ಮಂಡ್ಯ: ಕೊಲೆಯಾಗಿದ್ದಾಳೆ ಎಂದು ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದ ಮಹಿಳೆಯೊಬ್ಬಳು ಬರೋಬ್ಬರಿ ಏಳು ವರ್ಷಗಳ ನಂತರ ಜೀವಂತವಾಗಿ ಪತ್ತೆಯಾಗಿರುವ ಅಚ್ಚರಿಯ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.
ಈ ಪ್ರಕರಣದಲ್ಲಿ ಮಾಡದ ತಪ್ಪಿಗೆ ಅಮಾಯಕ ಯುವಕನೊಬ್ಬ ಎರಡೂವರೆ ವರ್ಷಗಳ ಕಾಲ (30 ತಿಂಗಳು) ಜೈಲು ಶಿಕ್ಷೆ ಅನುಭವಿಸಿರುವುದು ಪೊಲೀಸ್ ತನಿಖೆಯ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
2019ರ ಜೂನ್ನಲ್ಲಿ ಪಾಂಡವಪುರದಿಂದ ನಾಪತ್ತೆಯಾಗಿದ್ದ ಮಂಜು ಎನ್. ಎಂಬ ಮಹಿಳೆ ಬುಧವಾರ ನಾಗಮಂಗಲ ತಾಲ್ಲೂಕಿನ ಮಾಯಿಗೋನಹಳ್ಳಿ ಗ್ರಾಮದಲ್ಲಿ ಪತ್ತೆಯಾಗಿದ್ದಾರೆ. ಚಾಮರಾಜನಗರ ಮೂಲದ ನಾಗೇಂದ್ರ ಎಂಬುವವರನ್ನು ವಿವಾಹವಾಗಿರುವ ಅವರು, ಅವರೊಂದಿಗೆ ಅಲ್ಲಿ ವಾಸಿಸುತ್ತಿದ್ದರು.
ಈ ಬೆಳವಣಿಗೆಯಿಂದಾಗಿ ಮಂಜು ಅವರನ್ನು ಕೊಲೆ ಮಾಡಿದ ಆರೋಪದ ಮೇಲೆ ಸುಮಾರು ಎರಡೂವರೆ ವರ್ಷ ಜೈಲಿನಲ್ಲಿ ಕಳೆದಿದ್ದ ರಾಜೇಶ್ ಎಂ.ಆರ್. ಅಲಿಯಾಸ್ ಕಾಳ ಅವರಿಗೆ ದೊಡ್ಡ ನಿರಾಳ ಸಿಕ್ಕಂತಾಗಿದೆ.
ಕುಟುಂಬದವರು ತಮ್ಮ ಇಚ್ಛೆಗೆ ವಿರುದ್ಧವಾಗಿ ಮದುವೆ ಮಾಡಿದ್ದರಿಂದ ಮನೆ ಬಿಟ್ಟು ಹೋಗಿದ್ದಾಗಿ ಮಂಜು ಪೊಲೀಸರಿಗೆ ತಿಳಿಸಿದ್ದಾರೆ.
ಬಳಿಕ ನಾಗೇಂದ್ರ ಅವರನ್ನು ವಿವಾಹವಾಗಿ ಸುಮಾರು ಒಂದು ವರ್ಷ ತಮಿಳುನಾಡಿನಲ್ಲಿ ವಾಸವಿದ್ದರು. ನಂತರ ಮಾಯಿಗೋನಹಳ್ಳಿಯಲ್ಲಿ ನೆಲೆಸಿದ್ದರು.
ರಾಜೇಶ್ ಎಂಬ ವ್ಯಕ್ತಿಯ ಪರಿಚಯವೇ ತನಗಿಲ್ಲ ಎಂದಿರುವ ಮಂಜು, ಪ್ರಕರಣದ ಸತ್ಯಾಸತ್ಯತೆ ತಿಳಿಸಲು ಯಾವುದೇ ಪ್ರಾಧಿಕಾರದ ಮುಂದೆ ಹೇಳಿಕೆ ನೀಡಲು ಸಿದ್ಧವಿರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ಏನಿದು ಪ್ರಕರಣ?
2019ರ ಜೂನ್ನಲ್ಲಿ ಪಾಂಡವಪುರ ಪಟ್ಟಣದಿಂದ ಮಂಜು ಎನ್ (35) ಎಂಬ ಮಹಿಳೆ ನಾಪತ್ತೆಯಾಗಿದ್ದರು. ಈ ಕುರಿತು ಆಕೆಯ ತಂದೆ ನಾಗರಾಜು ನಾಪತ್ತೆ ದೂರು ದಾಖಲಿಸಿದ್ದರು. ಎರಡು ವರ್ಷಗಳ ಬಳಿಕ ರಾಗಿಮುದ್ದನಹಳ್ಳಿ ಗ್ರಾಮದ ರಾಜೇಶ್ ಎಂ.ಆರ್ (36) ಎಂಬುವವರು ಮಂಜುಳನ್ನು ಕೊಲೆ ಮಾಡಿ ಕಾವೇರಿ ನದಿಗೆ ಎಸೆದಿದ್ದಾರೆ ಎಂದು ನಾಗರಾಜು ಕೊಲೆ ದೂರು ನೀಡಿದ್ದರು.
ನಾಪತ್ತೆಯಾಗುವ ದಿನ ಪಾಂಡವಪುರ ಬಸ್ ನಿಲ್ದಾಣದಲ್ಲಿ ಅಪರಿಚಿತರಾಗಿದ್ದ ರಾಜೇಶ್ ಅವರ ಮೊಬೈಲ್ ಫೋನ್ ಪಡೆದು ಮಂಜು ಕೊನೆಯ ಕರೆ ಮಾಡಿದ್ದರು.
ಇದೇ ಕಾಲ್ ರೆಕಾರ್ಡ್ (CDR) ಆಧಾರದ ಮೇಲೆ 2021ರಲ್ಲಿ ಪೊಲೀಸರು ರಾಜೇಶ್ ಅವರನ್ನು ಬಂಧಿಸಿ ಜೈಲಿಗಟ್ಟಿದ್ದರು. ಸುಮಾರು 30 ತಿಂಗಳುಗಳ ಕಾಲ ಜೈಲಿನಲ್ಲಿದ್ದ ರಾಜೇಶ್ 2024ರಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದರು.
ಪತ್ತೆಯಾಗಿದ್ದು ಹೇಗೆ?
ಇತ್ತೀಚೆಗೆ ರಾಜೇಶ್ ಪರ ವಕೀಲ ನಟೇಶ್ ಅವರಿಗೆ ಸಿಕ್ಕ ಖಚಿತ ಮಾಹಿತಿಯ ಮೇರೆಗೆ ಪರಿಶೀಲನೆ ನಡೆಸಿದಾಗ, ನಾಗಮಂಗಲ ತಾಲೂಕಿನ ಮಾಯಿಗೋನಹಳ್ಳಿ ಗ್ರಾಮದಲ್ಲಿ ಮಂಜು ಜೀವಂತವಾಗಿ ಪತ್ತೆಯಾಗಿದ್ದಾರೆ.
ಮನೆಯವರು ಇಷ್ಟವಿಲ್ಲದ ಮದುವೆ ಮಾಡಲು ಮುಂದಾಗಿದ್ದರಿಂದ ತಾನೇ ಮನೆ ಬಿಟ್ಟು ಹೋಗಿದ್ದಾಗಿ ಮಂಜು ಹೇಳಿಕೆ ನೀಡಿದ್ದಾರೆ. ಬಳಿಕ ನಾಗೇಂದ್ರ ಎಂಬುವವರನ್ನು ಮದುವೆಯಾಗಿ ತಮಿಳುನಾಡಿನಲ್ಲಿ ನೆಲೆಸಿದ್ದ ಆಕೆ, ಇತ್ತೀಚೆಗೆ ನಾಗಮಂಗಲಕ್ಕೆ ಬಂದು ವಾಸವಿದ್ದರು. ಅಲ್ಲದೆ, ತನಗೆ ರಾಜೇಶ್ ಯಾರೆಂದೇ ತಿಳಿದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪೊಲೀಸರ ವಿರುದ್ಧ ಗಂಭೀರ ಆರೋಪ; ತನಿಖೆಗೆ ಆದೇಶ
ಮಂಜು ಪತ್ತೆಯಾದ ಬೆನ್ನಲ್ಲೇ, ಅಂದಿನ ಪಾಂಡವಪುರ ಪೊಲೀಸ್ ಇನ್ಸ್ಪೆಕ್ಟರ್ ಪ್ರಭಾಕರ್ ವಿರುದ್ಧ ರಾಜೇಶ್ ಗಂಭೀರ ಆರೋಪ ಮಾಡಿದ್ದಾರೆ. ಸುಳ್ಳು ತಪ್ಪೊಪ್ಪಿಗೆ ಪಡೆಯಲು ಪೊಲೀಸರು ತೀವ್ರ ಹಲ್ಲೆ ನಡೆಸಿ, ಖಾಸಗಿ ಅಂಗಗಳಿಗೆ ವಿದ್ಯುತ್ ಶಾಕ್ ನೀಡಿದ್ದರು ಎಂದು ಕಣ್ಣೀರು ಹಾಕಿದ್ದಾರೆ.
ಸದ್ಯ ಮಂಜು ಅವರನ್ನು ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದ್ದು, ಹಿಂದಿನ ಕೊಲೆ ತನಿಖೆಯಲ್ಲಿ ನಡೆದಿರುವ ಗಂಭೀರ ಲೋಪಗಳ ಕುರಿತು ತನಿಖೆ ನಡೆಸಲು ಶ್ರೀರಂಗಪಟ್ಟಣ ಡಿವೈಎಸ್ಪಿ ನೇತೃತ್ವದಲ್ಲಿ ವಿಚಾರಣೆಗೆ ಮಂಡ್ಯ ಎಸ್ಪಿ ಡಾ. ವಿ.ಜೆ. ಶೋಭಾರಾಣಿ ಆದೇಶಿಸಿದ್ದಾರೆ.
ರಕ್ಷಣೆಗೆ ರಾಜೇಶ್ ತಂದೆ ಮನವಿ
ಏತನ್ಮಧ್ಯೆ ಮಂಜು ಜೀವಂತವಾಗಿ ಪತ್ತೆಯಾದ ಹಿನ್ನೆಲೆಯಲ್ಲಿ ರಾಜೇಶ್ ಅವರ ತಂದೆ ರಮೇಶ್ ಬುಧವಾರ ಬಿಂಡಿಗನವಿಲೆ ಪೊಲೀಸ್ ಠಾಣೆಗೆ ತೆರಳಿ, ತನ್ನ ಮಗನಿಗೆ ರಕ್ಷಣೆ ನೀಡಬೇಕು ಮತ್ತು ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ. ಕೊಲೆ ಆರೋಪ ಎದುರಿಸಿದ್ದ ಮಹಿಳೆಯೇ ಜೀವಂತವಾಗಿರುವುದನ್ನು ಅವರು ಪೊಲೀಸರ ಗಮನಕ್ಕೆ ತಂದಿದ್ದಾರೆ.
ಇದೇ ರೀತಿಯ ಮತ್ತೊಂದು ಪ್ರಕರಣದಲ್ಲಿ, ಪತ್ನಿಯನ್ನು ಕೊಂದ ಆರೋಪದ ಮೇಲೆ ಎರಡು ವರ್ಷ ಜೈಲಿನಲ್ಲಿದ್ದ ವ್ಯಕ್ತಿಯೊಬ್ಬರು ಕಳೆದ ವರ್ಷ ಪತ್ನಿ ಜೀವಂತವಾಗಿರುವುದು ಪತ್ತೆಯಾದ ಬಳಿಕ ಬಿಡುಗಡೆಯಾಗಿದ್ದರು.
2023ರಲ್ಲಿ ಪತ್ನಿ ಮಲ್ಲಿ ಅವರನ್ನು ಕೊಂದ ಆರೋಪದ ಮೇಲೆ 35 ವರ್ಷದ ಸುರೇಶ್ ಜೈಲು ಸೇರಿದ್ದರು. ಆದರೆ, ಎರಡು ವರ್ಷಗಳ ಬಳಿಕ ಮಲ್ಲಿ ಮತ್ತೊಬ್ಬ ವ್ಯಕ್ತಿಯೊಂದಿಗೆ ವಾಸಿಸುತ್ತಿರುವುದು ಪತ್ತೆಯಾಗಿತ್ತು. ಈ ಪ್ರಕರಣದ ಅಂದಿನ ತನಿಖಾಧಿಕಾರಿ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸ್ಥಳೀಯ ನ್ಯಾಯಾಲಯ ಆದೇಶಿಸಿತ್ತು.