ಸಂಗ್ರಹ ಚಿತ್ರ 
ರಾಜ್ಯ

ಕೇವಲ 1 ರೂಪಾಯಿ 12 ಪೈಸೆಗಾಗಿ 10 ವರ್ಷ ಕೋರ್ಟ್ ಕೇಸ್: ದಶಕದ ಬಳಿಕ ಔಷಧ ಕಂಪನಿಗೆ ಹೈಕೋರ್ಟ್‌ನಿಂದ ರಿಲೀಫ್..!

2016ರ ಆಗಸ್ಟ್ ತಿಂಗಳಲ್ಲಿ ಬೆಂಗಳೂರಿನ ಮೆಡ್‌ಪ್ಲಸ್ ಮಳಿಗೆಯೊಂದಕ್ಕೆ ತೆರಳಿದ್ದ ಪ್ರಾದೇಶಿಕ ಭಾಷೆಯ ದೂರದರ್ಶನ ವಾಹಿನಿಯ ವರದಿಗಾರರೊಬ್ಬರು 'ಲ್ಯಾನ್ಜೋಲ್ ಜೂನಿಯರ್ 15 ಎಂಜಿ' (Lanzol Junior 15 mg) ಮಾತ್ರೆಗಳನ್ನು ಖರೀದಿಸಿದ್ದರು.

ಬೆಂಗಳೂರು: ಕೇವಲ 1.12 ರೂಪಾಯಿಯ ಹೆಚ್ಚುವರಿ ಹಣ ವಸೂಲಿ ಆರೋಪಕ್ಕೆ ಸಂಬಂಧಿಸಿದಂತೆ ಔಷಧ ಕಂಪನಿಯ ಘಟಕವೊಂದರ ವಿರುದ್ಧ ಕಳೆದ ಒಂದು ದಶಕದಿಂದ ನಡೆಯುತ್ತಿದ್ದ ಕಾನೂನು ಹೋರಾಟಕ್ಕೆ ಕರ್ನಾಟಕ ಹೈಕೋರ್ಟ್ ತೆರೆ ಎಳೆದಿದೆ. ಕಂಪನಿಯ ವಿರುದ್ಧದ ಪ್ರಕರಣದ ವಿಚಾರಣಾ ಪ್ರಕ್ರಿಯೆಯನ್ನು ರದ್ದುಪಡಿಸಿ ನ್ಯಾಯಾಲಯ ಆದೇಶಿಸಿದೆ.

ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರು 2023ರಲ್ಲಿ ರಿಟ್ ಮೆಡ್ಫಾರ್ಮಾ ರಿಟೇಲ್ ಪ್ರೈವೇಟ್ ಲಿಮಿಟೆಡ್‌ನ ಘಟಕವೊಂದರ ಇಬ್ಬರು ನಿರ್ದೇಶಕರು ಮತ್ತು ಪ್ರತಿನಿಧಿ ಸಲ್ಲಿಸಿದ್ದ ಎರಡು ಅರ್ಜಿಗಳನ್ನು ಪುರಸ್ಕರಿಸಿ ಈ ಆದೇಶ ನೀಡಿದ್ದಾರೆ.

ಔಷಧ ಬೆಲೆ ನಿಯಂತ್ರಣ ಆದೇಶ-2013ರ ಕಲಂ 26 ಮತ್ತು ಅಗತ್ಯ ವಸ್ತುಗಳ ಕಾಯ್ದೆ-1955ರ ಸೆಕ್ಷನ್ 7(1)(ಎ)(ii) ಅಡಿಯಲ್ಲಿ ತಮ್ಮ ವಿರುದ್ಧ ನಗರದಲ್ಲಿನ ವಿಚಾರಣಾ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಪ್ರಕ್ರಿಯೆಗಳನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಬೆಂಗಳೂರಿನ ಸಹಾಯಕ ಔಷಧ ನಿಯಂತ್ರಕ-1ರ ಮುಂದೆ ದಾಖಲಾದ ದೂರಿನ ಪ್ರಕಾರ, 2016ರ ಆಗಸ್ಟ್ ತಿಂಗಳಲ್ಲಿ ಬೆಂಗಳೂರಿನ ಮೆಡ್‌ಪ್ಲಸ್ ಮಳಿಗೆಯೊಂದಕ್ಕೆ ತೆರಳಿದ್ದ ಪ್ರಾದೇಶಿಕ ಭಾಷೆಯ ದೂರದರ್ಶನ ವಾಹಿನಿಯ ವರದಿಗಾರರೊಬ್ಬರು 'ಲ್ಯಾನ್ಜೋಲ್ ಜೂನಿಯರ್ 15 ಎಂಜಿ' (Lanzol Junior 15 mg) ಮಾತ್ರೆಗಳನ್ನು ಖರೀದಿಸಿದ್ದರು.

ಇದಾದ ಮೂರು ದಿನಗಳ ಬಳಿಕ ವರದಿಗಾರರು ದೂರು ದಾಖಲಿಸಿದ್ದರು. ಕಂಪನಿಯ ಘಟಕ ನೀಡಿದ್ದ ಬಿಲ್‌ನಲ್ಲಿ ಎಂಟು ಮಾತ್ರೆಗಳಿಗೆ ಹಣ ವಿಧಿಸಲಾಗಿದ್ದರೂ, ಕೇವಲ ಏಳು ಮಾತ್ರೆಗಳನ್ನು ಮಾತ್ರ ಪೂರೈಸಲಾಗಿದೆ. ಈ ಮೂಲಕ ಹೆಚ್ಚುವರಿಯಾಗಿ 1.12 ರೂಪಾಯಿ ವಸೂಲಿ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದರು. ಈ ದೂರಿನ ಆಧಾರದ ಮೇಲೆ ಅರ್ಜಿದಾರರ ವಿರುದ್ಧ ಖಾಸಗಿ ದೂರು ದಾಖಲಿಸಲಾಗಿತ್ತು.

ಅರ್ಜಿದಾರರ ವಿರುದ್ಧ ಅನ್ವಯಿಸಲಾಗಿದ್ದ ಔಷಧ ಬೆಲೆ ನಿಯಂತ್ರಣ ಆದೇಶ-2013ರ ಕಲಂ 26ನ್ನು ಉಲ್ಲೇಖಿಸಿದ ಹೈಕೋರ್ಟ್, ಔಷಧದ ಬೆಲೆ ಪಟ್ಟಿಯಲ್ಲಿ ಅಥವಾ ಅದರ ಪ್ಯಾಕ್‌ನ ಮೇಲಿನ ಲೇಬಲ್‌ನಲ್ಲಿ ನಮೂದಿಸಿರುವ ಬೆಲೆಗಿಂತ ಹೆಚ್ಚಿನ ದರದಲ್ಲಿ ಗ್ರಾಹಕರಿಗೆ ಔಷಧ ಮಾರಾಟ ಮಾಡಿದಾಗ ಮಾತ್ರ ಈ ಕಲಂ ಅನ್ವಯವಾಗುತ್ತದೆ ಎಂದು ಸ್ಪಷ್ಟಪಡಿಸಿದೆ. ಈ ಎರಡರಲ್ಲಿ ಯಾವುದು ಕಡಿಮೆಯೋ ಅದನ್ನೇ ಪರಿಗಣಿಸಬೇಕಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.

ಆದರೆ, ಈ ಪ್ರಕರಣದಲ್ಲಿ ಆರೋಪಿತರು ಎಂಟು ಮಾತ್ರೆಗಳ ಬದಲಿಗೆ ಏಳು ಮಾತ್ರೆಗಳನ್ನು ಪೂರೈಸಿ, ದೂರುದಾರರಿಂದ 1.12 ರೂಪಾಯಿ ಹೆಚ್ಚುವರಿ ಹಣ ಪಡೆದಿದ್ದಾರೆ ಎಂಬುದು ಆರೋಪವಾಗಿದೆ.

ಔಷಧದ ಪ್ಯಾಕ್ ಅಥವಾ ಲೇಬಲ್‌ನಲ್ಲಿ ನಮೂದಿಸಿರುವ ಬೆಲೆಗಿಂತ ಹೆಚ್ಚಿನ ಹಣ ವಸೂಲಿ ಮಾಡಲಾಗಿದೆ ಎಂಬ ಆರೋಪವೇ ಇಲ್ಲ ಎಂದು ನ್ಯಾಯಾಲಯ ಗಮನಿಸಿದೆ.

ಹೀಗಿರುವಾಗ, ಅರ್ಜಿದಾರರ ವಿರುದ್ಧ ಈ ಅಪರಾಧಗಳ ಅಡಿಯಲ್ಲಿ ಕಾನೂನು ಕ್ರಮ ಮುಂದುವರಿಸುವುದರಿಂದ ಅವರಿಗೆ ಅನಗತ್ಯ ಮುಜುಗರ ಉಂಟಾಗುವುದಲ್ಲದೆ, ಕಾನೂನು ಪ್ರಕ್ರಿಯೆಯ ದುರುಪಯೋಗಕ್ಕೂ ಕಾರಣವಾಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಈ ಹಿನ್ನೆಲೆಯಲ್ಲಿ ಅರ್ಜಿಗಳನ್ನು ಪುರಸ್ಕರಿಸಿದ ನ್ಯಾಯಾಲಯ, ಅರ್ಜಿದಾರರ ವಿರುದ್ಧದ ಪ್ರಕರಣದ ವಿಚಾರಣಾ ಪ್ರಕ್ರಿಯೆಗಳನ್ನು ರದ್ದುಪಡಿಸಿ ಆದೇಶಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

1962ರ ಅವಮಾನಕ್ಕೆ ಕ್ಷಮೆ ಕೇಳುತ್ತಾ? 'ಬಡ ರಾಷ್ಟ್ರ'ವಾಗಿ ಕಾಂಗ್ರೆಸ್ ಏಕೆ ಇರಿಸಿತ್ತು; ಭಾರತವನ್ನು 'ಹಾವಾಡಿಗರ ದೇಶ' ಎಂದು ಏಕೆ ಕರೆಯಲಾಗುತ್ತಿತ್ತು?

ಪ್ರತ್ಯೇಕತಾವಾದಿ ಪನ್ನುನ್ ಹತ್ಯೆ ಸಂಚು ವಿಫಲ: ಭಾರತೀಯ ಮೂಲದ ನಿಖಿಲ್ ಗುಪ್ತಾಗೆ 19 ವರ್ಷ ಜೈಲು ಶಿಕ್ಷೆ

20 ವರ್ಷಗಳ ಹಿಂದೆಯೇ 'ಜಗತ್ತಿನ ಅತ್ಯಂತ ಸುಂದರ ಮಹಿಳೆ' ಸೋನಿಯಾ ಗಾಂಧಿ ಪಾತ್ರ ನಿರ್ವಹಿಸಬೇಕಿತ್ತು: ತೆರೆಕಾಣದ ಬಯೋಪಿಕ್, ಯಾರೀ ಸ್ನಿಗ್ಧ ಸುಂದರಿ?

ಶಾಸಕರ ಪಾರ್ಥೀವ ಶರೀರಕ್ಕೆ ಹೆಗಲು ಕೊಟ್ಟ ತಮಿಳುನಾಡು CM: ವಿ.ಎಸ್ ಬಾಬು ಶವಯಾತ್ರೆಯಲ್ಲಿ ಬರಿಗಾಲಿನಲ್ಲಿ ನಡೆದ ವಿಜಯ್!

ನಮ್ಮದೇ ಪಕ್ಷದ ಕೆಲವರಿಗೆ ಹುಚ್ಚು ನಾಯಿ ಕಚ್ಚಿದೆ: ಕಾಂಗ್ರೆಸ್ ಕಾರ್ಯಕರ್ತರು ಅವರನ್ನು ಮೆಂಟಲ್ ಆಸ್ಪತ್ರೆಗೆ ಸೇರಿಸ್ತಾರೆ; ಸಿಎಂ ರೇವಂತ್ ರೆಡ್ಡಿ ಆಕ್ರೋಶ