ಮಡಿಕೇರಿ: ಕೊಡಗಿನ ವಿರಾಜಪೇಟೆ ತಾಲ್ಲೂಕಿನ ಕೊಟ್ಟೋಳಿ ಗ್ರಾಮದಲ್ಲಿರುವ 32 ಎಕರೆ ಕಾಫಿ ತೋಟದಲ್ಲಿ ವಿಷಕಾರಿ ರಾಸಾಯನಿಕ ಸಿಂಪಡಿಸಿರುವ ಶಂಕೆ ವ್ಯಕ್ತವಾಗಿದ್ದು, 2,000ಕ್ಕೂ ಹೆಚ್ಚು ಕಾಫಿ ಗಿಡಗಳು, ಕಾಳುಮೆಣಸಿನ ಬಳ್ಳಿಗಳು ಹಾಗೂ ನೆರಳು ನೀಡುವ ಮರಗಳು ಒಣಗುತ್ತಿವೆ.
ಈ ಕೃತ್ಯದ ಹಿಂದೆ ತೋಟದ ಹಿಂದಿನ ವ್ಯವಸ್ಥಾಪಕನ ಕೈವಾಡವಿದೆ ಎಂದು ಮಾಲೀಕರು ಆರೋಪಿಸಿದ್ದು, 15 ಕೋಟಿ ರೂ.ಗೂ ಅಧಿಕ ನಷ್ಟ ಸಂಭವಿಸಿರುವುದಾಗಿ ಅಂದಾಜಿಸಿದ್ದಾರೆ.
ಸುಪ್ರೀಂ ಕೋರ್ಟ್ ವಕೀಲ ಎನ್. ರವೀಂದ್ರನಾಥ ಕಾಮತ್ ಅವರು ಈ ಘಟನೆಯಿಂದ 15 ಕೋಟಿ ರೂ.ಗೂ ಅಧಿಕ ನಷ್ಟ ಉಂಟಾಗಿದೆ ಎಂದು ಅಂದಾಜಿಸಿದ್ದಾರೆ.
ನವೆಂಬರ್ 12ರಂದು ಈ ಘಟನೆ ಬೆಳಕಿಗೆ ಬಂದಿದೆ. ತೋಟದ ಹಾಲಿ ವ್ಯವಸ್ಥಾಪಕರು, ತೋಟದ ವಿವಿಧ ಭಾಗಗಳಲ್ಲಿನ ಬೆಳೆಗಳು ಒಣಗಿ ಮುದುಡುತ್ತಿರುವುದನ್ನು ಗಮನಿಸಿ ರವೀಂದ್ರನಾಥ ಅವರಿಗೆ ಮಾಹಿತಿ ನೀಡಿದ್ದರು.
ನವೆಂಬರ್ 15ರಂದು ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಗೆ ನೀಡಿದ ಅಧಿಕೃತ ದೂರಿನಲ್ಲಿ, ತಮ್ಮ ಹಿಂದಿನ ತೋಟದ ವ್ಯವಸ್ಥಾಪಕ ಹಾಗೂ ಪಾಲಕ ಮತ್ತು ಇಬ್ಬರು ಕಾರ್ಮಿಕರು ಅಕ್ರಮವಾಗಿ ತೋಟಕ್ಕೆ ಪ್ರವೇಶಿಸಿ ವಿಷಕಾರಿ ರಾಸಾಯನಿಕ ಸಿಂಪಡಿಸಿದ್ದಾರೆ ಎಂದು ರವೀಂದ್ರನಾಥ ಆರೋಪಿಸಿದ್ದಾರೆ.
ನವೆಂಬರ್ 8ರಿಂದ 11ರ ನಡುವೆ ಈ ಮೂವರು ಅಕ್ರಮವಾಗಿ ತೋಟ ಪ್ರವೇಶಿಸಿದ್ದನ್ನು ಸ್ಥಳೀಯ ಗ್ರಾಮಸ್ಥರು ಗಮನಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ವೈಯಕ್ತಿಕ ದ್ವೇಷವೇ ಈ ಕೃತ್ಯಕ್ಕೆ ಕಾರಣ ಎಂದು ರವೀಂದ್ರನಾಥ ಶಂಕಿಸಿದ್ದಾರೆ.
ಕೋಟ್ಯಂತರ ರೂಪಾಯಿ ಹಣಕಾಸು ಅವ್ಯವಹಾರ ನಡೆದಿರುವುದನ್ನು ಪತ್ತೆಹಚ್ಚಿದ ಹಿನ್ನೆಲೆಯಲ್ಲಿ ಜುಲೈ ತಿಂಗಳಲ್ಲಿ ಹಿಂದಿನ ಪಾಲಕನನ್ನು ಕೆಲಸದಿಂದ ವಜಾಗೊಳಿಸಿ, ತೋಟ ಪ್ರವೇಶಿಸದಂತೆ ನಿರ್ಬಂಧ ವಿಧಿಸಲಾಗಿತ್ತು. ಬಳಿಕ ಸಾಮಾನ್ಯ ಅಧಿಕಾರ ಪತ್ರವನ್ನು ಮತ್ತೊಬ್ಬ ಸ್ಥಳೀಯ ನಿವಾಸಿಗೆ ವರ್ಗಾಯಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
ರಾಸಾಯನಿಕದಿಂದ ಉಂಟಾಗಿರುವ ಹಾನಿ ಎಷ್ಟು ತೀವ್ರವಾಗಿದೆ ಎಂದರೆ ಇಡೀ ತೋಟದಲ್ಲಿ ಮತ್ತೆ ಹೊಸದಾಗಿ ಗಿಡಗಳನ್ನು ನೆಡಬೇಕಾದ ಪರಿಸ್ಥಿತಿ ಎದುರಾಗಬಹುದು. ಇದು ಹಲವು ವರ್ಷಗಳ ಕೃಷಿ ಚಟುವಟಿಕೆಗೆ ದೊಡ್ಡ ಹಿನ್ನಡೆಯಾಗಲಿದೆ” ಎಂದು ಹೇಳಿದ್ದಾರೆ.
ವಿಷಕಾರಿ ಅಂಶಗಳ ತೀವ್ರತೆಯನ್ನು ಕಡಿಮೆ ಮಾಡಲು ತಕ್ಷಣವೇ ಬೆಳೆಗಳ ಮೇಲೆ ನೀರು ಸಿಂಪಡಿಸುವಂತೆ ಕೃಷಿ ತಜ್ಞರು ಸಲಹೆ ನೀಡಿದ್ದಾರೆ. ಆದರೆ, ಬಳಸಿರುವ ರಾಸಾಯನಿಕಗಳಿಂದ ದೀರ್ಘಕಾಲೀನ ಪರಿಸರ ಹಾನಿಯಾಗುವ ಸಾಧ್ಯತೆಯಿದ್ದು, ಮಣ್ಣಿನ ಆರೋಗ್ಯವೂ ಹದಗೆಡಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಆರೋಪಿಗಳ ವಿರುದ್ಧ ಅರಣ್ಯ ಕಾಯ್ದೆಯ ಕಠಿಣ ಕ್ರಿಮಿನಲ್ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಈ ನಡುವೆ ಹಾನಿಯ ಸಮಗ್ರ ಅಂದಾಜು ವರದಿ ಸಲ್ಲಿಸುವಂತೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಮತ್ತೊಂದೆಡೆ, ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಹಾನಿಗೊಳಗಾದ ಗಿಡಗಳ ಎಲೆಗಳ ಮಾದರಿಗಳನ್ನು ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ಪ್ರಯೋಗಾಲಯದ ವರದಿ ಬಂದ ಬಳಿಕವಷ್ಟೇ ತೋಟಕ್ಕೆ ಆಗಿರುವ ಹಾನಿಯ ಪ್ರಮಾಣ ಹಾಗೂ ಸಿಂಪಡಿಸಿರುವ ರಾಸಾಯನಿಕದ ಬಗ್ಗೆ ನಿಖರ ಮಾಹಿತಿ ಲಭ್ಯವಾಗಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.