ಬೆಂಗಳೂರು: ಎತ್ತಿನಹೊಳೆ ಯೋಜನೆ ಸಾಕಾರಗೊಂಡರೆ ತಲೆ ಬೋಳಿಸಿಕೊಳ್ಳುತ್ತೇನೆ ಎಂದು ಎಚ್,ಡಿ ಕುಮಾರಸ್ವಾಮಿ ಹೇಳಿದ್ದರು, ಈಗ ಅವರು ಆ ಕೆಲಸ ಮಾಡ್ತಾರಾ ಎಂದು ಸಚಿವ ಚಲುವರಾಯಸ್ವಾಮಿ ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆಯನ್ನು ಟೀಕಿಸಿದ್ದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ತೀಕ್ಷ್ಣ ತಿರುಗೇಟು ನೀಡಿದ್ದಲ್ಲದೆ, ಭದ್ರಾ ಮೇಲ್ದಂಡೆ ಯೋಜನೆ, ಕಾವೇರಿ ವಿವಾದ ಹಾಗೂ ಹಿರಿಯೂರು ಉಪಚುನಾವಣೆ ಕುರಿತು ಮಹತ್ವದ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
ಎತ್ತಿನಹೊಳೆ ಯೋಜನೆ ಮೂಲಕ ರಾಜ್ಯದ ಹಣ ಅನಾವಶ್ಯಕವಾಗಿ ಪೋಲು ಮಾಡುತ್ತಿದ್ದಾರೆ ಎಂಬ ವಿರೋಧಿಗಳ ಟೀಕೆಗಳು ಈಗ ಎಲ್ಲಿಗೆ ಹೋಗಿವೆ, ಕುಮಾರಸ್ವಾಮಿ ತಮ್ಮ ಹೇಳಿಕೆಗೆ ಬದ್ಧರಾಗಿರುತ್ತಾರಾ ಎಂದು ಪ್ರಶ್ನಿಸಿದ ಅವರು, HDK ತಾವು ನೀಡಿದ್ದ ಹೇಳಿಕೆಯನ್ನು ಮರು ದಿನ ಹೇಳಿಯೇ ಇಲ್ಲ ಎನ್ನುತ್ತಾರೆ. ಕಾವೇರಿ ವಿಚಾರಕ್ಕೆ ಸಂಬಂಧಿಸಿದಂತೆ ಅವರ ತಂದೆ ದೆಹಲಿಗೆ ಪತ್ರ ಬರೆಯುತ್ತಾರೆ, ಇವರು ಸಂದರ್ಭಕ್ಕೆ ತಕ್ಕಂತೆ ಮಾತನಾಡುತ್ತಾರೆ ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ.
ಎತ್ತಿನಹೊಳೆ ಯೋಜನೆಯ ಪ್ರಗತಿಯ ಬಗ್ಗೆ ವಿವರಿಸಿದ ಸಚಿವರು, ಈ ಹಿಂದೆ ಎತ್ತಿನಹೊಳೆ ಯೋಜನೆ ಸಾಧ್ಯವೇ ಇಲ್ಲ, ಇದೊಂದು ರಾಜಕೀಯ ಗಿಮಿಕ್ ಎಂದು ಕೆಲವರು ಅಪಹಾಸ್ಯ ಮಾಡಿದ್ದರು. ಕೋಲಾರಕ್ಕೆ ನೀರು ತಂದರೆ ತಲೆ ಬೋಳಿಸಿಕೊಳ್ಳುತ್ತೇನೆ ಎಂದು ಕುಮಾರಸ್ವಾಮಿ (2015ರಲ್ಲಿ ನೀಡಿದ್ದ ಹೇಳಿಕೆ) ಅವರೂ ಹೇಳಿದ್ದರು.
ಆದರೆ, ಹಲವು ಆರ್ಥಿಕ ಮತ್ತು ತಾಂತ್ರಿಕ ಅಡೆತಡೆಗಳ ನಡುವೆಯೂ ನಾವು ಯೋಜನೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದೇವೆ. ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಘೋಷಣೆಗೆ ನಮ್ಮ ಇಲಾಖೆ ಬದ್ಧವಾಗಿದ್ದು, ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳೊಂದಿಗೆ ನಿರಂತರ ಸಭೆ ನಡೆಸಿ ಒಂದೇ ಒಂದು ದಿನವನ್ನೂ ವ್ಯರ್ಥ ಮಾಡದೆ ಕೆಲಸ ಮಾಡುತ್ತಿದ್ದೇವೆ ಎಂದರು.