಾತನಾಡಿಸಲು ವ್ಯವಸ್ಥೆ ಮಾಡುವಂತೆ ಸಂಬಂಧಿ ಮನವಿ ಮಾಡುತ್ತಾರೆ. ಆದರೆ, ಪೋಷಕರು ಪ್ರವಾಸಕ್ಕೆ ತೆರಳಿದ್ದು, ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾರೆ ಎಂದು ಬಾಲಕ ಉತ್ತರಿಸುತ್ತಾನೆ. ಅವರು ಮೂರು ತಿಂಗಳ ಬಳಿಕವಷ್ಟೇ ವಾಪಸ್ ಬರುತ್ತಾರೆ ಎಂದೂ ಹೇಳುತ್ತಾನೆ.
ಬಳಿಕ ಬಸ್ ಹತ್ತಲು ತನ್ನನ್ನು ಕರೆಯುತ್ತಿದ್ದಾರೆ ಎಂದು ಹೇಳಿ ಬಾಲಕ ಕಾಲ್ ಕಟ್ ಮಾಡುತ್ತಾನೆ. ಇದೇ ವೇಳೆ ಪುನೀತ್ ಬಗ್ಗೆ ಸಂಬಂಧಿ ವಿಚಾರಿಸಿದಾಗ, ಆತ ಕೂಡ ತಮ್ಮೊಂದಿಗೇ ಇದ್ದಾನೆ ಮತ್ತು ಎಲ್ಲರೂ ಒಟ್ಟಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾರೆ ಎಂದು ಬಾಲಕ ಹೇಳುತ್ತಾನೆ. ಈ ಸಂಭಾಷಣೆಗಳು ಸಂಬಂಧಿಕರಲ್ಲಿ ಅನುಮಾನ ಮೂಡಿಸಿವೆ.
ಸಂಬಂಧಿಕರು ಈ ಆಡಿಯೋವನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ. ಇದೀಗ ಪೊಲೀಸರು ಆಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದಾರೆ.
ತನಿಖಾಧಿಕಾರಿಯಾಗಿ ಡಿಸಿಪಿ ನೇಮಕ
ಏತನ್ಮಧ್ಯೆ ಪ್ರಕರಣದ ತನಿಖಾಧಿಕಾರಿಯಾಗಿ ಉತ್ತರ ವಿಭಾಗದ ಉಪ ಪೊಲೀಸ್ ಆಯುಕ್ತರನ್ನು (ಡಿಸಿಪಿ) ನೇಮಿಸಲಾಗಿದೆ.
ಈ ಬೆಳವಣಿಗೆಯನ್ನು ಖಚಿತಪಡಿಸಿರುವ ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಡಿಸಿಪಿಯನ್ನು ತನಿಖಾಧಿಕಾರಿಯಾಗಿ ನೇಮಿಸುವ ಮೂಲಕ ತನಿಖೆಯನ್ನು ಮತ್ತಷ್ಟು ಬಲಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಪೊಲೀಸರು ಏಳು ಮೃತದೇಹಗಳನ್ನೂ ಪತ್ತೆಹಚ್ಚಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ಹಲವು ಪ್ರಮುಖ ಸಾಕ್ಷ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಪರಿಣಾಮಕಾರಿ ವಿಚಾರಣೆ ಮತ್ತು ಶೀಘ್ರ ನ್ಯಾಯಕ್ಕಾಗಿ ವಿಶೇಷ ಸರ್ಕಾರಿ ಅಭಿಯೋಜಕರನ್ನು (ಎಸ್‌ಪಿಪಿ) ನೇಮಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ. ಪ್ರಕರಣದ ವಿಚಾರಣೆಯನ್ನು ತ್ವರಿತಗತಿ ನ್ಯಾಯಾಲಯದಲ್ಲಿ ನಡೆಸಲು ಕ್ರಮ ಕೈಗೊಳ್ಳಲಾಗುವುದು.
ಅಪರಾಧದ ಹಿಂದಿನ ಉದ್ದೇಶವನ್ನು ಸ್ಥಾಪಿಸಲು, ಬೇರೆ ಯಾರಾದರೂ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆಯೇ ಎಂಬುದನ್ನು ಪತ್ತೆಹಚ್ಚಲು ಹಾಗೂ ಕೃತ್ಯಕ್ಕೆ ಬಳಸಲಾಗಿದೆ ಎನ್ನಲಾದ ಆಯುಧಗಳು ಮತ್ತು ಇತರ ಸಾಧನಗಳನ್ನು ಗುರುತಿಸಲು ತನಿಖಾ ತಂಡವು ವೈಜ್ಞಾನಿಕ ಹಾಗೂ ಸಾಂದರ್ಭಿಕ ಸಾಕ್ಷ್ಯಗಳನ್ನು ಸಂಗ್ರಹಿಸುವತ್ತ ಗಮನಹರಿಸಿದೆ.
ಸಮಗ್ರ ಆರೋಪಪಟ್ಟಿಯನ್ನು ಸಾಧ್ಯವಾದಷ್ಟು ಬೇಗ ಸಲ್ಲಿಸಲು ಪೊಲೀಸರು ಎಲ್ಲ ಆಯಾಮಗಳಿಂದ ತನಿಖೆ ನಡೆಸಿ ಅಗತ್ಯ ಸಾಕ್ಷ್ಯಗಳನ್ನು ಕಲೆಹಾಕುತ್ತಿದ್ದಾರೆ. ತನಿಖೆ ಮುಂದುವರಿದಂತೆ ಕೊಲೆಗಳ ಹಿಂದಿನ ಉದ್ದೇಶ ಮತ್ತು ಇತರರ ಸಂಭಾವ್ಯ ಭಾಗವಹಿಸುವಿಕೆ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ತನಿಖೆ ಪೂರ್ಣಗೊಳ್ಳುವವರೆಗೆ ಅಗತ್ಯವಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಆಡಳಿತಾತ್ಮಕ ಕರ್ತವ್ಯಗಳಿಂದ ದೂರವಿಡಬೇಕು ಎಂದೂ ಒತ್ತಾಯಿಸಿದೆ.