ಬೆಳಗಾವಿ: ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಡಿ ಅಜ್ಜಿಗೆ ಬರುತ್ತಿದ್ದ ಹಣಕ್ಕಾಗಿ ಮೊಮ್ಮಗನೊಬ್ಬ ತನ್ನ 78 ವರ್ಷದ ಅಜ್ಜಿಯನ್ನೇ ಹತ್ಯೆ ಮಾಡಿ, ಶವವನ್ನು ಎರಡು ಗೋಣಿಚೀಲಗಳಲ್ಲಿ ಕಲ್ಲುಗಳ ಸಮೇತ ಕಟ್ಟಿ ಜಲಾಶಯದ ಹಿನ್ನೀರಿಗೆ ಎಸೆದಿರುವ ಆಘಾತಕಾರಿ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
ಹತ್ಯೆಯಾದ ವೃದ್ಧೆಯನ್ನು ಹುಕ್ಕೇರಿ ತಾಲ್ಲೂಕಿನ ಅರಳಿಕಟ್ಟಿ ಗ್ರಾಮದ ಹಮ್ಮವ್ವ ಬಾಳಪ್ಪ ಸನದಿ 78) ಎಂದು ಗುರುತಿಸಲಾಗಿದೆ. ನವೆಂಬರ್ 10ರಂದು ಪಚ್ಚಾಪುರದ ವಾರದ ಸಂತೆಗೆ ಹೋಗಿ ಬರುವುದಾಗಿ ಮನೆಯಿಂದ ತೆರಳಿದ್ದ ಅವರು ವಾಪಸ್ ಬಂದಿರಲಿಲ್ಲ.
ನವೆಂಬರ್ 15ರಂದು ಜಿನಾರಲ್ ಗ್ರಾಮದ ಸಮೀಪದ ಅಣೆಕಟ್ಟಿನ ಹಿನ್ನೀರಿನಲ್ಲಿ ಎರಡು ಗೋಣಿಚೀಲಗಳಲ್ಲಿ ಕಲ್ಲುಗಳೊಂದಿಗೆ ಕಟ್ಟಿದ್ದ ವೃದ್ಧೆಯ ಶವ ಪತ್ತೆಯಾಗಿತ್ತು.
ಈ ಕುರಿತು ಮೃತಳ ಮಗಳು ಭೀಮವ್ವ ಪರಸಪ್ಪ ಇರನಟ್ಟಿ ನೀಡಿದ ದೂರಿನ ಮೇರೆಗೆ ಯಮಕನಮರಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ಪೊಲೀಸರ ತನಿಖೆಯಲ್ಲಿ ವೃದ್ಧೆಯ ಮೊಮ್ಮಗ ಭೀಮಪ್ಪ ರಾಮಪ್ಪ ಸನದಿ (20) ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಆತನನ್ನು ಬಂಧಿಸಲಾಗಿದೆ.
ಗೃಹಲಕ್ಷ್ಮಿ ಯೋಜನೆಯಡಿ ಅಜ್ಜಿಗೆ ಬರುತ್ತಿದ್ದ ಹಣದಲ್ಲಿ ತನಗೂ ಪಾಲು ನೀಡುವಂತೆ ಭೀಮಪ್ಪ ಕಳೆದ ಕೆಲವು ವರ್ಷಗಳಿಂದ ಜಗಳವಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ನವೆಂಬರ್ 10ರಂದು ಅರಳಿಕಟ್ಟಿ ಗ್ರಾಮದ ಹೊರವಲಯದಿಂದ ತನ್ನ ಬೈಕ್‌ನಲ್ಲಿ ಅಜ್ಜಿಯನ್ನು ಗವಿಸಿದ್ದೇಶ್ವರ ಬೆಟ್ಟಕ್ಕೆ ಕರೆದೊಯ್ದಿದ್ದ ಭೀಮಪ್ಪ, ಅಲ್ಲಿ ಹಣದ ವಿಚಾರವಾಗಿ ಮತ್ತೆ ಜಗಳ ತೆಗೆದಿದ್ದಾನೆ. ಅಜ್ಜಿ ಹಣ ನೀಡಲು ನಿರಾಕರಿಸಿದಾಗ ಆಕೆಯನ್ನು ಕೆಳಕ್ಕೆ ತಳ್ಳಿ ಕೈಗಳಿಂದ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ. ಬಳಿಕ ಹಗ್ಗ ಬಳಸಿ ಮತ್ತೊಮ್ಮೆ ಕತ್ತು ಬಿಗಿದು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೊದಲಿಗೆ ಬೆಟ್ಟದ ಮೇಲೆಯೇ ಶವವನ್ನು ಬಿಟ್ಟು ಪಚ್ಚಾಪುರಕ್ಕೆ ತೆರಳಿದ ಆರೋಪಿ, ಅಲ್ಲಿಂದ ಎರಡು ಗೋಣಿಚೀಲಗಳನ್ನು ತಂದಿದ್ದಾನೆ. ಮೃತಳ ಬಳಿಯಿದ್ದ ₹2,300 ನಗದನ್ನು ತೆಗೆದುಕೊಂಡು, ಶವವನ್ನು ಗೋಣಿಚೀಲಗಳಲ್ಲಿ ತುಂಬಿದ್ದಾನೆ. ಬಳಿಕ ರಾತ್ರಿ ವೇಳೆ ಗೋಣಿಚೀಲಗಳನ್ನು ಬೈಕ್‌ಗೆ ಕಟ್ಟಿ ಜಿನರಾಳ ಗ್ರಾಮದ ಸಮೀಪದ ಘಟಪ್ರಭಾ ನದಿ ಅಣೆಕಟ್ಟಿನ ಹಿನ್ನೀರಿಗೆ ಸಾಗಿಸಿದ್ದಾನೆ.
ಅಲ್ಲದೆ, ಅಜ್ಜಿಯ ಕೊರಳಲ್ಲಿದ್ದ ಎರಡು ಚಿನ್ನದ ಸರಗಳನ್ನು ಕಿತ್ತುಕೊಂಡಿದ್ದಾನೆ. ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಗೋಣಿಚೀಲಗಳೊಳಗೆ ಎರಡು ದೊಡ್ಡ ಕಲ್ಲುಗಳನ್ನು ಹಾಕಿ ಶವದ ಸಮೇತ ನೀರಿಗೆ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.