ಬೆಂಗಳೂರು: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಡಾನೆ ಮತ್ತು ಹುಲಿಯನ್ನು ತಮಿಳುನಾಡು ಸಚಿವ ವನ್ನಿ ಅರಸು ಬೆನ್ನಟ್ಟಿದ್ದಾರೆ ಎನ್ನಲಾದ ವಿಡಿಯೋವೊಂದು ವೈರಲ್ ಆಗಿದ್ದು ಈ ಘಟನೆಯ ಬಗ್ಗೆ ರಾಜ್ಯ ಸರ್ಕಾರವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ವೈರಲ್ ಆಗಿರುವ ಈ ವಿಡಿಯೋದಲ್ಲಿ, ತಮಿಳುನಾಡಿನ ಸಾಮಾಜಿಕ ನ್ಯಾಯ ಸಚಿವ ಕಾಡಿನೊಳಗೆ ವನ್ಯಜೀವಗಳ ಹಿಂದೆ ಓಡುತ್ತಿರುವುದು, ಅವುಗಳನ್ನು ಬೆನ್ನಟ್ಟುತ್ತಿರುವುದು ಕಂಡುಬಂದಿದೆ. ಈ ದೃಶ್ಯಗಳ ಹಿನ್ನೆಲೆಯಲ್ಲಿ ತಮಿಳು ಹಾಡೊಂದನ್ನು ಕೇಳಬಹುದು. ಅಷ್ಟೇ ಅಲ್ಲದೆ ಸರ್ಕಾರಿ ವಾಹನದ ಬಾನೆಟ್ ಮೇಲೆ ಕುಳಿತು ಸಚಿವ ಪೋಸ್ ನೀಡಿರುವುದನ್ನೂ ವಿಡಿಯೋದಲ್ಲಿ ಕಾಣಬಹುದು.
ಈ ಘಟನೆಗೆ ಪ್ರತಿಕ್ರಿಯಿಸಿರುವ ಕರ್ನಾಟಕದ ಅರಣ್ಯ ಸಚಿವ ರಾಮಲಿಂಗ ರೆಡ್ಡಿ, ವ್ಯಕ್ತಿ ಎಷ್ಟೇ ಪ್ರಭಾವಶಾಲಿ ಅಥವಾ ಶಕ್ತಿಶಾಲಿಯಾಗಿದ್ದರೂ, ಕಾನೂನನ್ನು ಪಾಲಿಸಲೇಬೇಕಾಗುತ್ತದೆ. ನಾನು ಇಂದು ಬೆಳಿಗ್ಗೆ ನಮ್ಮ ಸಾಮಾಜಿಕ ಜಾಲತಾಣ ಖಾತೆಗಳನ್ನು ಪರಿಶೀಲಿಸುತ್ತಿದ್ದಾಗ, ಸುದರ್ಶನ್ ಎಂಬುವವರು ವಿಡಿಯೋವೊಂದನ್ನು ಪೋಸ್ಟ್ ಮಾಡಿ ನನ್ನನ್ನು ಟ್ಯಾಗ್ ಮಾಡಿದ್ದರು. ಅದರಲ್ಲಿ ವಾಹನದ ಸಂಖ್ಯೆ ಮತ್ತು ಇತರ ವಿವರಗಳು ಸ್ಪಷ್ಟವಾಗಿ ಕಾಣಿಸುತ್ತಿವೆ. ಈ ಬಗ್ಗೆ ಪತ್ರವೊಂದನ್ನು ಸಿದ್ಧಪಡಿಸುವಂತೆ ನಾನು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಪತ್ರ ಸಿದ್ಧವಾದ ಕೂಡಲೇ, ನಾನು ನಮ್ಮ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (PCCF) ಹಾಗೂ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಎಂ.ಎ. ಸಲೀಂಗೆ ಪತ್ರ ಬರೆಯಲಿದ್ದೇನೆ ಎಂದು ರೆಡ್ಡಿ ತಿಳಿಸಿದರು.
ಅವರು ಎಷ್ಟೇ ಪ್ರಭಾವಶಾಲಿ ಅಥವಾ ಶಕ್ತಿಶಾಲಿಗಳಾಗಿದ್ದರೂ, ಅರಣ್ಯ ಪ್ರದೇಶದಲ್ಲಿ ಅನ್ವಯವಾಗುವ ಕಾನೂನುಗಳನ್ನು ಅವರು ಪಾಲಿಸಲೇಬೇಕು ಎಂದು ಕರ್ನಾಟಕದ ಸಚಿವರು ಸ್ಪಷ್ಟಪಡಿಸಿದರು. ಈ ಘಟನೆಯ ಬಗ್ಗೆ ತಮಗೆ ಮೊದಲೇ ತಿಳಿದಿತ್ತೇ ಎಂದು ಸುದ್ದಿಗಾರರೊಬ್ಬರು ಪ್ರಶ್ನಿಸಿದಾಗ, ತಮಗೆ ಈ ಬಗ್ಗೆ ಮಾಹಿತಿ ಇರಲಿಲ್ಲ ಎಂದು ರೆಡ್ಡಿ ಉತ್ತರಿಸಿದರು. ನನಗೆ ಈ ವಿಷಯ ತಿಳಿದಿರಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಕಾಣಿಸಿಕೊಂಡಾಗ ಅದು ನನ್ನ ಗಮನಕ್ಕೆ ಬಂತು. ಕೂಡಲೇ, ಈ ವಿಷಯಕ್ಕೆ ಸಂಬಂಧಿಸಿದಂತೆ ಪತ್ರವೊಂದನ್ನು ಸಿದ್ಧಪಡಿಸುವಂತೆ ನಾನು ಇಂದು ಬೆಳಿಗ್ಗೆ ಅಧಿಕಾರಿಗಳಿಗೆ ಸೂಚಿಸಿದೆ ಎಂದು ರೆಡ್ಡಿ ಹೇಳಿದರು.