ಬೆಂಗಳೂರಿನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್  
ರಾಜ್ಯ

ಭಾರತದ ಆರ್ಥಿಕ ಬೆಳವಣಿಗೆಯ ಪ್ರಮುಖ ಚಾಲನಾ ಶಕ್ತಿ ನವ ಮಧ್ಯಮ ವರ್ಗ: ಪ್ರಧಾನಿ ಮೋದಿ; Video

ನವ ಮಧ್ಯಮ ವರ್ಗವು ಉತ್ತಮ ಮನೆ, ಗೃಹೋಪಯೋಗಿ ವಸ್ತುಗಳು, ದ್ವಿಚಕ್ರ ವಾಹನಗಳು, ಗುಣಮಟ್ಟದ ಶಿಕ್ಷಣ, ಆರೋಗ್ಯ ಸೇವೆಗಳು ಹಾಗೂ ಪ್ರವಾಸ ಮತ್ತು ಹೊಸ ಅನುಭವಗಳನ್ನು ಪಡೆಯುವ ಅವಕಾಶಗಳನ್ನು ಬಯಸುತ್ತಿದೆ ಎಂದರು.

ಬೆಂಗಳೂರು: ಮಧ್ಯಮ ವರ್ಗದ ಜನರ ಜೀವನ ಮಟ್ಟ ಸುಧಾರಣೆ ಹಾಗೂ ಹೊಸ ಮಹತ್ವಾಕಾಂಕ್ಷೆಯುಳ್ಳ ವರ್ಗದ ಉದಯವು ಭಾರತದ ಆರ್ಥಿಕ ಬೆಳವಣಿಗೆಯ ಪ್ರಮುಖ ಚಾಲಕ ಶಕ್ತಿಗಳಾಗುತ್ತಿವೆ. ಈ ವರ್ಗದ ಹೆಚ್ಚುತ್ತಿರುವ ನಿರೀಕ್ಷೆಗಳು ವಿವಿಧ ಕ್ಷೇತ್ರಗಳಲ್ಲಿ ಬೇಡಿಕೆಯನ್ನು ಸೃಷ್ಟಿಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದಲ್ಲಿ ವಿವಿಧ ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಿ ಹಾಗೂ ರಾಷ್ಟ್ರಕ್ಕೆ ಸಮರ್ಪಿಸಿದ ಬಳಿಕ ಭಾರತೀಯ ನಿರ್ವಹಣಾ ಸಂಸ್ಥೆ ಬೆಂಗಳೂರು (IIMB)ಯಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನವ ಮಧ್ಯಮ ವರ್ಗವು ಉತ್ತಮ ಮನೆ, ಗೃಹೋಪಯೋಗಿ ವಸ್ತುಗಳು, ದ್ವಿಚಕ್ರ ವಾಹನಗಳು, ಗುಣಮಟ್ಟದ ಶಿಕ್ಷಣ, ಆರೋಗ್ಯ ಸೇವೆಗಳು ಹಾಗೂ ಪ್ರವಾಸ ಮತ್ತು ಹೊಸ ಅನುಭವಗಳನ್ನು ಪಡೆಯುವ ಅವಕಾಶಗಳನ್ನು ಬಯಸುತ್ತಿದೆ ಎಂದರು.

ಈ ಆಕಾಂಕ್ಷೆಗಳು ಹೊಸ ಬೇಡಿಕೆಯನ್ನು ಸೃಷ್ಟಿಸುವುದರ ಜತೆಗೆ ವಾಹನೋದ್ಯಮ, ಎಲೆಕ್ಟ್ರಾನಿಕ್ಸ್‌ನಿಂದ ಹಿಡಿದು ಪ್ರವಾಸೋದ್ಯಮ ಮತ್ತು ಸೇವಾ ವಲಯಗಳವರೆಗೆ ಉದ್ಯೋಗಾವಕಾಶಗಳನ್ನು ತೆರೆದಿಡುತ್ತಿವೆ ಎಂದು ಹೇಳಿದರು.

ಈ ನವ ಮಧ್ಯಮ ವರ್ಗವು ಭಾರತೀಯ ಆರ್ಥಿಕತೆಯ ಬೆಳವಣಿಗೆಯ ಪ್ರಮುಖ ಎಂಜಿನ್ ಆಗುತ್ತಿದೆ. ಸಮಾಜದ ವಿಸ್ತರಿಸುತ್ತಿರುವ ಈ ವರ್ಗದ ಹಿತಾಸಕ್ತಿಗಳು, ಅದರಲ್ಲೂ ವಿಶೇಷವಾಗಿ ಬೆಂಗಳೂರು ಮತ್ತು ಕರ್ನಾಟಕದ ಜನರ ಹಿತಾಸಕ್ತಿಗಳು ಕೇಂದ್ರ ಸರ್ಕಾರದ ಆದ್ಯತೆಗಳಲ್ಲಿವೆ ಎಂದು ಹೇಳಿದರು.

ಮಧ್ಯಮ ವರ್ಗದ ಕುಟುಂಬಗಳ ಉಳಿತಾಯ ಮತ್ತು ಖರೀದಿ ಸಾಮರ್ಥ್ಯವನ್ನು ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದರು.

ವಾರ್ಷಿಕ 12 ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ಆದಾಯ ತೆರಿಗೆಯಿಂದ ವಿನಾಯಿತಿ ನೀಡಿರುವುದು, ಟಿಡಿಎಸ್ ನಿಯಮಗಳಲ್ಲಿನ ಬದಲಾವಣೆಗಳು, ಮುಂದಿನ ಪೀಳಿಗೆಯ ಜಿಎಸ್‌ಟಿ ಸುಧಾರಣೆಗಳು ಹಾಗೂ ಆರೋಗ್ಯ ಮತ್ತು ಜೀವ ವಿಮೆಯ ಮೇಲಿನ ಜಿಎಸ್‌ಟಿ ಕಡಿತವನ್ನು ಉಲ್ಲೇಖಿಸಿದ ಪ್ರಧಾನ ಮಂತ್ರಿಗಳು, ಈ ಕ್ರಮಗಳು ಜನರ ಕೈಯಲ್ಲಿ ಹೆಚ್ಚಿನ ಹಣ ಉಳಿಯುವಂತೆ ಮಾಡುವ ಉದ್ದೇಶ ಹೊಂದಿವೆ. ಇದರಿಂದ ಜನರು ತಮ್ಮ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳುವುದರ ಜತೆಗೆ ಆರ್ಥಿಕ ಬೆಳವಣಿಗೆಗೂ ಕೊಡುಗೆ ನೀಡಲು ಸಾಧ್ಯವಾಗಲಿದೆ ಎಂದರು.

ಕರ್ನಾಟಕದಲ್ಲಿ 15,000 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಮೂಲಸೌಕರ್ಯ ಯೋಜನೆಗಳ ಉದ್ಘಾಟನೆಯು ರಾಜ್ಯದ ಅಭಿವೃದ್ಧಿಗೆ ಹೊಸ ವೇಗ ನೀಡುವುದರ ಜತೆಗೆ ತಂತ್ರಜ್ಞಾನ ಮತ್ತು ಆರ್ಥಿಕ ಕೇಂದ್ರವಾಗಿ ಬೆಂಗಳೂರಿನ ಸ್ಥಾನವನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಹೇಳಿದರು.

ಉತ್ತಮ ಸಂಪರ್ಕ ವ್ಯವಸ್ಥೆಯು ಪ್ರಗತಿ, ಉದ್ಯೋಗ ಮತ್ತು ಕೈಗಾರಿಕೆಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ. ಈ ಅವಕಾಶಗಳು ಸಮಾಜದ ಪ್ರತಿಯೊಂದು ವರ್ಗಕ್ಕೂ ತಲುಪಿದಾಗ ಬಡತನದ ವಿರುದ್ಧದ ಹೋರಾಟವೂ ಮತ್ತಷ್ಟು ಬಲಗೊಳ್ಳುತ್ತದೆ ಎಂದ ಅವರು, ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ಸುಮಾರು 50 ಕೋಟಿ ಜನರು ತೀವ್ರ ಬಡತನದಿಂದ ಹೊರಬಂದಿದ್ದಾರೆ ಎಂದು ತಿಳಿಸಿದರು.

ಈ ಯೋಜನೆಗಳಲ್ಲಿ ಮೆಟ್ರೋ ಮತ್ತು ರೈಲು ಸಂಪರ್ಕ ವ್ಯವಸ್ಥೆ, ನವೀಕರಿಸಬಹುದಾದ ಇಂಧನ ಪ್ರಸರಣ ಹಾಗೂ ಇಂಧನ ಭದ್ರತೆಗೆ ಸಂಬಂಧಿಸಿದ ಯೋಜನೆಗಳು ಸೇರಿವೆ.

ಬೆಂಗಳೂರು ಮೆಟ್ರೋದ ಪಿಂಕ್ ಲೈನ್‌ನ ಹೊಸ ಎಲಿವೇಟೆಡ್ ಮಾರ್ಗವನ್ನು ಪ್ರಧಾನಿ ಮೋದಿ ರಾಷ್ಟ್ರಕ್ಕೆ ಸಮರ್ಪಿಸಿದರು. ಇದರಿಂದ ಐಐಎಂಬಿ ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳು ಹಾಗೂ ಪ್ರಮುಖ ವ್ಯಾಪಾರ, ತಂತ್ರಜ್ಞಾನ ಮತ್ತು ವಾಣಿಜ್ಯ ಕೇಂದ್ರಗಳಿಗೆ ಸಂಪರ್ಕ ಸುಧಾರಿಸಲಿದೆ. ಪ್ರಯಾಣಿಕರ ಸಮಯ ಮತ್ತು ಹಣ ಎರಡೂ ಉಳಿತಾಯವಾಗಲಿದೆ ಎಂದು ಹೇಳಿದರು.

ನಮ್ಮ ಮೆಟ್ರೋ ವಿಸ್ತರಣೆಯನ್ನು ಪ್ರಸ್ತಾಪಿಸಿದ ಅವರು, 2014ರಲ್ಲಿ 17 ಕಿ.ಮೀ. ಇದ್ದ ಮೆಟ್ರೋ ಜಾಲವು ಈಗ 100 ಕಿ.ಮೀ.ಗೂ ಅಧಿಕವಾಗಿ ವಿಸ್ತರಣೆಯಾಗಿದೆ ಎಂದರು. ಈ ಮೂಲಕ ದೆಹಲಿ-ಎನ್‌ಸಿಆರ್ ಮತ್ತು ಮುಂಬೈ ಮಹಾನಗರ ಪ್ರದೇಶದ ಬಳಿಕ 100 ಕಿ.ಮೀ. ಗಡಿ ದಾಟಿದ ದೇಶದ ಮೂರನೇ ನಗರ ಪ್ರದೇಶವಾಗಿ ಬೆಂಗಳೂರು ಹೊರಹೊಮ್ಮಿದೆ ಎಂದು ತಿಳಿಸಿದರು.

ದೇಶದ ಒಟ್ಟು ಐಟಿ ರಫ್ತಿನಲ್ಲಿ ಮೂರನೇ ಒಂದಕ್ಕಿಂತ ಹೆಚ್ಚು ಪಾಲು ಹೊಂದಿರುವ ಬೆಂಗಳೂರು, ನಾವೀನ್ಯತೆ ಮತ್ತು ಆರ್ಥಿಕ ಬೆಳವಣಿಗೆಯ ಪ್ರಮುಖ ಶಕ್ತಿಯಾಗಿದೆ ಎಂದು ಅವರು ಹೇಳಿದರು.

ಬೆಂಗಳೂರು ಮಹಾನಗರ ಪ್ರದೇಶದಲ್ಲಿ ಆಧುನಿಕ ಸಾರ್ವಜನಿಕ ಮೂಲಸೌಕರ್ಯವನ್ನು ವಿಸ್ತರಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದರು.

ರೈಲ್ವೆ ಅಭಿವೃದ್ಧಿಗೆ ಒತ್ತು

ರೈಲ್ವೆ ಅಭಿವೃದ್ಧಿ ಕುರಿತು ಮಾತನಾಡಿದ ಮೋದಿ, ಕಳೆದ ಒಂದು ದಶಕದಲ್ಲಿ ಕರ್ನಾಟಕದ ರೈಲ್ವೆ ಬಜೆಟ್ ಅನುದಾನವು ಒಂಬತ್ತು ಪಟ್ಟು ಹೆಚ್ಚಾಗಿದೆ ಎಂದು ತಿಳಿಸಿದರು.

ಅಮೃತ ಭಾರತ್ ನಿಲ್ದಾಣ ಯೋಜನೆಯಡಿ ಚಾಮರಾಜನಗರ, ಚಿಕ್ಕಮಗಳೂರು, ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರಸ್ತೆ ಸೇರಿದಂತೆ ನಾಲ್ಕು ರೈಲು ನಿಲ್ದಾಣಗಳನ್ನು ಪುನರಾಭಿವೃದ್ಧಿಗೊಳಿಸಲಾಗಿದೆ ಎಂದರು.

ರೈಲು ಮಾರ್ಗಗಳ ದ್ವಿಗುಣಗೊಳಿಸುವಿಕೆ ಮತ್ತು ವಿದ್ಯುದೀಕರಣ ಕಾಮಗಾರಿಗಳನ್ನೂ ಪ್ರಸ್ತಾಪಿಸಿದ ಅವರು, ಬೆಂಗಳೂರು-ಮಂಗಳೂರು-ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿದರು. ಈ ರೈಲು ಬೆಂಗಳೂರು, ಕರಾವಳಿ ಕರ್ನಾಟಕ ಮತ್ತು ಗೋವಾ ನಡುವೆ ಅರೆ-ಅತಿ ವೇಗದ ರೈಲು ಸಂಪರ್ಕ ಕಲ್ಪಿಸಲಿದೆ ಎಂದು ಹೇಳಿದರು.

ಇಂಧನ ಭದ್ರತೆಗೆ ಹೆಚ್ಚಿನ ಆದ್ಯತೆ

ಇರಾನ್ ಮತ್ತು ಕೊಲ್ಲಿ ಪ್ರದೇಶದಲ್ಲಿ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ಇಂಧನ ಭದ್ರತೆಯ ಮಹತ್ವವನ್ನು ಒತ್ತಿಹೇಳಿದ ಪ್ರಧಾನಿ, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಎಲ್‌ಪಿಜಿ ಉತ್ಪಾದನಾ ಸಾಮರ್ಥ್ಯವನ್ನು ದೇಶ ಬಲಪಡಿಸಿದೆ. ಕಚ್ಚಾ ತೈಲ ಸಂಗ್ರಹಣಾ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವುದರ ಜತೆಗೆ ಸೌರ, ಜಲ ಮತ್ತು ಪವನ ವಿದ್ಯುತ್ ಉತ್ಪಾದನೆಯನ್ನೂ ವಿಸ್ತರಿಸಲಾಗಿದೆ ಎಂದರು.

ಕರ್ನಾಟಕದಲ್ಲಿ ಆರಂಭಿಸಲಾಗಿರುವ ಇಂಧನ ಸಂಬಂಧಿತ ಯೋಜನೆಗಳು ದೇಶದ ಇಂಧನ ಭದ್ರತೆಯನ್ನು ಮತ್ತಷ್ಟು ಬಲಪಡಿಸಲಿವೆ ಎಂದು ಹೇಳಿದರು.

ಎಲ್‌ಪಿಜಿ ಸಂಗ್ರಹಣಾ ಘಟಕವು ಹೆಚ್ಚುವರಿಯಾಗಿ 80,000 ಮೆಟ್ರಿಕ್ ಟನ್ ಸಂಗ್ರಹಣಾ ಸಾಮರ್ಥ್ಯವನ್ನು ಒದಗಿಸಲಿದೆ. ದೇವನಗುಂದಿ ಮಾರ್ಕೆಟಿಂಗ್ ಟರ್ಮಿನಲ್ ಪೆಟ್ರೋಲ್, ಡೀಸೆಲ್ ಮತ್ತು ವಿಮಾನ ಇಂಧನ ಪೂರೈಕೆಯನ್ನು ಸುಧಾರಿಸಲಿದೆ ಎಂದು ತಿಳಿಸಿದರು.

ಬೆಂಗಳೂರಿನ ಸಂಕುಚಿತ ಜೈವಿಕ ಅನಿಲ (CBG) ಘಟಕವು ಪ್ರತಿದಿನ ಸುಮಾರು 13 ಟನ್ ಜೈವಿಕ ಅನಿಲ ಉತ್ಪಾದಿಸಲಿದೆ. ಇದರ ಜತೆಗೆ ತ್ಯಾಜ್ಯ ನಿರ್ವಹಣೆಯನ್ನು ಸುಧಾರಿಸುವುದರೊಂದಿಗೆ ನೈಸರ್ಗಿಕ ಅನಿಲ ಆಮದಿನ ಮೇಲಿನ ವೆಚ್ಚವನ್ನೂ ಕಡಿಮೆ ಮಾಡಲಿದೆ ಎಂದರು.

ಭಾರತದ ನವೀಕರಿಸಬಹುದಾದ ಇಂಧನ ಉತ್ಪಾದನಾ ಸಾಮರ್ಥ್ಯವು 300 ಗಿಗಾವ್ಯಾಟ್‌ ದಾಟಿದೆ ಎಂದು ಮೋದಿ ತಿಳಿಸಿದರು.

ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಯಡಿ ಕರ್ನಾಟಕದ 40,000ಕ್ಕೂ ಹೆಚ್ಚು ಕುಟುಂಬಗಳು ಸೇರಿದಂತೆ ದೇಶಾದ್ಯಂತ 60 ಲಕ್ಷಕ್ಕೂ ಅಧಿಕ ಕುಟುಂಬಗಳು ತಮ್ಮ ಮನೆಗಳ ಮೇಲ್ಛಾವಣಿಯಲ್ಲಿ ಸೌರ ವಿದ್ಯುತ್ ಘಟಕಗಳನ್ನು ಅಳವಡಿಸಿಕೊಂಡಿವೆ. ಪ್ರತಿ ಕುಟುಂಬಕ್ಕೆ ಕೇಂದ್ರ ಸರ್ಕಾರ ಸುಮಾರು 80,000 ರೂ. ಆರ್ಥಿಕ ನೆರವು ನೀಡಿದೆ ಎಂದರು.

ಪ್ರಧಾನಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಏವಂ ಉತ್ಥಾನ ಮಹಾಭಿಯಾನ (PM-Kusum) ಯೋಜನೆಯಡಿ ಕರ್ನಾಟಕದಲ್ಲಿ ನೀರಾವರಿ ಉದ್ದೇಶಕ್ಕಾಗಿ ಎಂಟು ಲಕ್ಷಕ್ಕೂ ಅಧಿಕ ಸೌರ ಪಂಪ್‌ಗಳನ್ನು ಬಳಸಲಾಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಜ್ಯಪಾಲೆ ಸುಧಾ ಯಾದವ್, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಕೃಷ್ಣ ಬೈರೇಗೌಡ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಉಪಸ್ಥಿತರಿದ್ದರು.

ಪ್ರಧಾನಿ ಮೋದಿ ಅವರು ಬೆಂಗಳೂರಿನ ಆರಾಧ್ಯ ದೇವತೆ ಅನ್ನಮ್ಮ ಹಾಗೂ ನಾಡಪ್ರಭು ಕೆಂಪೇಗೌಡರಿಗೆ ಗೌರವ ನಮನ ಸಲ್ಲಿಸಿದರು.

ಮಾಜಿ ಕೇಂದ್ರ ಸಚಿವ ದಿವಂಗತ ಅನಂತ್ ಕುಮಾರ್ ಅವರ ಪುಣ್ಯತಿಥಿ ಹಿನ್ನೆಲೆಯಲ್ಲಿ ಅವರನ್ನು ಸ್ಮರಿಸಿದ ಮೋದಿ, ಅನಂತ್ ಕುಮಾರ್ ಅವರಿಗೆ ಈ ಪ್ರದೇಶದೊಂದಿಗೆ ವಿಶೇಷ ನಂಟಿತ್ತು ಎಂದು ಹೇಳಿ ಗೌರವ ಸಲ್ಲಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವೀಸಾಗಳು 'ಸಾರ್ವಭೌಮ' ವಿಷಯ: 'ಭಾರತ್ ಶೃಂಗಸಭೆ'ಗೆ 115 ವಿದೇಶಿ ಭಾಷಣಕಾರರಿಗೆ ನಿರ್ಬಂಧ; ಶಶಿ ತರೂರ್ ಆರೋಪಕ್ಕೆ MEA ಪ್ರತಿಕ್ರಿಯೆ

'ರಾಷ್ಟ್ರ ಸೇವೆ ಅವರಿಂದ ಕಲಿಯಬೇಕು': ಕರ್ನಾಟಕ ರಾಜ್ಯಪಾಲೆ ಸುಧಾ ಯಾದವ್‌ರನ್ನು ಶ್ಲಾಘಿಸಿದ ಪ್ರಧಾನಿ ಮೋದಿ!

ನಟ ಗೋವಿಂದನ ತೋಳಲ್ಲಿ ಕೋಮಲ್ ರಾಣಿ: ಪ್ರಣಯ ಪಕ್ಷಿಗಳ ನಡುವಿನ ಸಂಬಂಧದ ಊಹಾಪೋಹಕ್ಕೆ ಪುಷ್ಟಿ, Photos!

ಮಡಿಕೇರಿಯಲ್ಲಿ ಬೋಟ್ ದುರಂತ: ಪ್ರವಾಸಕ್ಕೆಂದು ಬಂದಿದ್ದ ಗುಜರಾತ್ ಮೂಲದ ದಂಪತಿ ಸಾವು; ಬದುಕುಳಿದ ಮಕ್ಕಳು!

ಮೇಕೆದಾಟು ಅಣೆಕಟ್ಟು ಯೋಜನೆಗೆ ಅನುಮತಿ ನೀಡಿ: ವೇದಿಕೆಯಲ್ಲೇ ಪ್ರಧಾನಿ ಮೋದಿಗೆ ಸಿಎಂ ಮನವಿ! Video