ರಾಜ್ಯ

ಬೆಂಗಳೂರು ಟ್ರಾಫಿಕ್‌ಗೆ ಬಿಗ್ ರಿಲೀಫ್: ಕೋಣನಕುಂಟೆ ಕ್ರಾಸ್‌ನಲ್ಲಿ 77 ಕೋಟಿ ರೂ. ವೆಚ್ಚದ ಬೃಹತ್ ಫ್ಲೈಓವರ್ ನಿರ್ಮಾಣಕ್ಕೆ ಸರ್ಕಾರ ಗ್ರೀನ್ ಸಿಗ್ನಲ್..!

ಕೋಣನಕುಂಟೆ ಕ್ರಾಸ್‌ನಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆಗೆ ಕಡಿವಾಣ ಹಾಕಲು ಫ್ಲೈಓವರ್ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಈ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ.

ಬೆಂಗಳೂರು: ದಕ್ಷಿಣ ಬೆಂಗಳೂರಿನ ಅತ್ಯಂತ ಜನನಿಬಿಡ ಜಂಕ್ಷನ್‌ಗಳಲ್ಲಿ ಒಂದಾದ ಕೋಣನಕುಂಟೆ ಕ್ರಾಸ್‌ನಲ್ಲಿ ವಾಹನ ದಟ್ಟಣೆಯನ್ನು ನಿಯಂತ್ರಿಸಲು ಸುಮಾರು ₹77 ಕೋಟಿ ಅಂದಾಜು ವೆಚ್ಚದಲ್ಲಿ 'ಸ್ಪ್ಲಿಟ್-ಟೈಪ್' (Split-type) ಫ್ಲೈಓವರ್ ನಿರ್ಮಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಕೋಣನಕುಂಟೆ ಕ್ರಾಸ್‌ನಲ್ಲಿ ಗೋಡೆಗೆ ಬಣ್ಣ ಬಳಿಯುವ ಮೂಲಕ ವಾರ್ಡ್ ಒನ್ ಅಭಿಯಾನದ ಮೂರನೇ ಹಂತಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಮಾತನಾಡಿದರು. ಈ ವೇಳೆ ಯೋಜನೆಯ ವಿವರಗಳನ್ನು ಹಂಚಿಕೊಂಡರು.

ಕೋಣನಕುಂಟೆ ಕ್ರಾಸ್‌ನಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆಗೆ ಕಡಿವಾಣ ಹಾಕಲು ಫ್ಲೈಓವರ್ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಈ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಹೇಳಿದರು..

ಈ ಭಾಗದಲ್ಲಿ ಸಂಚಾರ ಸುಗಮಗೊಳಿಸಲು ಹಾಗೂ ನಾಗರಿಕ ಮೂಲಸೌಕರ್ಯ ಸುಧಾರಿಸಲು ತಕ್ಷಣದ ಮತ್ತು ದೀರ್ಘಕಾಲೀನ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಿದೆ ಎಂದು ತಿಳಿಸಿದರು.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ 369 ವಾರ್ಡ್‌ಗಳ ಪೈಕಿ ಇದುವರೆಗೆ 124 ವಾರ್ಡ್‌ಗಳಲ್ಲಿ ಅಭಿಯಾನ ಪೂರ್ಣಗೊಂಡಿದೆ ಎಂದರು.

ದೀರ್ಘಕಾಲೀನ ಪರಿಹಾರದ ಭಾಗವಾಗಿ ಬಿ-ಸ್ಮೈಲ್ ಸಂಸ್ಥೆಯು ವಿಭಜಿತ ಮಾದರಿಯ ಫ್ಲೈಓವರ್ ನಿರ್ಮಾಣಕ್ಕೆ ಯೋಜನೆ ಸಿದ್ಧಪಡಿಸಿದೆ. ಜಂಕ್ಷನ್‌ನ ಎರಡೂ ಬದಿಗಳಲ್ಲಿ ತಲಾ ಸುಮಾರು 600 ಮೀಟರ್ ಉದ್ದದ ಮೇಲ್ಸೇತುವೆ ನಿರ್ಮಿಸುವ ಪ್ರಸ್ತಾವನೆ ಇದೆ.

ಫ್ಲೈಓವರ್ ನಿರ್ಮಾಣ ಮತ್ತು ಭೂಸ್ವಾಧೀನ ಸೇರಿದಂತೆ ಯೋಜನೆಗೆ ಸುಮಾರು ₹77 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ಅದನ್ನು ತ್ವರಿತಗೊಳಿಸಿ ಆದಷ್ಟು ಬೇಗ ಕಾಮಗಾರಿ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಫ್ಲೈಓವರ್ ಪೂರ್ಣಗೊಂಡ ಬಳಿಕ ಈ ಮಾರ್ಗದಲ್ಲಿ ಸಿಗ್ನಲ್ ಮುಕ್ತ ಸಂಚಾರಕ್ಕೆ ಅವಕಾಶ ದೊರೆಯಲಿದ್ದು, ವಾಹನ ಸವಾರರು ಪ್ರಸ್ತುತ ಎದುರಿಸುತ್ತಿರುವ ಸಂಚಾರ ದಟ್ಟಣೆ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ತಿಳಿಸಿದರು.

ಇದೇ ವೇಳೆ ಕೋಣನಕುಂಟೆ ಕ್ರಾಸ್‌ನಲ್ಲಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯಿಂದ ಪ್ರಯಾಣಿಕರು ಎದುರಿಸುತ್ತಿರುವ ತೊಂದರೆಗಳನ್ನು ಉಲ್ಲೇಖಿಸಿದ ಸಚಿವರು, ಸಂಚಾರ ನಿರ್ವಹಣೆ ಮತ್ತು ಪಾದಚಾರಿಗಳ ಸುರಕ್ಷತೆ ಸುಧಾರಿಸಲು ತಕ್ಷಣದ ಹಲವು ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ ಎಂದರು.

ಪಾದಚಾರಿ ಮಾರ್ಗಗಳ ಅಭಿವೃದ್ಧಿ, ಜೀಬ್ರಾ ಕ್ರಾಸಿಂಗ್‌ಗಳ ನಿರ್ಮಾಣ, ರಸ್ತೆಗಳಲ್ಲಿ ಸಂಚಾರ ಗೆರೆಗಳು ಮತ್ತು ಬದಿಯ ಗುರುತುಗಳನ್ನು ಹಾಕುವ ಮೂಲಕ ವಾಹನ ಸಂಚಾರದಲ್ಲಿ ಶಿಸ್ತು ಕಾಪಾಡಲು ಹಾಗೂ ಪಾದಚಾರಿಗಳ ಸುರಕ್ಷತೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ವಾಹನ ಸಂಚಾರ ಮತ್ತಷ್ಟು ಸುಗಮಗೊಳಿಸಲು ಫೋರಂ ಮಾಲ್ ಸಮೀಪ ಮೆಟ್ರೋಗೆ ಸೇರಿದ ಜಾಗದ ಒಂದು ಭಾಗವನ್ನು ಪಡೆದು ಉಚಿತ ಎಡತಿರುವು ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮಾಲ್ ಮುಂಭಾಗದಲ್ಲಿರುವ ಅಡ್ಡಿಪಡಿಸುವ ಕಾಂಪೌಂಡ್ ಗೋಡೆಯನ್ನು ತಕ್ಷಣ ತೆರವುಗೊಳಿಸಿ, ಪಾದಚಾರಿ ಮಾರ್ಗ ನಿರ್ಮಿಸುವಂತೆಯೂ ಸೂಚನೆ ನೀಡಲಾಗಿದೆ ಎಂದರು.

ಕೋಣನಕುಂಟೆ ಕ್ರಾಸ್‌ನಲ್ಲಿ ಮೆಟ್ರೋ ನಿಲ್ದಾಣ ನಿರ್ಮಾಣವಾಗುತ್ತಿರುವುದರಿಂದ ಈ ಭಾಗದಲ್ಲಿ ಪಾದಚಾರಿಗಳ ಸಂಚಾರ ಗಣನೀಯವಾಗಿ ಹೆಚ್ಚಾಗುವ ನಿರೀಕ್ಷೆಯಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕಾಗಿ ಸ್ಕೈವಾಕ್ ನಿರ್ಮಿಸುವ ಯೋಜನೆ ರೂಪಿಸುವಂತೆ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಇದೇ ವೇಳೆ ಪ್ರಸ್ತಾವಿತ ಫ್ಲೈಓವರ್ ನಿರ್ಮಾಣಕ್ಕೆ ಯಾವುದೇ ಅಡ್ಡಿಯಾಗದಂತೆ ಸ್ಕೈವಾಕ್ ಕಾಮಗಾರಿಯನ್ನು ಮುಂದುವರಿಸಲು ಸಂಬಂಧಪಟ್ಟ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜಸ್ಥಾನದಲ್ಲಿ ಭೀಕರ ರಸ್ತೆ ಅಪಘಾತ; ನಿಂತಿದ್ದ ಲಾರಿಗೆ ಕ್ರೂಸರ್ ಡಿಕ್ಕಿ, ಒಂದೇ ಕುಟುಂಬದ 9 ಮಂದಿ ದುರ್ಮರಣ..!

ರಣ್ ಆಫ್ ಕಚ್ ಪ್ರವಾಸ ಮುಗಿಸಿ ಮರಳುತ್ತಿದ್ದಾಗ ಘೋರ ದುರಂತ: 3 ತಿಂಗಳ ಕಂದಮ್ಮ ಸೇರಿ ಒಂದೇ ಸೇನಾ ಯೋಧನ ಕುಟುಂಬದ 7 ಮಂದಿ ದುರ್ಮರಣ

ಹಿರಿಯೂರು ಉಪಚುನಾವಣೆಗೆ ರಣಕಹಳೆ: ದಿನಾಂಕ ಘೋಷಣೆಗೂ ಮುನ್ನವೇ ರಂಗೇರಿದ ಅಖಾಡ; ಅನುಕಂಪದ ಅಲೆ v/s ಮೈತ್ರಿ ಬಲ, ಯಾರ ಪಾಲಾಗಲಿದೆ ಕ್ಷೇತ್ರ..?

ಕ್ರಿಕೆಟ್ ಮೈದಾನದಿಂದ ರಾಜಕೀಯ ಅಖಾಡಕ್ಕೆ ಚತುರ್ ಚಾಹಲ್: ಬಿಜೆಪಿ ಒಬಿಸಿ ಮೋರ್ಚಾದಲ್ಲಿ ಸ್ಪಿನ್ ಮಾಂತ್ರಿಕ ಯುಜುವೇಂದ್ರ ಚಾಹಲ್‌ಗೆ ಹೊಸ ಜವಾಬ್ದಾರಿ

ಹಿರಿಯೂರು ಬೈಎಲೆಕ್ಷನ್: ಮೈತ್ರಿ ಪಕ್ಷಗಳಿಗೆ ಮೊದಲ ಪರೀಕ್ಷೆ; ಅಭ್ಯರ್ಥಿ ಆಯ್ಕೆ ಅಮಿತ್ ಶಾ ಕೈಯಲ್ಲಿ, ಯಾರಿಗೆ ಒಲಿಯಲಿದೆ ಟಿಕೆಟ್?