ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ (KKRTC) ನಿರ್ದೇಶಕರಾಗಿ ಉಚ್ಚಾಟಿತ ಕಾಂಗ್ರೆಸ್ ಮುಖಂಡ ಲಿಂಗರಾಜ್ ಕಣ್ಣಿ ನೇಮಕಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಲಿಂಗರಾಜ್ ಕಣ್ಣಿ ಡ್ರಗ್ಸ್ ಸರಬರಾಜು ಪ್ರಕರಣದ ಆರೋಪಿಯಾಗಿದ್ದು ಇದೇ ಕಾರಣಕ್ಕೆ ಕಾಂಗ್ರೆಸ್ ಪಕ್ಷದಿಂದ ಲಿಂಗರಾಜ್ ಕಣ್ಣಿಯನ್ನು ಉಚ್ಛಾಟಿಸಿತ್ತು.
ಕಲಬುರಗಿ ದಕ್ಷಿಣ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾಗಿದ್ದಾಗ ಲಿಂಗರಾಜ್ ಕಣ್ಣಿ ನಿಷೇಧಿತ ಡ್ರಗ್ಸ್ ಸಮೇತ ಸಿಕ್ಕಿಬಿದ್ದಿದ್ದರು. ಕಣ್ಣಿ ಉಳಿದುಕೊಂಡಿದ್ದ ಲಾಡ್ಜ್‌ನಲ್ಲಿ 120 ಬಾಟಲ್ ಡ್ರಗ್ಸ್ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಪೊಲೀಸರು NDPS, ಡ್ರಗ್ಸ್ ಮತ್ತು ಕಾಸ್ಮೆಟಿಕ್ ಆ್ಯಕ್ಟ್‌ನಡಿ 2025ರ ಜೂ.22ರಂದು ಬಂಧಿಸಿದ್ದರು.
ಅಲ್ಲದೆ ಮಾದಕ ದ್ರವ್ಯ ಮತ್ತು ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಕಲ್ಯಾಣ್ ಪೊಲೀಸ್ ಠಾಣೆಯಲ್ಲಿ ಕಣ್ಣಿ ವಿರುದ್ಧ ಪ್ರಕರಣ ದಾಖಲಾಗಿತ್ತು. 2025ರ ಜುಲೈನಲ್ಲಿ ಮಾದಕ ದ್ರವ್ಯ ಪ್ರಕರಣ ಬೆಳಕಿಗೆ ಬಂದ ತಕ್ಷಣ, ಜಿಲ್ಲಾ ಕಾಂಗ್ರೆಸ್ ಸಮಿತಿಯು ಕಣ್ಣಿಯನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಿತ್ತು.