ಗ್ರೇಟರ್ ಬೆಂಗಳೂರು ಪ್ರಾಧಿಕಾರ  
ರಾಜ್ಯ

GBA Polls: ಹಳೆ ಮತದಾರರ ಪಟ್ಟಿಗೆ ರಾಜ್ಯ ಚುನಾವಣಾ ಆಯೋಗ ಒಲವು; ಸುಪ್ರೀಂ ಕೋರ್ಟ್​ಗೆ ಮನವಿ

ಎಸ್‌ಐಆರ್ ಬಳಿಕದ ಸಂಪೂರ್ಣ ಮತದಾರರ ಮಾಹಿತಿ ಇನ್ನೂ ಲಭ್ಯವಾಗದಿರುವ ಹಿನ್ನೆಲೆಯಲ್ಲಿ, 2026ರ ಏಪ್ರಿಲ್ 18ರಂದು ಪ್ರಕಟವಾದ ಅಂತಿಮ ಮತದಾರರ ಪಟ್ಟಿಯ ಆಧಾರದಲ್ಲಿ ಚುನಾವಣೆ ನಡೆಸಲು ಅವಕಾಶ ನೀಡುವಂತೆ ಆಯೋಗವು ಸುಪ್ರೀಂ ಕೋರ್ಟ್‌ಗೆ ಗುರುವಾರ ಅರ್ಜಿ ಸಲ್ಲಿಸಿದೆ.

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಚುನಾವಣೆ ನಡೆಸಲು ಎಸ್​ಐಆರ್​ಗೂ ಮೊದಲಿನ ಹಳೆಯ ಮತದಾರರ ಪಟ್ಟಿಯನ್ನೇ ಬಳಸಲು ಅನುಮತಿ ನೀಡುವಂತೆ ಕರ್ನಾಟಕ ರಾಜ್ಯ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.

ಎಸ್‌ಐಆರ್ ಬಳಿಕದ ಸಂಪೂರ್ಣ ಮತದಾರರ ಮಾಹಿತಿ ಇನ್ನೂ ಲಭ್ಯವಾಗದಿರುವ ಹಿನ್ನೆಲೆಯಲ್ಲಿ, 2026ರ ಏಪ್ರಿಲ್ 18ರಂದು ಪ್ರಕಟವಾದ ಅಂತಿಮ ಮತದಾರರ ಪಟ್ಟಿಯ ಆಧಾರದಲ್ಲಿ ಚುನಾವಣೆ ನಡೆಸಲು ಅವಕಾಶ ನೀಡುವಂತೆ ಆಯೋಗವು ಸುಪ್ರೀಂ ಕೋರ್ಟ್‌ಗೆ ಗುರುವಾರ ಅರ್ಜಿ ಸಲ್ಲಿಸಿದೆ.

ಕೇಂದ್ರ ಚುನಾವಣಾ ಆಯೋಗದಿಂದ (ಇಸಿಐ) ಎಸ್‌ಐಆರ್ ಪ್ರಕ್ರಿಯೆಯ ನಂತರದ ಪರಿಷ್ಕೃತ ಮತದಾರರ ದತ್ತಾಂಶವನ್ನು ಪಡೆಯುವಲ್ಲಿ ಉಂಟಾಗಿರುವ ತೀವ್ರ ವಿಳಂಬವೇ ಈ ಅನಿರೀಕ್ಷಿತ ಬೆಳವಣಿಗೆಗೆ ಪ್ರಮುಖ ಕಾರಣವಾಗಿದೆ.

ಅಗತ್ಯ ದತ್ತಾಂಶವನ್ನು ಒದಗಿಸುವಂತೆ ಕೋರಿ ಇಸಿಐಗೆ ರಾಜ್ಯ ಚುನಾವಣಾ ಆಯೋಗವು ಹತ್ತು ಹಲವು ಪತ್ರಗಳನ್ನು ಬರೆದಿದೆ. ಜೊತೆಗೆ ಖುದ್ದಾಗಿ ಭೇಟಿ ಮಾಡಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಯೋಗವು ತನ್ನ ಅರ್ಜಿಯಲ್ಲಿ ತೀವ್ರ ಅಸಹಾಯಕತೆ ವ್ಯಕ್ತಪಡಿಸಿದೆ.

ಹೊಸ ಮತ್ತು ನಿಖರ ದತ್ತಾಂಶದ ಕೊರತೆಯ ಹಿನ್ನೆಲೆಯಲ್ಲಿ, ಅನಿವಾರ್ಯವಾಗಿ ಹಿಂದಿನ ವಾರ್ಡ್‌ವಾರು ಮತದಾರರ ಪಟ್ಟಿಗಳ ಆಧಾರದ ಮೇಲೆಯೇ ಜಿಬಿಎ ಚುನಾವಣಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಆಯೋಗ ತೀರ್ಮಾನಿಸಿದೆ. ಇದಕ್ಕಾಗಿ 2027ರ ಜನವರಿ 31ರವರೆಗೆ ಗಡುವು ವಿಸ್ತರಿಸುವಂತೆಯೂ ಅದು ಸುಪ್ರೀಂ ಕೋರ್ಟ್ ಅನ್ನು ಕೋರಿದೆ.

ಹಳೆಯ ಪಟ್ಟಿಗೆ ನ್ಯಾಯಾಲಯದಿಂದ ಒಪ್ಪಿಗೆ ಸಿಕ್ಕರೆ, ಜನವರಿ 31ರೊಳಗೆ ಐದೂ ಪಾಲಿಕೆಗಳ ಸಂಪೂರ್ಣ ಚುನಾವಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ತಕ್ಷಣವೇ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಆಯೋಗ ಭರವಸೆ ನೀಡಿದೆ.

ರಾಜ್ಯದ ಇತರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೂ ಹಳೆಯ ಪಟ್ಟಿಯನ್ನೇ ನೆಚ್ಚಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು 2025ರ ಅಕ್ಟೋಬರ್‌ 1ರಂದು ಅಸ್ತಿತ್ವದಲ್ಲಿದ್ದ ಮತದಾರರ ಪಟ್ಟಿಯ ಆಧಾರದಲ್ಲಿಯೇ ನಡೆಸಲು ಅನುಮತಿ ಕೋರಲಾಗಿದೆ. ಈ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಅನುಕೂಲವಾಗುವಂತೆ ಶೀಘ್ರ ದತ್ತಾಂಶ ಒದಗಿಸಲು ಇಸಿಐಗೆ ನಿರ್ದೇಶನ ನೀಡುವಂತೆಯೂ ಆಯೋಗ ಮನವಿ ಮಾಡಿದೆ.

ಈ ಹಿಂದೆ, ಐದು ಪಾಲಿಕೆಗಳ ಚುನಾವಣೆಯನ್ನು ಇದೇ ಡಿಸೆಂಬರ್ 31ರೊಳಗೆ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್‌ ಕಟ್ಟುನಿಟ್ಟಿನ ನಿರ್ದೇಶನ ನೀಡಿತ್ತು. ಆದರೆ, ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆ ನಡೆಯುತ್ತಿದ್ದ ಕಾರಣ ಚುನಾವಣೆ ನಡೆಸಲು ಮತ್ತಷ್ಟು ಕಾಲಾವಕಾಶ ಬೇಕು ಎಂದು ಆಯೋಗವು ಈ ಹಿಂದೆಯೇ ಅರ್ಜಿ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

PM Modi visit to Bengaluru | ನಮ್ಮ ಮೆಟ್ರೊ ಪಿಂಕ್ ಲೈನ್ ಪ್ರಧಾನಿ ಮೋದಿ ಉದ್ಘಾಟನೆ; ನ.14ರಿಂದ ಕಾರ್ಯಾಚರಣೆ

4th ODI: 26 ವರ್ಷಗಳಲ್ಲೇ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ಹೀನಾಯ ಸೋಲು, ಆದರೂ 2 ಕಳಪೆ ದಾಖಲೆಗಳಿಂದ ಭಾರತ ಪಾರು!

4th ODI: ಮ್ಯಾಟ್ ಹೆನ್ರಿ ಮಾರಕ ಬೌಲಿಂಗ್, 89 ರನ್ ಗಳಿಗೇ ಭಾರತ ಆಲೌಟ್, 244 ರನ್ ಅಂತರದ ಹೀನಾಯ ಸೋಲು!

4th ODI: 16 ವರ್ಷಗಳ ಬಳಿಕ ಮತ್ತದೇ ಆಘಾತ, ಒಂದೇ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದ ರೋಹಿತ್ ಶರ್ಮಾ- ವಿರಾಟ್ ಕೊಹ್ಲಿ!

ಸಾಂಪ್ರದಾಯಿಕ ಮದುವೆಗೆ ಬ್ರೇಕ್; ಸೆಲ್ಫ್ ರೆಸ್ಪೆಕ್ಟ್ ಮ್ಯಾರೇಜ್ ಆದ ಅನಿರುದ್ಧ್-ಕಾವ್ಯಾ ಮಾರನ್: ಏನಿದು ಹೊಸ ಪದ್ಧತಿ?